“ಬೇಗ ಬರ್ತಿನಿ ಕಣೇ’ ಎಂದು ಹೋದವನು ಇನ್ನಾದರೂ ಬಂದಿಲ್ಲ. ಮೊದಮೊದಲು ಮಾಡುತ್ತಿದ್ದ ಕಾಲ್, ಮೆಸೇಜ್ ಕೂಡ ಈಗ ನಿಂತು ಹೋಗಿದೆ. ನಂಬರ್ ಬೇರೆ ಬದಲಿಸಿದ್ದೀಯಾ. ಹೇಗೆ ತಲುಪುವುದು ನಿನ್ನ? ಮರೆಯಬೇಕೋ ಅಥವಾ ಕಾಯುತ್ತಿರಬೇಕೋ ಅಂತ ಹೇಳ್ಳೋಕಾದರೂ ಒಂದು ಕರೆ ಮಾಡು.
ಗೆಳೆಯ,
ನಿನ್ನ ನೆನಪು ಆದಾಗಲೆಲ್ಲಾ, ಆ ದಿನವೂ ನೆನಪಾಗುತ್ತದೆ. ಅದು ಪದವಿ ತರಗತಿಯ ಮೊದಲ ದಿನ. ಒಂದು ಕಡೆ ಖುಷಿ, ಇನ್ನೊಂದು ಕಡೆ ಭಯ. ಅಂಜುತ್ತಲೇ ಕ್ಲಾಸ್‌ರೂಂಗೆ ಹೋಗಿ ಕುಳಿತೆ. ಹೊಸ ಪರಿಸರ, ಹೊಸ ಜನ, ಎಲ್ಲವೂ ಹೊಸದು. ಪರಿಚಯದ ಮುಖಕ್ಕಾಗಿ ಕಣ್ಣುಗಳು ಹುಡುಕಾಡುತ್ತಿದ್ದವು. ಹೊಸಬರ ಮಧ್ಯೆ ಅಳುಕುತ್ತಲೇ ದಿನ ಕಳೆದು, ಸಂಜೆಯಾದ ಕೂಡಲೇ ಬ್ಯಾಗ್ ಎತ್ತಿಕೊಂಡು ಹೊರಟೆ.
ಇನ್ನೇನು ಕ್ಯಾಂಪಸ್ ದಾಟಿ ಹೋಗಬೇಕು ಅನ್ನುವಷ್ಟರಲ್ಲಿ, ಯಾವುದೋ ಪರಿಚಿತ ಕಣ್ಣುಗಳು ನನ್ನನ್ನು ನೋಡುತ್ತಿದೆ ಅನ್ನಿಸಿತು. ತಿರುಗಿ ನೋಡಿದರೆ, ಕಣ್ಣಂಚಲ್ಲೇ ನಗುತ್ತಾ ನೀನು, ನನ್ನನ್ನೇ ನೋಡುತ್ತಿದ್ದೆ. ಅದುವರೆಗೂ ನಿನ್ನನ್ನು ನಾನು ನೋಡಿಯೇ ಇರಲಿಲ್ಲ. ಆದರೂ ಆ ನೋಟದಲ್ಲಿ, ಆ ನಗುವಿನಲ್ಲಿ ಪರಿಚಿತ ಭಾವವಿತ್ತು. ನಾ ತಿರುಗಿ ನೋಡಿದ ಕೂಡಲೇ, ಹಳೆಯ ಗೆಳಯನಂತೆ ಮುಗುಳ್ನಗೆ ಬೀರಿದೆ. ಆ ನಗುವನ್ನು ನಿರ್ಲಕ್ಷಿಸಿ ಮುಂದೆ ಹೋಗುವುದು ನಿಜಕ್ಕೂ ಆ ಕ್ಷಣಕ್ಕೆ ಬಹಳ ಕಷ್ಟವಾಯ್ತು.
