Advertisement

ರೋಚ್ ವೇಗಕ್ಕೆ ತತ್ತರಿಸಿದ ಭಾರತ

02:20 AM Aug 23, 2019 | Team Udayavani |

ನಾರ್ತ್‌ಸೌಂಡ್‌ (ಆ್ಯಂಟಿಗುವಾ): ಆತಿಥೇಯ ವೆಸ್ಟ್‌ ಇಂಡೀಸ್‌ ಎದುರಿನ ‘ವಿಶ್ವಕಪ್‌ ಚಾಂಪಿಯನ್‌ಶಿಪ್‌ ಟೆಸ್ಟ್‌’ ಪಂದ್ಯವನ್ನು ಭಾರತ ಆತಂಕಕಾರಿಯಾಗಿಯೇ ಆರಂಭಿಸಿದೆ. ಇಲ್ಲಿನ ‘ಸರ್‌ ವಿವಿಯನ್‌ ರಿಚರ್ಡ್ಸ್‌ಸ್ಟೇಡಿಯಂ’ನಲ್ಲಿ ಗುರುವಾರ ಮೊದಲ್ಗೊಂಡ ಪಂದ್ಯದಲ್ಲಿ ತೀವ್ರ ಕುಸಿತ ಅನುಭವಿಸಿದ ಕೊಹ್ಲಿ ಪಡೆ, ಭೋಜನ ವಿರಾಮದ ವೇಳೆ 3 ವಿಕೆಟ್ ನಷ್ಟಕ್ಕೆ 68 ರನ್‌ ಮಾಡಿದೆ.

Advertisement

ಈ 3 ವಿಕೆಟ್‌ಗಳು 25 ರನ್‌ ಆಗುವಷ್ಟರಲ್ಲಿ ಉದುರಿ ಹೋಗಿದ್ದವು. 5ನೇ ಓವರಿನಲ್ಲಿ ಘಾತಕವಾಗಿ ಪರಿಣಮಿಸಿದ ವೇಗಿ ಕೆಮರ್‌ ರೋಚ್ 5 ಎಸೆತಗಳಲ್ಲಿ ಮಾಯಾಂಕ್‌ ಅಗರ್ವಾಲ್ (5) ಮತ್ತು ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ (2) ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಆಗ ಭಾರತ ಕೇವಲ 7 ರನ್‌ ಮಾಡಿತ್ತು.

ನಾಯಕ ವಿರಾಟ್ ಕೊಹ್ಲಿ ಅವರಿಂದಲೂ ಈ ಕುಸಿತಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. 8ನೇ ಓವರ್‌ ವೇಳೆ ಸ್ಕೋರ್‌ 25ಕ್ಕೆ ಏರಿದಾಗ ಶಾನನ್‌ ಗ್ಯಾಬ್ರಿಯಲ್ ಭಾರತದ ಕಪ್ತಾನನ್ನು ಕೆಡವಿದರು. ಕೊಹ್ಲಿ ಗಳಿಕೆ 9 ರನ್‌.

ಬಂಡೆಯಾಗಿ ನಿಂತ ರಾಹುಲ್
ಆದರೆ ಮತ್ತೂಬ್ಬ ಆರಂಭಕಾರ ಕೆ.ಎಲ್. ರಾಹುಲ್ ವಿಂಡೀಸ್‌ ದಾಳಿಗೆ ಬಂಡೆಯಾಗಿ ನಿಂತಿದ್ದಾರೆ. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾದ ಅವರು 37 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದಕೊಂಡಿದ್ದಾರೆ. 73 ಎಸೆತಗಳ ಈ ಜವಾಬ್ದಾರಿಯುತ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಸೇರಿದೆ.

ರಾಹುಲ್ ಅವರೊಂದಿಗೆ 10 ರನ್‌ ಮಾಡಿರುವ ಅಜಿಂಕ್ಯ ರಹಾನೆ ಆಡುತ್ತಿದ್ದಾರೆ. ರಕ್ಷಣಾತ್ಮಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆದ ರಹಾನೆ 43 ಎಸೆತ ಎದುರಿಸಿದ್ದು, 2 ಬೌಂಡರಿ ಹೊಡೆದಿದ್ದಾರೆ. ಇವರಿಬ್ಬರ 16.1 ಓವರ್‌ಗಳ ಜತೆಯಾಟದಲ್ಲಿ 43 ರನ್‌ ಒಟ್ಟುಗೂಡಿದೆ.

Advertisement

ಮಳೆಯಿಂದಾಗಿ ಇಲ್ಲಿನ ಪಿಚ್ ವಿಪರೀತ ಬೌನ್ಸ್‌ ಆಗುತ್ತಿದ್ದು, ವೇಗಿಗಳಿಗೆ ಭಾರೀ ನೆರವು ನೀಡುತ್ತಿದೆ.

ರೋಹಿತ್‌ಗೆ ಅವಕಾಶವಿಲ್ಲ
ಭಾರತ ಈ ಪಂದ್ಯದಿಂದ ರೋಹಿತ್‌ ಶರ್ಮ, ಸಾಹಾ, ಅಶ್ವಿ‌ನ್‌, ಕುಲದೀಪ್‌ ಮತ್ತು ಉಮೇಶ್‌ ಯಾದವ್‌ ಅವರನ್ನು ಹೊರಗಿರಿಸಿತು. ಕರ್ನಾಟಕದ ಜೋಡಿಯಾದ ಕೆ.ಎಲ್. ರಾಹುಲ್-ಮಾಯಾಂಕ್‌ ಅಗರ್ವಾಲ್ ಇನ್ನಿಂಗ್ಸ್‌ ಆರಂಭಿಸಿತು.

ವಿಂಡೀಸ್‌ ಪರ ಲೆಗ್‌ ಸ್ಪಿನ್ನರ್‌ ಶಮರ್‌ ಬ್ರೂಕ್ಸ್‌ ಟೆಸ್ಟ್‌ ಪದಾರ್ಪಣೆ ಮಾಡಿದರು. ಇವರಿಗೆ ಕ್ರಿಕೆಟ್ ಲೆಜೆಂಡ್‌ ರಿಚರ್ಡ್ಸ್‌ ‘ಟೆಸ್ಟ್‌ ಕ್ಯಾಪ್‌’ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next