Advertisement

ಎಂಜಿನ್‌ ಬೋರಿಂಗ್  ಹಾಗೆಂದರೇನು? 

12:53 PM Oct 26, 2018 | |

ಕಾರು ಅಥವಾ ಬೈಕ್‌ ಒಂದೇ ಸಮನೆ ಹೊಗೆ ಉಗುಳುತ್ತಿದೆ, ಹಾಕಿದ ಆಯಿಲ್‌ ಬೇಗನೆ ಖಾಲಿಯಾಗುತ್ತಿದೆ. ಎಂಜಿನ್‌ ಶಬ್ದ ಗಡುಸಾಗಿದೆ ಎಂದರೆ ಅದು ಬೋರಿಂಗ್‌ಗೆ ಬಂದಿರಬಹುದು. ಸಾಮಾನ್ಯವಾಗಿ ಕಾರುಗಳಲ್ಲಿ 5/8 ಲಕ್ಷ, ಬೈಕುಗಳಲ್ಲಿ 1/1.5 ಲಕ್ಷ ಕಿ.ಮೀ. ಗೆ ಬೋರಿಂಗ್‌ ಬರುವ ಸಾಧ್ಯತೆಗಳು ಇರುತ್ತವೆ. ಎಂಜಿನ್‌ ಬೋರಿಂಗ್‌ ಮಾಡಿಸದೇ ಹೋದರೆ, ಎಂಜಿನ್‌ ಆರೋಗ್ಯ ಕ್ಷೀಣಗೊಳ್ಳಬಹುದು. ಸೂಕ್ತ ರೀತಿಯ ಕಾರ್ಯನಿರ್ವಹಣೆಗೂ ತೊಡಕಾಗುತ್ತದೆ.

Advertisement

ಸಮಸ್ಯೆ ಏನು?
ಕಾರು ಅಥವಾ ಬೈಕ್‌ಗಳ ಎಂಜಿನ್‌ನಲ್ಲಿರುವ ಸಿಲಿಂಡರ್‌ನ ಒಳಭಾಗದಲ್ಲಿ ಪಿಸ್ಟನ್‌ ಮೇಲಕ್ಕೂ ಕೆಳಕ್ಕೂ ಚಲಿಸುತ್ತಿರುತ್ತದೆ. ಇದು ತೂತಿನಂತೆ ಇದ್ದು ಎಂಜಿನ್‌ ಲಕ್ಷಕ್ಕೂ ಮಿಕ್ಕಿ ಓಡಿಸಿದ ಸಂದರ್ಭದಲ್ಲಿ ಸಹಜವಾಗಿ ಸವೆದಿರುತ್ತದೆ. ಪಿಸ್ಟನ್‌ನ ಗಾತ್ರಕ್ಕೆ ಸರಿಯಾಗಿ ಸಿಲಿಂಡರ್‌ ಸುತ್ತಳತೆಯೂ ಇರಬೇಕಿದ್ದು, ಇದು ಇಂಧನ ದಹಿಸುವ ದಹನಕೂಲಿ ಸ್ಥಳ (ಕಂಬ್ಯೂಷನ್‌ ಚೇಂಬರ್‌) ಸರಿಯಾಗಿ ಮುಚ್ಚುವಂತೆ ಇರಬೇಕು. ಒಂದು ವೇಳೆ ಸಿಲಿಂಡರ್‌ ವ್ಯಾಸ ಅಗಲಗೊಂಡರೆ, ಪಿಸ್ಟನ್‌ ಚಲನೆ ಸಡಿಲವಾಗಿ ಇಂಧನ ಸರಿಯಾಗಿ ದಹನವಾಗದೆ ಹೊಗೆ ಬರುತ್ತದೆ. ಜತೆಗೆ ಆಯಿಲ್‌ ಕೂಡ ಹೆಚ್ಚಿನ ಪ್ರಮಾಣದಲ್ಲಿ ವ್ಯಯವಾಗುತ್ತದೆ. ಪ್ರಮುಖವಾಗಿ ಸಿಲಿಂಡರ್‌ ರಿಂಗ್‌ ತಳೆದಿರುವುದರಿಂದ ಸಿಲಿಂಡರ್‌ ಜತೆಗೆ ಪಿಸ್ಟನ್‌ ನೇರ ಸಂಪರ್ಕಕ್ಕೆ ಬಂದು ಸವೆಯಲು ಕಾರಣವಾಗುತ್ತದೆ. ಈ ಕಾರಣ ಸಿಲಿಂಡರ್‌ ಕೂಡ ಹಾಳಾಗಲು ಕಾರಣವಾಗುತ್ತದೆ.

