ಕೋಲ್ಕತ್ತಾ: ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದೆಲ್ಲೆಡೆ ಸುದ್ದಿಯಾಗಿ ಮರೆಯಾಗುವ ಮುನ್ನವೇ ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲೇ ಮತ್ತೊಂದು ಹೇಯ ಘಟನೆ ನಡೆದಿರುವುದು ವರದಿಯಾಗಿದೆ.
ಆಸ್ಪತ್ರೆಯ ಉದ್ಯೋಗಿಯೊಬ್ಬರು ಸಿಟಿ ಸ್ಕ್ಯಾನ್ ಕೊಠಡಿಯಲ್ಲಿ 13 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣ ಹೌರಾ ಆಸ್ಪತ್ರೆಯಲ್ಲಿ ನಡೆದಿರುವುದು ವರದಿಯಾಗಿದೆ.
ಏನಿದು ಘಟನೆ?: ಶಿಬ್‌ಪುರದ ನಿವಾಸಿಯಾಗಿರುವ 13 ವರ್ಷದ ಬಾಲಕಿಯನ್ನು ನ್ಯುಮೋನಿಯಾದಿಂದ ಬಳಲುತ್ತಿದ್ದು,ಆಗಸ್ಟ್ 28 ರಂದು ಹೌರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ(ಆ.31 ರಂದು) ರಾತ್ರಿ ಆಕೆಯನ್ನು ಸಿಟಿ ಸ್ಕ್ಯಾನ್‌ಗೆ ಕರೆದೊಯ್ಯಲಾಗಿತ್ತು.
ಬಾಲಕಿಯನ್ನು ಆಸ್ಪತ್ರೆಯ ಸಿಟಿ ಸ್ಕ್ಯಾನ್ ವಿಭಾಗದಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ಅಮನ್ ರಾಜ್ ಎನ್ನುವ ಉದ್ಯೋಗಿ ಕೋಣೆಯೊಳಗೆ ಕರೆದುಕೊಂಡು ಹೋಗಿದ್ದಾನೆ.
ಸ್ಕ್ಯಾನ್ ಮಾಡಿದ ನಂತರ, ಬಾಲಕಿ ಅಳುತ್ತಾ ಹೊರಬಂದು ಇನ್ನೊಬ್ಬ ರೋಗಿಯ ಸಂಬಂಧಿಕರ ಸಹಾಯವನ್ನು ಕೇಳಿದ್ದಾಳೆ. ಏನಾಯಿತೆಂದು ವಿಚಾರಿಸಿದಾಗ ಸಿಟಿ ಸ್ಕ್ಯಾನ್ ಮಾಡಿಸಿದ ಉದ್ಯೋಗಿ ಕಿರುಕುಳ ನೀಡಿದ್ದರ ಬಗ್ಗೆ ಹೇಳಿದ್ದಾಳೆ.
ಆರೋಪಿಯು ಸಿಟಿ ಸ್ಕ್ಯಾನ್ ಕೊಠಡಿಯಲ್ಲಿ ತನ್ನ ಮಗಳಿಗೆ ಕಿಸ್ ಮಾಡಿದ್ದಾನೆ. ಆಕೆಯ ಪ್ಯಾಂಟ್ ಅನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಆ ಬಳಿಕ ಅಶ್ಲೀಲ ವಿಡಿಯೋ ನೋಡಿದ್ದೀಯಾ ಎಂದು ಕೇಳಿದ್ದಾನೆ. ಕಿರುಚಬೇಡ ಕಿರುಚಿದರೆ ಇಂಜೆಕ್ಷನ್ ನೀಡುತ್ತೇನೆ ಎಂದಿದ್ದಾನೆ ಎಂದು ಘಟನೆ ಬಗ್ಗೆ ಬಾಲಕಿಯ ತಾಯಿ ಹೇಳಿದ್ದಾರೆ.
ಬಾಲಕಿಯ ತಾಯಿ ಆರೋಪಿಯನ್ನು ಎದುರಿಸಿದಾಗ ಹೆಚ್ಚಿನ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಟಿ ಸ್ಕ್ಯಾನ್ ಆಪರೇಟರ್ ತಾಯಿಯ ಮೇಲೆ ಆಣೆ ಹಾಕಿ ಆರೋಪವನ್ನು ನಿರಾಕರಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸಂತ್ರಸ್ತೆಯ ಕುಟುಂಬದವರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಹೌರಾ ಪೊಲೀಸರು ಆರೋಪಿ ಅಮನ್ ರಾಜ್ ನನ್ನು ಪ್ರತಿಭಟನಾನಿರತ ಗುಂಪಿನಿಂದ ರಕ್ಷಿಸಿ, ಬಾಲಕಿ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಿದ್ದಾರೆ. ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಕೀಯ ಮುಖಂಡರು ಆರೋಪಿ ಸಿಕ್ಕಿಬಿದ್ದ ವಿಡಿಯೋವನ್ನು ಹಂಚಿಕೊಂಡು ಸಿಎಂ ಮಮತಾರನ್ನು ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.