Advertisement

ಅಪಾಯದಿಂದ ಪಾರಾಗಿಲ್ಲ ಪಶ್ಚಿಮ ಘಟ್ಟ ! ಐಯುಸಿಎನ್‌ ವರದಿಯಿಂದ ಬಹಿರಂಗ

12:00 AM Dec 07, 2020 | sudhir |

ಕೊಚ್ಚಿ: ಯುನೆಸ್ಕೋದಿಂದ “ವಿಶ್ವ ನೈಸರ್ಗಿಕ ಪರಂಪರೆಯ ತಾಣ’ವಾಗಿ ಗುರುತಿಸಲ್ಪಟ್ಟಿರುವ ಪಶ್ಚಿಮ ಘಟ್ಟವು ನಗರೀಕರಣ, ಜನಸಂಖ್ಯೆಯ ಒತ್ತಡ ಮತ್ತು ಹವಾಮಾನ ಬದಲಾವಣೆಗಳಿಂದ ಅಪಾಯಕ್ಕೊಳಗಾಗಿದೆ. ಅದರ ಸಂರಕ್ಷಣೆಯ ಪ್ರಯತ್ನದಲ್ಲಿ ಹೆಚ್ಚು ಯಶಸ್ಸು ಸಿಕ್ಕಿಲ್ಲ ಎಂದು ನಿಸರ್ಗ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ (ಐಯುಸಿಎನ್‌)ವು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

Advertisement

ವಿಶ್ವದ 252 ವಿಶ್ವ ನೈಸರ್ಗಿಕ ಪರಂಪರೆಯ ತಾಣಗಳಲ್ಲಿ ಅವುಗಳ ದೀರ್ಘ‌ಕಾಲಿಕ ಸಂರಕ್ಷಣೆಯ ದೃಷ್ಟಿಯಿಂದ ಯೋಗ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ಐಯುಸಿಎನ್‌ ಈ “ದಿ ಐಯುಸಿಎನ್‌ ವರ್ಲ್ಡ್
ಹೆರಿಟೇಜ್‌ ಔಟ್‌ಲುಕ್‌-3′ ವರದಿಯನ್ನು ಸಿದ್ಧಪಡಿಸಿದೆ. ಕಳೆದ ವಾರ ಇದು ಬಿಡುಗಡೆಯಾಗಿದ್ದು, 2014 ಮತ್ತು 2017ರ ವರದಿಗಳನ್ನು ಆಧರಿಸಿದೆ.

ವಿಶ್ವದ ಎಂಟು ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಕೈಗೊಳ್ಳಲಾಗಿರುವ ಸಂರಕ್ಷಣ ಉಪಕ್ರಮಗಳು ಸಮ ರ್ಪಕವಾಗಿಲ್ಲ ಎಂದು 2020ರ ವರದಿ ಅಭಿಪ್ರಾಯಪಟ್ಟಿದೆ .

ಪಶ್ಚಿಮ ಘಟ್ಟ ಶ್ರೇಣಿಯ ಜೀವವೈವಿಧ್ಯದ ಮೇಲೆ ಅಭಿವೃದ್ಧಿ, ನಗರೀಕರಣ ಮತ್ತು ಜನಸಂಖ್ಯಾ ಹೆಚ್ಚಳ ಒತ್ತಡ ಹೇರುತ್ತಿದ್ದು, ಇದರಿಂದ ವನ್ಯಜೀವಿ ಕಾರಿಡಾರ್‌ಗಳ ವಿಸ್ತಾರ ಕಡಿಮೆಯಾಗುತ್ತಿದೆ ಮತ್ತು ಸಂರಕ್ಷಿತ ಪ್ರದೇಶದ ಹೊರಗೆ ವನ್ಯಜೀವಿಗಳಿಗೆ ಆವಾಸಸ್ಥಳಗಳ ಕೊರತೆ ಉಂಟಾಗುತ್ತಿದೆ ಎಂದು ವರದಿ ಹೇಳಿದೆ. ಪಶ್ಚಿಮ ಘಟ್ಟದಲ್ಲಿರುವ ಜೀವವೈವಿಧ್ಯದ ಮೇಲೆ ಘಟ್ಟಶ್ರೇಣಿಯ ಒಳಗೆ ಮತ್ತು ಸುತ್ತಮುತ್ತ ಇರುವ ಜನಸಂಖ್ಯೆಯು ಅಪಾರ ಒತ್ತಡ ಹೇರುತ್ತಿದೆ. ಗಮನಾರ್ಹ ಜಾಗತಿಕ ಮೌಲ್ಯವನ್ನು ಹೊಂದಿರುವ ಈ ವಿಶ್ವ ನೈಸರ್ಗಿಕ ಪರಂಪರೆಯ ತಾಣವು ಅನೇಕ ಅಪಾಯಗಳನ್ನು ಎದುರಿಸುತ್ತಿದ್ದು, ಅವುಗಳನ್ನು ನಿವಾರಿಸಿ ಘಟ್ಟಶ್ರೇಣಿಯನ್ನು ಸಂರಕ್ಷಿಸುವುದಕ್ಕಾಗಿ ರಾಜಕೀಯ, ಸಮಾಜಶಾಸ್ತ್ರೀಯ ಮತ್ತು ಜೀವಶಾಸ್ತ್ರೀಯ ಸ್ತರಗಳಲ್ಲಿ ಸಂಯೋಜಿತ ಪ್ರಯತ್ನ ನಡೆಯಬೇಕಾಗಿದೆ ಎಂದು ವರದಿ ಹೇಳಿದೆ. ಈಗಾಗಲೇ ಒತ್ತಡ ಮತ್ತು ಅಪಾಯದಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಯ ಸಂಕೀರ್ಣ ಜೀವವ್ಯವಸ್ಥೆ ಮತ್ತು ಸಂರಚನೆಯನ್ನು ಹವಾಮಾನ ಬದಲಾವಣೆಯು ಇನ್ನಷ್ಟು ದುರ್ಬಲಗೊಳಿಸಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ.

