ಮುಂಬಯಿ, ಫೆ. 3: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ 76ನೇ ವಾರ್ಷಿಕ ಮಹಾಪೂಜೆಯನ್ನು ಜ. 30ರಂದು ಸರಕಾರದ ಕೋವಿಡ್ ನಿಯಮವನ್ನು ಪಾಲಿಸಿ ಮಂದಿರದ ವಠಾರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಬೆಳಗ್ಗೆ ಪುರೋಹಿತ ಹೆಜಮಾಡಿ ಹರೀಶ್ ಶಾಂತಿಯವರ ಪೌರೋಹಿತ್ಯದಲ್ಲಿ ಮಂದಿರ ಶುದ್ಧೀಕರಣ, ಗಣಪತಿಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು.
ವಿಶ್ವನಾಥ ಭಂಡಾರಿ ದಂಪತಿ ಪೂಜಾ ವ್ರತ ಕೈಗೊಂಡಿದ್ದರು. ವೆಸ್ಟರ್ನ್ ಇಂಡಿಯಾ ಭಜನ ಮಂಡಳಿ, ವಿದ್ಯಾದಾಯಿನಿ ಭಜನ ಮಂಡಳಿಯ ಸದಸ್ಯರಿಂದ ಭಜನೆ, ಭುವಾಜಿ ಸತೀಶ್ ಕೋಟ್ಯಾನ್ ಅವರಿಂದ ಕಲಶ ಪ್ರತಿಷ್ಠೆ ನಡೆದು ಸಮಿತಿಯ ಸದಸ್ಯರಿಂದ ಹಾಗೂ ವಿವಿಧ ಮಂಡಳಿಗಳ ಆಹ್ವಾನಿತ ಸದಸ್ಯರಿಂದ ಶನಿ ಗ್ರಂಥ ಪಾರಾಯಣ ನಡೆಯಿತು.
ಈ ಸಂಧರ್ಭ ಸಮಿತಿಯ ಗೌರವಾಧ್ಯಕ್ಷ ಹಾಗೂ ಮುಂಬಯಿ ಬಿಲ್ಲವರ ಅಸೋಸಿ ಯೇಶನಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಜಿ. ಅಮೀನ್ ಹಾಗೂ ಐರೋಲಿಯ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಕೋಶಾಧಿಕಾರಿ ಬಂಟ್ವಾಳ ಗಂಗಾಧರ ಎಸ್. ಬಂಗೇರ ಅವರನ್ನು ಸಮಿತಿಯ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಪ್ರಸಾದ ನೀಡಿ ಗೌರವಿಸಿದರು.
ನೆರೂಲ್ ಶ್ರೀ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್ ಪೂಜಾರಿ, ಉದ್ಯಮಿ ಪ್ರಶಾಂತ್ ಅಮೀನ್, ಸಾಯಿ ಶ್ರದ್ಧಾ ಕ್ಯಾಟರರ್ಸ್‌ನ ಶಂಕರ ಪೂಜಾರಿ, ಸ್ಥಳೀಯ ಮಾಜಿ ನಗರಸೇವಕ ಗಣೇಶ್ ಸನಪ್ ಸಹಿತ ಹಲವಾರು ಗಣ್ಯರು, ಉದ್ಯಮಿಗಳು, ಪರಿಸರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಮಹಾಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಮಹಾ ಆರತಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಮಿತಿಯ ಅಧ್ಯಕ್ಷ ಜೆ. ಜೆ. ಕೋಟ್ಯಾನ್ ಪೂಜಾ ಕಾರ್ಯದಲ್ಲಿ ಸಹಕರಿಸಿದ ಸರ್ವ ರಿಗೂ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ರವಿ ಸಾಲ್ಯಾನ್, ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ, ಕೋಶಾಧಿಕಾರಿ ಶರತ್ ಜಿ. ಪೂಜಾರಿ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ಪೂಜಾ ಕಾರ್ಯದಲ್ಲಿ ಸಹಕರಿಸಿದರು.