ಈ ಬಾರಿಯ ಕ್ರಿಸ್‌ಮಸ್‌ನಲ್ಲಿ ನೀವು ಸೀಕ್ರೆಟ್ ಸಾಂತಾ ಆಡಿದ್ರಾ? ಅದೇ, ರಹಸ್ಯವಾಗಿ ಇನ್ನೊಬ್ಬರಿಗೆ ಗಿಫ್ಟ್ ಕೊಡುತ್ತಾರಲ್ಲ; ಆ ಆಟ. ಅನಾಮಿಕವಾಗಿ ಯಾರಿಗೋ ಗಿಫ್ಟ್ ಕೊಡುವುದು, ಪಡೆಯುವುದು ಎಷ್ಟೊಂದು ಸುಂದರ ಪರಿಕಲ್ಪನೆ ಅಲ್ವಾ? ಆನ್‌ಲೈನ್‌ನಲ್ಲಿಯೂ (ರೆಡ್‌ಇಟ್‌ಗಿಫ್ಟ್$Õ ಸೀಕ್ರೆಟ್ ಸಾಂತ ಎಕ್ಸ್‌ಚೇಂಜ್) ಈ ಆಟ ಆಡುತ್ತಾರೆ. ವಿಶೇಷ ಅಂದ್ರೆ, ಇದರಲ್ಲಿ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಕೂಡಾ ಭಾಗವಹಿಸುತ್ತಾರೆ.
ಜಗತ್ತಿನ ಶ್ರೀಮಂತ ವ್ಯಕ್ತಿಯಿಂದ ಉಡುಗೊರೆ ಪಡೆಯಬೇಕು ಅನ್ನೋ ಆಸೆ ಯಾರಿಗಿಲ್ಲ ಹೇಳಿ? ಅದೇ ಆಸೆಯಿಂದ ಪ್ರತಿ ವರ್ಷವೂ, ಅದೆಷ್ಟೋ ಜನ ಗಿಫ್ಟ್ ಎಕ್ಸ್‌ಚೇಂಜ್‌ನಲ್ಲಿ ಭಾಗವಹಿಸುತ್ತಾರೆ. ಆದ್ರೆ, ವರ್ಷಕ್ಕೊಬ್ಬರಿಗೆ ಮಾತ್ರ ಆ ಅದೃಷ್ಟ ಒಲಿಯೋದು. ಈ ವರ್ಷದ ಅದೃಷ್ಟಶಾಲಿ ಹೆಸರು, ಶೆಲ್ಬಿ. ಅಮೆರಿಕದ 37 ವರ್ಷದ ಈ ಮಹಿಳೆಗೆ, ಬಿಲ್ ಗೇಟ್ಸ್‌ನಿಂದ 37 ಕೆ.ಜಿ. ತೂಕದ ಉಡುಗೊರೆಗಳು ಸಿಕ್ಕಿವೆ. ತನ್ನ “ಸೀಕ್ರೆಟ್ ಸಾಂತ’ ಬಿಲ್ ಗೇಟ್ಸ್ ಅಂತ ಗೊತ್ತಾದಾಗ, ಖುಷಿಯಲ್ಲಿ ಹೃದಯ ಬಡಿತವೇ ನಿಂತ ಹಾಗಾಗಿತ್ತು ಅಂತಾಳೆ ಶೆಲ್ಬಿ. ಅಷ್ಟೇ ಅಲ್ಲ, ಶೆಲ್ಬಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದು, ಆಕೆಯ ಇಷ್ಟ, ಆಸಕ್ತಿಗಳನ್ನು ಅರಿತುಕೊಂಡೇ ಬಿಲ್, ಉಡುಗೊರೆ ಕಳಿಸಿದ್ದಾರಂತೆ.
ಆ ಉಡುಗೊರೆಗಳಲ್ಲಿ ಪುಸ್ತಕಗಳು, ಹ್ಯಾರಿ ಪಾಟರ್ ಸಾಂತ ಟೋಪಿ, ಪಝಲ್ ಆಟಿಕೆಗಳಷ್ಟೇ ಅಲ್ಲ, ಮತ್ತೂಂದು ಅಮೂಲ್ಯ ಗಿಫ್ಟ್ ಕೂಡಾ ಇತ್ತು. ಬಿಲ್ ಗೇಟ್ಸ್, ಶೆಲ್ಬಿಯ ತಾಯಿಯ ಸ್ಮರಣಾರ್ಥ “ಅಮೆರಿಕನ್ ಹಾರ್ಟ್ ಅಸೋಸಿಯೇಷನ್’ಗೆ ಒಂದಷ್ಟು ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ, ಮದುವೆಗೂ ಹತ್ತು ದಿನ ಮೊದಲು ಶೆಲ್ಬಿ, ತಾಯಿಯನ್ನು ಕಳೆದುಕೊಂಡಿದ್ದರು. ಜೊತೆಗೊಂದು ಪತ್ರ ಬರೆದಿರುವ ಬಿಲ್ ಗೇಟ್ಸ್- “ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು, ಯಾವ ಉಡುಗೊರೆಯೂ ಮರೆಸಲಾರದು. ನಿಮ್ಮ ತಾಯಿಯ ಬಗ್ಗೆ ತಿಳಿದು ವಿಷಾದವಾಗುತ್ತಿದೆ. ಅವರ ಸ್ಮರಣಾರ್ಥ ನಾನು ಹಾರ್ಟ್ ಅಸೋಸಿಯೇಷನ್‌ಗೆ ದೇಣಿಗೆ ನೀಡಿದ್ದೇನೆ. ನೀವು ಮತ್ತು ನಿಮ್ಮ ಕುಟುಂಬ, ಆದಷ್ಟು ಬೇಗ ನೋವನ್ನು ಮರೆಯುತ್ತೀರೆಂದು ಆಶಿಸುತ್ತೇನೆ’ ಎಂದಿದ್ದಾರೆ. ಹೌ ಸ್ವೀಟ್, ಅಲ್ವಾ?