ರಿಪೇರಿ ಕಷ್ಟ
ಬೋರಿಂಗ್‌ ಮಾಡಿಸುವ ವೇಳೆ ಇದ್ದ ಹಳೆ ಸಿಲಿಂಡರ್‌ ಹೆಡ್‌ ಅನ್ನೇ ರಿಪೇರಿ ಮಾಡುವುದು ಕಷ್ಟ. ಕಾರಣ ಪಿಸ್ಟನ್‌ ಗಾತ್ರಕ್ಕೆ ಅನುಗುಣವಾಗಿ ಒಂದು ಕೂದಲಷ್ಟೂ ಕಡಿಮೆಯಾಗದಂತೆ ಅದರ ಗಾತ್ರ ಇರಬೇಕು. ಜತೆಗೆ ಪಿಸ್ಟನ್‌ಗೆ ಹಾನಿಯಾಗಬಾರದು. ಅತೀವ ವೃತ್ತಿಪರ ಮೆಕ್ಯಾನಿಕ್‌ಗಳಷ್ಟೇ ಇದನ್ನು ಮಾಡಬಲ್ಲರು. ಬೈಕ್‌ಗಳಲ್ಲಿ ಒಂದು ವೇಳೆ ಸಿಲಿಂಡರ್‌ ರಿಪೇರಿ ಮಾಡಿದರೂ ಸರಿಯಾಗದಿದ್ದರೆ ಪಿಕಪ್‌, ಮೈಲೇಜ್‌ ಸಮಸ್ಯೆ ಬರಬಹುದು. ಇದಕ್ಕಾಗಿ ಹೊಸ ಬೋರ್‌ ಹೆಡ್‌ ಅಳವಡಿಸುವುದು ಸೂಕ್ತ. 

ಪರಿಹಾರವೇನು?
ಸಾಧಾರಣವಾಗಿ ಆರೆಂಟು ಲಕ್ಷ ಕಿ.ಮೀ. ಓಡಿಸಿದ ಕಾರುಗಳನ್ನು ರಿಬೋರ್‌ ಮಾಡುವುದು ಕಡಿಮೆ. ಕಾರುಗಳನ್ನು ತುಂಬ ಪ್ರೀತಿಸುವವರು ಮಾತ್ರ ಮತ್ತೆ ಬೋರಿಂಗ್‌ ಮಾಡಿಸಿ ಇಟ್ಟುಕೊಳ್ಳುತ್ತಾರೆ. ಬೈಕ್‌ಗಳನ್ನೂ ಈಗಿನ ದಿನಗಳಲ್ಲಿ ಬೋರಿಂಗ್‌ ಮಾಡಿಸುವುದು ಕಡಿಮೆ. ಬೈಕ್‌ಗಳಲ್ಲಾದರೆ ಹೊಸ ಸಿಲಿಂಡರ್‌ ಹೆಡ್‌ ಅನ್ನು ಅಳವಡಿಸಲಾಗುತ್ತದೆ. ಕಾರುಗಳಲ್ಲಿ ಸಿಲಿಂಡರ್‌ ಬದಲಾವಣೆ ದುಬಾರಿ. ಇದಕ್ಕಾಗಿ ಇರುವ ಸಿಲಿಂಡರ್‌ ಗೆ ಹೊಸ ಲೋಹವನ್ನು ಕೂರಿಸಿ, ವೆಲ್ಡಿಂಗ್‌ ಮಾಡಿ ಪಿಸ್ಟನ್‌ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. 

 ಈಶ

Advertisement
Advertisement

Udayavani is now on Telegram. Click here to join our channel and stay updated with the latest news.

Next