ಬೆಂಗಳೂರು: ಪಶ್ಚಿಮ ಘಟ್ಟದ ಜೀವ- ಜೀವನೋ ಪಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಸೆ. 25ರಂದು ಕೇಂದ್ರ ಸರಕಾರಕ್ಕೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬುಧವಾರ ಬೆಂಗಳೂರಿನ ಅರಣ್ಯ ಭವನದಲ್ಲಿ ರಾಷ್ಟ್ರೀಯ ಹುತಾತ್ಮರ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯ ಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುತ್ಛ ಸಮರ್ಪಿಸಿ ಅವರು ಮಾತನಾಡಿದರು. ಪಶ್ಚಿಮ ಘಟ್ಟ ಹಲವು ನದಿಗಳ ಮೂಲ ವಷ್ಟೇ ಅಲ್ಲದೆ ಸಸ್ಯ, ಪ್ರಾಣಿ, ಕೀಟ, ಪಕ್ಷಿ ಸಂಕುಲದ ನೆಲೆಯಾಗಿದೆ. ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಸೆ. 19ರಂದು ಪಶ್ಚಿಮ ಘಟ್ಟ ವ್ಯಾಪ್ತಿಯ ಜಿಲ್ಲೆಗಳ ಪ್ರತಿನಿಧಿ ಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಸೆ. 20ರಂದು ಸಚಿವ ಸಂಪುಟದ ಉಪ ಸಮಿತಿಯ ಸಭೆಯಲ್ಲಿ ಚರ್ಚಿಸಿ, ಸೆ. 21 ಮುಖ್ಯಮಂತ್ರಿಯವರ ಜತೆಗೆ ಸಮಾಲೋಚಿಸಿದ ಬಳಿಕ ಸಚಿವ ಸಂಪುಟದ ಅನುಮೋದನೆ ಪಡೆಯಲಾಗುತ್ತದೆ. ಅನಂತರ ಪಶ್ಚಿಮ ಘಟ್ಟದ ಜೀವ-ಜೀವನೋಪಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕೇಂದ್ರ ಸರಕಾರಕ್ಕೆ ರಾಜ್ಯದ ನಿಲುವು ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಸಚಿವರು ಹೇಳಿದ್ದು
-ಪಶ್ಚಿಮ ಘಟ್ಟದ ಸಂರಕ್ಷಣೆ ನಮ್ಮೆಲ್ಲರ ಹೊಣೆ
-ಪಶ್ಚಿಮ ಘಟ್ಟ ವೈವಿಧ್ಯಮಯ ಜೀವಿ ಸಂಕುಲದ ನೆಲೆ
-ಇದೇ 19ರಂದು ಜಿಲ್ಲೆಗಳ ಪ್ರತಿನಿಧಿಗಳ ಜತೆ ಚರ್ಚೆ
-ಸೆ. 20ರಂದು ಸಚಿವ ಸಂಪುಟ ಉಪಸಮಿತಿ ಸಭೆ
-21ರಂದು ಮುಖ್ಯಮಂತ್ರಿ ಜತೆ ಸಮಾಲೋಚನೆ