ರಾಜಕೀಯ ಇಚ್ಛಾಶಕ್ತಿ ಬೇಕು
ಪಶ್ಚಿಮ ಘಟ್ಟ ಶ್ರೇಣಿಯು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ವ್ಯಾಪಿಸಿದ್ದು, ಇಷ್ಟು ರಾಜ್ಯ ಸರಕಾರಗಳ ನಡುವೆ ಸಮನ್ವಯ ಇರಬೇಕಾಗಿರುವುದರಿಂದ ರಾಜಕೀಯವಾಗಿ ಅದರ ಸಂರಕ್ಷಣೆ ಮತ್ತು ನಿರ್ವಹಣೆಯ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಕಠಿನ. ಅಲ್ಲಿನ ಮೂಲ ಅರಣ್ಯ ಸಂಪತ್ತಿನಲ್ಲಿ ಶೇ. 40ರಷ್ಟು ಈಗಾಗಲೇ ನಾಶವಾಗಿದೆ ಎಂದು ವರದಿಯಲ್ಲಿ ಹೇಳಿದೆ.

Advertisement

ವರದಿ ಹೇಳಿರುವ ಅಪಾಯಗಳೇನು?
– ಹೊಸ ರಸ್ತೆ ನಿರ್ಮಾಣ, ಹಾಲಿ ರಸ್ತೆಗಳ ವಿಸ್ತರಣೆ
– ಕೃಷಿ ವಿಸ್ತರಣೆ, ಜಲವಿದ್ಯುತ್‌ ಘಟಕಗಳ ಸ್ಥಾಪನೆ
– ಜಾನುವಾರು ಮೇಯಿಸುವುದು, ಅರಣ್ಯ ವಿಭಾಗೀಕರಣ
– ಹವಾಮಾನ ಬದಲಾವಣೆ

ಪಶ್ಚಿಮ ಘಟ್ಟ ಏಕೆ ಮುಖ್ಯ ?
– ವಿಶ್ವದ 8 ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿ ಒಂದು
– ಅಪಾಯದಂಚಿನ ಕನಿಷ್ಠ 325 ಜೀವಸಂಕುಲಗಳ ನೆಲೆ
– ಹಿಮಾಲಯಕ್ಕಿಂತ ಪುರಾತನ
– ದೇಶದ ಮಾನ್ಸೂನನ್ನು ನಿರ್ಧರಿಸುತ್ತದೆ

ಕಾರಿಡಾರ್‌ ವಿಫ‌ಲ
ವನ್ಯಜೀವಿ ಕಾರಿಡಾರ್‌ ಗುರುತಿಸಲಾಗಿದೆ. ಆದರೆ ಅವುಗಳ ಸಂರಕ್ಷಣೆಗೆ ಸುಸ್ಥಿರ – ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಪೆರಿಯಾರ್‌-ಅಗಸ್ತ್ಯಮಲೈ ಶ್ರೇಣಿಯ ಅರಿಯಂಕಾವು ಕಾರಿಡಾರ್‌ ಇದಕ್ಕೆ ಉದಾಹರಣೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next