Advertisement

ಯಾವ ಅಸ್ತ್ರ ಬಳಸಬೇಕೆಂದು ಗೊತ್ತಿದೆ

10:08 AM Aug 31, 2017 | |

ಮೈಸೂರು: “ನನ್ನ ಬಳಿಯೂ ಅನೇಕ ಅಸ್ತ್ರಗಳಿವೆ. ಯಾವ ಸಂದರ್ಭದಲ್ಲಿ ಯಾವ ಅಸ್ತ್ರಗಳನ್ನು ಬಳಸಬೇಕೆಂದು ಗೊತ್ತಿದೆ’. -ಹೀಗೆಂದು ಖಡಕ್‌ ಉತ್ತರ ನೀಡಿದ್ದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌. ಬುಧವಾರ  ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ, ತಮ್ಮ ಆಪ್ತ ವಿಜಯ್‌ ಮುಳಗುಂದ ಮನೆ ಮೇಲೆ ನಡೆದ ಆದಾಯ ತೆರಿಗೆ ದಾಳಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಐಟಿ ಅಧಿಕಾರಿಗಳು ದಾಳಿ ನಡೆಸುವುದರ ಬಗ್ಗೆ ತಮ್ಮ ಅಭ್ಯಂತರವಿಲ್ಲ. ಆದರೆ, ಕೇವಲ ಕಾಂಗ್ರೆಸ್‌ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಸರಿಯಲ್ಲ. ನನ್ನ ಬತ್ತಳಿಕೆಯಲ್ಲೂ ಹಲವು ಅಸ್ತ್ರಗಳಿವೆ, ಇದನ್ನು ಸೂಕ್ತ ಸಂದರ್ಭ, ಸನ್ನಿವೇಶ ಬಂದಾಗ ಪ್ರಯೋಗಿಸುತ್ತೇನೆ ಎಂದರು.

Advertisement

ರಾಜಕೀಯವಾಗಿ ಬೆಳೆಯುತ್ತಿದ್ದ ಮುಳಗುಂದ ಅವರು, ಗುಜರಾತ್‌ ಶಾಸಕರು ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ಅವರ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು. 

ಐಟಿ ದಾಳಿ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ: ಸಿಎಂ
ಮೈಸೂರು: ಬಿಜೆಪಿಯವರು ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುವ ಮೂಲಕ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐಟಿ ಅಧಿಕಾರಿಗಳು ಮಾಹಿತಿ ಮೇರೆಗೆ ದಾಳಿ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬಿಜೆಪಿ ನಾಯಕರು ರಾಜಕೀಯ ದುರುದ್ದೇಶದಿಂದ  ಕಾಂಗ್ರೆಸ್‌ ನಾಯಕರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿದ್ದಾರೆ. ಆ ಮೂಲಕ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರ
ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರದು ಸಾಧ್ಯವಿಲ್ಲ ಎಂದರು.  

ಐಟಿ ಅಧಿಕಾರಿಗಳು ನನಗೆ ಮಾತ್ರವಲ್ಲದೆ 73 ಜನರಿಗೆ ಹಗಲು ರಾತ್ರಿ ಕಷ್ಟ ಕೊಟ್ಟಿದ್ದಾರೆ. ಎಲ್ಲಾ ಕಡೆಯಿಂದ ನೀಡುತ್ತಿರುವ ಒತ್ತಡ, ಕಿರುಕುಳ ನಿವಾರಿಸಿಕೊಳ್ಳಲು ಬಂದಿದ್ದೇನೆ. ನನ್ನ ಸ್ನೇಹಿತರು ಚಾಮುಂಡಿ ಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಹೋಮದಲ್ಲಿ ಪಾಲ್ಗೊಂಡು, ದೇವಿಯ ದರ್ಶನ ಪಡೆದಿದ್ದೇನೆ.
ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next