ನಮ್ಮಿಬ್ಬರ ಮೊದಲ ಭೇಟಿಯಾಗಿದ್ದು ಹಾಗೆ. ಆ ನಂತರ ಅದೆಷ್ಟೋ ತಿಂಗಳು ನಮ್ಮ ಮಾತುಕತೆ ನಡೆದಿದ್ದೆಲ್ಲಾ ಕಣ್ಣಂಚಿನಲ್ಲಿಯೇ ಅಲ್ಲವಾ? ಪರಸ್ಪರ ಮಾತಾಡದಿದ್ದರೂ, ಮಧುರ ಅನುಭೂತಿಯೊಂದು ನಮ್ಮಿಬ್ಬರ ಮಧ್ಯೆ ಸೃಷ್ಟಿಯಾಗಿತ್ತು. ನಾನೇ ಮೊದಲು ನಿನ್ನನ್ನು ಮಾತಾಡಿಸಬೇಕು ಅಂತ ಧೈರ್ಯ ಮಾಡುವಷ್ಟರಲ್ಲಿ, ನೀನೇ ಒಂದು ದಿನ ಸಂಜೆ ನನ್ನನ್ನು ಮಾತಾಡಿಸಿದೆ. ಆ ಕ್ಷಣವಿದೆಯಲ್ಲ, ಸ್ವರ್ಗವೇ ಕೈಗೆ ಸಿಕ್ಕ ಅನುಭವ! ಮುಂದಿನ ಒಂದೆರಡು ವಾರದಲ್ಲೇ ನೀನೇ ಪ್ರೀತಿ ನಿವೇದಿಸಿಕೊಂಡೆ.
ಮುಂದಿನ ಒಂದು ವರ್ಷ, ಮಾತು, ಓಡಾಟ, ನಗು, ಮುನಿಸು, ಹಠ, ಪ್ರೀತಿಯಲ್ಲಿ ಕಳೆದುಹೋಯ್ತು. ಇದೇ ಗುಂಗಿನಲ್ಲಿ ಇಬ್ಬರೂ ಇರುವಾಗಲೇ ನಿನಗೆ ವಿದೇಶದಲ್ಲಿ ಕೆಲಸ ಸಿಕ್ಕಿತು. ನೀನು ಓಡೋಡಿ ಬಂದು ನನಗೆ ವಿಷಯ ತಿಳಿಸಿದೆ. ಅವತ್ತು ನನಗೆಷ್ಟು ಖುಷಿಯಾಗಿತ್ತೋ, ಅಷ್ಟೇ ಅಳು ಬಂದಿತ್ತು ಕೂಡ. ಫಾರಿನ್‌ನಲ್ಲಿ ಕೆಲಸ ಮಾಡ್ಬೇಕು ಅನ್ನೋದು ಅದೆಷ್ಟೋ ಹುಡುಗರ ಕನಸು. ನೀನೂ ಆ ಬಗ್ಗೆ ಕನಸು ಕಂಡಿದ್ದೆ. ಹೇಗೆ ನಿನ್ನನ್ನು ತಡೆಯಲಿ ಹೇಳು?
ಮೊದಲು ನಾನು ಫಾರಿನ್ ಹೋಗಿ ಸೆಟ್ಲ ಆಗ್ತಿನಿ, ನಂತರ ನಿನ್ನನ್ನು ಕರೆಸಿಕೊಳ್ತೀನಿ. ಅಲ್ಲಿವರೆಗೂ ಮೆಸೇಜ್, ಕಾಲ… ಮಾಡ್ತಾ ಇರು ಅಂತ ಹೇಳಿದಾಗ, ನಾನೂ ಆ ಬಗ್ಗೆ ಕನಸು ಕಂಡಿದ್ದೆ. ಒಲ್ಲದ ಮನಸ್ಸಿನಿಂದಲೇ ನಿನಗೆ ಕೈ ಬೀಸಿ, ವಿಮಾನ ಹತ್ತಿಸಿದ್ದೆ. ಹಣೆಗೊಂದು ಮುತ್ತಿಟ್ಟು, “ಬೇಗ ಬರ್ತಿನಿ ಕಣೇ’ ಎಂದು ಹೋದವನು ಇನ್ನಾದರೂ ಬಂದಿಲ್ಲ. ಮೊದಮೊದಲು ಮಾಡುತ್ತಿದ್ದ ಕಾಲ್, ಮೆಸೇಜ್ ಕೂಡ ಈಗ ನಿಂತು ಹೋಗಿದೆ. ನಂಬರ್ ಬೇರೆ ಬದಲಿಸಿದ್ದೀಯಾ. ಹೇಗೆ ತಲುಪುವುದು ನಿನ್ನ? ಮರೆಯಬೇಕೋ ಅಥವಾ ಕಾಯುತ್ತಿರಬೇಕೋ ಅಂತ ಹೇಳ್ಳೋಕಾದರೂ ಒಂದು ಕರೆ ಮಾಡು.
ಇಂತಿ ನಿನ್ನ ದಾರಿ ಕಾಯುತ್ತಿರುವ
ಗಾಯತ್ರಿ ಎಚ್. ಎಂ., ತುಮಕೂರು