ನೀನೀಗ ಇದ್ದಕ್ಕಿದ್ದಂತೆ ನನ್ನನ್ನು ಬಿಟ್ಟು ಹೋಗ್ತಾ ಇದ್ದೀಯ. ನಿಮ್ಮ ಅಪ್ಪನಿಗೆ ಮತ್ತೆ ಟ್ರಾನ್ಸ್‌ಫರ್ ಆರ್ಡರ್ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ನೀನು ಹೊರಡ್ತೀಯ. ಜೀವದ ಭಾಗವೊಂದನ್ನು ಯಾರೋ ಬಲವಂತವಾಗಿ ಕಿತ್ತುಕೊಂಡಷ್ಟೇ ನೋವಾಗುತ್ತಿದೆ. ಎಲ್ಲ ಪಯಣವೂ ಒಂದಲ್ಲ ಒಂದು ಕಡೆ ಮುಗಿಯಲೇಬೇಕಲ್ಲ. ಒಳ್ಳೆಯದಾಗಲಿ, ಅಂತಷ್ಟೇ ಹೇಳಬಲ್ಲೆ ಗೆಳೆಯಾ…
“ನಿಮಗೂ ಕಾಯ್ಕಿಣಿ ಅಂದ್ರೆ ಇಷ್ಟಾನ?’- ನಾ ನಿಂಗೆ ಕೇಳಿದ ಮೊದಲ ಪ್ರಶ್ನೆ ಇದೇ ಅಲ್ವಾ? ಯಾವಾಗಲೂ ನಮ್ಮ ಬಸ್‌ನಲ್ಲಿ ಅಬ್ಬರದ ಸಂಗೀತ ಕೇಳಿ ಕೇಳಿ ಬೇಜಾರಾಗಿದ್ದ ನಂಗೆ, ಅವತ್ತು ಇದ್ದಕ್ಕಿದ್ದಂತೆ ಕಾಯ್ಕಿಣಿಯ ಹಾಡುಗಳು ಕಿವಿಗೆ ಬಿದ್ದಾಗ ಅಚ್ಚರಿಯಾಗಿತ್ತು. ಯಾಕಂದ್ರೆ, ನಮ್ಮ ಕಂಡಕ್ಟರ್ ಅಣ್ಣನ ಟೇಸ್ಟ್ ಎಂಥದ್ದೆಂದು ನಂಗೆ ಚೆನ್ನಾಗಿ ಗೊತ್ತು. ಅವತ್ತು ಬಸ್ಸಿಳಿದು ಹೋಗುವಾಗ ನೀನು, ಕಂಡಕ್ಟರ್‌ನಿಂದ ಪೆನ್‌ಡ್ರೈವ್ ವಾಪಸ್ ತಗೊಂಡಿದ್ದನ್ನು ನೋಡಿದೆ. ನೀನೇ ಹಾಡು ಹಾಕಿಸಿದ್ದು ಅಂತ ಗೊತ್ತಾದರೂ, ನೀನ್ಯಾರಂತ ಗೊತ್ತಾಗಲಿಲ್ಲ. ಮೂರು ವರ್ಷದಿಂದ ಅದೇ ಬಸ್‌ನಲ್ಲಿ ಓಡಾಡ್ತಾ ಇದ್ದರೂ ಒಂದು ದಿನವೂ ನಿನ್ನನ್ನು ನೋಡಿರಲಿಲ್ಲ.
