ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಐಪಿಎಲ್ ಸ್ಟಾರ್ ಯೂಸುಫ್ ಪಠಾಣ್ ಅವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಬರೋಡಾ ಆಟಗಾರ ಯೂಸುಫ್ ಪಠಾಣ್ ಅವರು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ರಂಗಪ್ರವೇಶಕ್ಕೆ ಇಳಿದಿದ್ದು, ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.
ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಯೂಸುಫ್ ಪಠಾಣ್ ಸ್ಪರ್ಧಿಸಲಿದ್ದಾರೆ. ಬರ್ಹಾಂಪೋರ್ ಕ್ಷೇತ್ರದಲ್ಲಿ ಯೂಸುಫ್ ಟಿಎಂಸಿ ಚಿಹ್ನೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರು ರವಿವಾರ ಖಚಿತಪಡಿಸಿದ್ದಾರೆ.
ಬರ್ಹಾಂಪೋರ್ ಕ್ಷೇತ್ರದಿಂದ ಪಠಾಣ್ ಅವರನ್ನು ಕಣಕ್ಕಿಳಿಸುವ ಮೂಲಕ ಟಿಎಂಸಿ ಕೂಡ ಕಾಂಗ್ರೆಸ್ ಗೆ ಮಹತ್ವದ ಸವಾಲನ್ನು ಒಡ್ಡಿದೆ. ಪ್ರಸ್ತುತ ಲೋಕಸಭೆ ಸ್ಥಾನವನ್ನು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೊಂದಿದ್ದಾರೆ. ಕಾಂಗ್ರೆಸ್ ಇನ್ನೂ ರಾಜ್ಯಕ್ಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದಿದ್ದರೂ, ಚೌಧರಿ ಮತ್ತೊಮ್ಮೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.
ಟಿಎಂಸಿ ಬುರ್ದ್ವಾನ್ ದುರ್ಗಾಪುರ ಕ್ಷೇತ್ರದಿಂದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಮತ್ತು ಅಸನ್ಸೋಲ್ ಕ್ಷೇತ್ರದಿಂದ ಮಾಜಿ ನಟ ಶತ್ರುಘ್ನ ಸಿನ್ಹಾ ಅವರನ್ನು ಕಣಕ್ಕಿಳಿಸಿದೆ.
ಪಕ್ಷವು ಈ ಬಾರಿ ಮಿಮಿ ಚಕ್ರವರ್ತಿ ಮತ್ತು ನುಸ್ರತ್ ಜಹಾನ್ ಅವರನ್ನು ಕಣಕ್ಕಿಳಿಸಲಿಲ್ಲ. ಮಿಮಿ ಚಕ್ರವರ್ತಿ ಅವರು ರಾಜಕೀಯದಿಂದ ಹೊರಗುಳಿಯುವ ಮೂಲಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದರೆ, ಸಂದೇಶಖಾಲಿ ಹಿಂಸಾಚಾರದ ಕುರಿತು ಅವರ ಹೇಳಿಕೆಗಳಿಂದಾಗಿ ನುಸ್ರತ್ ಜಹಾನ್ ಕೂಡಾ ಸೀಟು ಪಡೆಯಲು ವಿಫಲರಾಗಿದ್ದಾರೆ.
ಕೃಷ್ಣನಗರ ಕ್ಷೇತ್ರದಿಂದ ಮಹುವಾ ಮೊಯಿತ್ರಾ ಅವರು ಟಿಎಂಸಿ ಟಿಕೆಟ್ ಪಡೆದಿದ್ದಾರೆ. ಪ್ರಶ್ನೆಗಾಗಿ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ನೀತಿಶಾಸ್ತ್ರ ಸಮಿತಿಯ ವರದಿಯ ನಂತರ ಮಹುವಾ ಮೊಹಿತ್ರಾ ಅವರನ್ನು ಡಿಸೆಂಬರ್ 8 ರಂದು ಲೋಕಸಭೆಯ ಸಂಸದ ಸ್ಥಾನದಿಂದ ಹೊರಹಾಕಲಾಗಿತ್ತು.