Advertisement
ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ದ ಈ ಕುರಿತ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದು, ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡುವ ಕೇಂದ್ರದ ಕರಡು ಅಧಿಸೂಚನೆಗೆ ನಮ್ಮ ವಿರೋಧವಿದೆ ಎಂಬುದನ್ನು ಮತ್ತೂಮ್ಮೆ ಸ್ಪಷ್ಟಪಡಿಸಿದೆ. ಉನ್ನತ ಮಟ್ಟದ ಕಾರ್ಯನಿರತ ತಂಡವು ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮಘಟ್ಟಗಳ ಪ್ರದೇಶವನ್ನು ನಿಗದಿಪಡಿಸಿದೆ ಎಂಬುದು ರಾಜ್ಯ ಸರಕಾರದ ವಾದ. ಅಷ್ಟೇ ಅಲ್ಲದೆ, ಈಗಾಗಲೇ ವಿವಿಧ ಕಾನೂನುಗಳ ಅಡಿಯಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು ಸಂರಕ್ಷಿಸು ತ್ತಿರುವುದರಿಂದ ಈ ವರದಿಯ ಅನುಷ್ಠಾನ ಬೇಕಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರವು ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು 2024ರ ಜು. 31ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು. ಡಾ| ಕೆ. ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ರಾಜ್ಯದ 20,688 ಚದರ ಕಿಲೋಮೀಟರ್ ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪದೋಷಗಳ ತಿದ್ದುಪಡಿ ಅನಂತರ ಇದರ ಪ್ರಮಾಣವು 19,252.70 ಚ.ಕಿ.ಮೀ.ಗೆ ಇಳಿದಿತ್ತು. ಈಗಾಗಲೇ ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ, ಪರಿಸರ ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ 16,036.72 ಚ.ಕಿ.ಮೀ. ಪ್ರದೇಶವನ್ನು ರಾಜ್ಯದಲ್ಲಿ ಸಂರಕ್ಷಿಸಲಾಗುತ್ತಿದೆ. ವಯನಾಡು ದುರಂತ; ಮರುಚಿಂತನೆಯ ಮಾತು
ಈ ಹಿಂದೆ ಕೇರಳದ ವಯನಾಡಿನಲ್ಲಿ ದುರಂತ ಸಂಭವಿಸಿದಾಗ ಕಸ್ತೂರಿ ರಂಗನ್ ವರದಿ ಬಗ್ಗೆ ಮರುಚಿಂತನೆ ನಡೆಸುವ ಅವಶ್ಯಕತೆ ಇದೆ, ನಮ್ಮಲ್ಲೂ ರೆಸಾರ್ಟ್, ಹೋಂ ಸ್ಟೇಗಳ ತೆರವು ಕಾರ್ಯ ಆಗಬೇಕಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದರು. ಪಶ್ಚಿಮಘಟ್ಟ ಪ್ರದೇಶದ ಜನಪ್ರತಿನಿಧಿಗಳ ಸಭೆಯಲ್ಲಿ 10 ಜಿಲ್ಲೆಗಳ 1,499 ಗ್ರಾಮಗಳಿಗೆ ಈ ವರದಿಯಿಂದ ಕಷ್ಟವಾಗಲಿದ್ದು, ಯಾವುದೇ ಕಾರಣಕ್ಕೂ ಇದನ್ನು ಒಪ್ಪಬಾರದೆಂದು ಪಕ್ಷಾತೀತವಾಗಿ ಆಗ್ರಹ ವ್ಯಕ್ತವಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ಸಂಪುಟ ಉಪಸಮಿತಿ ಹಾಗೂ ಸೆ. 27ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ನಿರ್ಣಯ ಕೈಗೊಳ್ಳಲಾಗಿತ್ತು.