ಆಮೇಲಿಂದ ನೀನು ದಿನಾ ಅದೇ ಬಸ್‌ಗೆ ಬರತೊಡಗಿದೆ. ಕೆಲವೊಂದು ದಿನ ಕಂಡಕ್ಟರ್ ಕೈಗೆ ಪೆನ್‌ಡ್ರೈವ್ ಕೊಟ್ಟು ಹಾಡು ಹಾಕಿಸಿದರೆ, ಇನ್ನೂ ಕೆಲವು ದಿನ ಇಯರ್‌ಫೋನ್ ಹಾಕಿಕೊಂಡು ನಿನ್ನ ಪಾಡಿಗೆ ನೀನಿರುತ್ತಿದ್ದೆ. ಎರಡೂ ಇಲ್ಲದಿದ್ದರೆ ಕೈಯಲ್ಲೊಂದು ಪುಸ್ತಕ. ನಮ್ಮೂರು ಲೈಬ್ರರಿಗೂ ನೀನು ಲಗ್ಗೆಯಿಟ್ಟಾಗಲೇ ಗೊತ್ತಾಗಿದ್ದು, ನೀನು ನಮ್ಮೂರಿನ ಹುಡುಗನೇ ಅಂತ. ಅವತ್ತು “ಬೊಗಸೆಯಲ್ಲಿ ಮಳೆ’ ಪುಸ್ತಕ ತರೋಣ ಅಂತ ಲೈಬ್ರರಿಗೆ ಹೋದರೆ, ಆ ಪುಸ್ತಕವನ್ನು ಯಾರೋ ತಗೊಂಡು ಹೋಗಿದ್ದಾರೆ ಅಂತ ಹೇಳಿದರು. ಎರಡು ದಿನ ಬಿಟ್ಟು ಮತ್ತೆ ಹೋದಾಗ, ನೀನು ಆ ಪುಸ್ತಕವನ್ನು ವಾಪಸ್ ಮಾಡೋಕೆ ಲೈಬ್ರರಿಗೆ ಬಂದಿದ್ದೆ! ಆಗ ಲೈಬ್ರರಿ ರಿಜಿಸ್ಟರ್‌ನಲ್ಲಿ, ನಿನ್ನ ಹೆಸರು ನೋಡಿದೆ. ಕನ್ನಡದಲ್ಲಿಯೇ ಸಹಿ ಮಾಡಿದ್ದನ್ನು ನೋಡಿ, ಇವನ್ಯಾರೋ ನನ್ನಂತೆಯೇ ಕನ್ನಡಪ್ರೇಮಿ ಅಂತ ಗೊತ್ತಾಯ್ತು. ಇನ್ನೇನು ಲೈಬ್ರರಿಯಿಂದ ಹೊರ ಹೋಗುತ್ತಿದ್ದ ನಿನ್ನನ್ನು ನಿಲ್ಲಿಸಿ- “ನಿಮೂY ಕಾಯ್ಕಿಣಿ ಅಂದ್ರೆ ಇಷ್ಟಾನ?’ ಅಂತ ಕೇಳಿದ್ದೆ. ಆಗ ನೀನು, ಹೌದು, ನಿಮಗೂ ಇಷ್ಟಾನ? ಅಂತ ಕೇಳಿದ್ದೆ. ಇತ್ತೀಚೆಗೆ ನಿಮ್ಮ ತಂದೆಗೆ ವರ್ಗವಾಗಿ ಈ ಊರಿಗೆ ಬಂದಿರುವ ವಿಚಾರವನ್ನು ತಿಳಿಸುತ್ತಲೇ, ನಿನ್ನ ಪರಿಚಯ ಮಾಡಿಕೊಂಡೆ.
ಆಮೇಲೆ ಬಸ್ಸು, ಲೈಬ್ರರಿ, ಹಾಡು, ಪುಸ್ತಕ ಅಂತ ಪದೇ ಪದೆ ಸಂಧಿಸಿದ ನಾವಿಬ್ಬರೂ ಒಳ್ಳೆಯ ಸ್ನೇಹಿತರಾದೆವು. ಒಟ್ಟಿಗೆ ಹಾಡು ಕೇಳಿದೆವು, ಓದಿದ ಪುಸ್ತಕಗಳ ಬಗ್ಗೆ ಚರ್ಚಿಸಿದೆವು, ಹರಟಿದೆವು, ಭಾವನೆಗಳನ್ನು ಹಂಚಿಕೊಂಡೆವು… ಇಷ್ಟೆಲ್ಲಾ ನೆನಪುಗಳನ್ನು ನೀಡಿದ ನೀನೀಗ ಇದ್ದಕ್ಕಿದ್ದಂತೆ ನನ್ನನ್ನು ಬಿಟ್ಟು ಹೋಗ್ತಾ ಇದ್ದೀಯ. ನಿಮ್ಮ ಅಪ್ಪನಿಗೆ ಮತ್ತೆ ಟ್ರಾನ್ಸ್‌ಫರ್ ಆರ್ಡರ್ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ನೀನು ಹೊರಡ್ತೀಯ. ಜೀವದ ಭಾಗವೊಂದನ್ನು ಯಾರೋ ಬಲವಂತವಾಗಿ ಕಿತ್ತುಕೊಂಡಷ್ಟೇ ನೋವಾಗುತ್ತಿದೆ. ಆದರೇನು ಮಾಡಲಿ, ಎಲ್ಲ ಪಯಣವೂ ಒಂದಲ್ಲ ಒಂದು ಕಡೆ ಮುಗಿಯಲೇಬೇಕಲ್ಲ. ಒಳ್ಳೆಯದಾಗಲಿ, ಅಂತಷ್ಟೇ ಹೇಳಬಲ್ಲೆ ಗೆಳೆಯಾ. ಎಲ್ಲೇ ಇರು, ಖುಷಿಖುಷಿಯಾಗಿರು…
– ರೋಹಿಣಿ