Advertisement

ಪಶ್ಚಿಮ ಬಂಗಾಲದಲ್ಲಿ ಗಾಯದ ಮೇಲಿನ ರಾಜಕೀಯ

02:52 PM Mar 20, 2021 | Team Udayavani |

ಪಶ್ಚಿಮ ಬಂಗಾಲ ರಾಜಕೀಯಕ್ಕೂ ದಾಳಿಗಳಿಗೂ ಅವಿನಾಭಾವ ಸಂಬಂಧ. ವಿಶೇಷವೆಂದರೆ ಮಮತಾ ಬ್ಯಾನರ್ಜಿ ಅವರ ರಾಜ­ಕೀಯ ಜರ್ನಿ ಆರಂಭವಾಗುವುದೇ ಅವರ ಮೇಲಿನ ಒಂದು ಹಲ್ಲೆಯಿಂದ. ಈ ಬಾರಿಯೂ ಅಷ್ಟೇ, ಆಕಸ್ಮಿಕ ಘಟನೆಯನ್ನು “ರಾಜಕೀಯ ದಾಳಿ’ ಎಂಬ ದಾಳ ಉರುಳಿಸಿ ರಾಜಕೀಯ ಪಗಡೆ­ಯಾಡಲು ಮಮತಾ ಬ್ಯಾನರ್ಜಿ ಮುಂದಾಗಿದ್ದರು, ಆದರೆ ಚುನಾವಣ ಆಯೋಗ ಇದೊಂದು ಆಕಸ್ಮಿಕ ಘಟನೆ ಎಂದು ಪ್ರಕಟಿಸುವ ಮೂಲಕ ಇಡೀ ಪ್ರಕರಣಕ್ಕೆ ಅಂತ್ಯ ಹಾಡಿದೆ.
ಆದರೆ ಮಮತಾ ಗಾಯಗೊಂಡ ಹುಲಿಯಾಗಿದ್ದಾರೆ, ಏಕೆಂದರೆ, ಅದೇ ಗಾಯವನ್ನು ಮುಂದಿಟ್ಟುಕೊಂಡು ಈಗ ಗಾಲಿ ಕುರ್ಚಿಯಲ್ಲೇ ಪ್ರಚಾರ ಆರಂಭಿಸಿದ್ದಾರೆ. ನಂದಿಗ್ರಾಮದಲ್ಲಿ ಮಮತಾಗೆ ಆದ ಗಾಯ ಬಲುಬೇಗ ಗುಣವಾಗಬಹುದು; ಆದರೆ ಅದು ಚುನಾವಣೆ ತನಕ ಮಾಯುವುದು ಟಿಎಂಸಿ ಕಾರ್ಯಕರ್ತರಿಗೆ ಬೇಕೂ ಆಗಿಲ್ಲ.

Advertisement

ಮಮತಾ ಪ್ರಚಾರದ ವೇಳೆ ನಡೆದ ದುರ್ಘ‌ಟನೆ ರಾಜಕೀಯ ದಾಳಿ ಎಂದು ಪ್ರಚುರವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಈ “ಹಲ್ಲೆಗೆ’ ಬಿಜೆಪಿಯೇ ಕಾರಣ ಎಂದು ಟಿಎಂಸಿ ಆರೋಪಿಸಿದ್ದರೆ, ಬೇಕಾದರೆ ಸಿಬಿಐ ತನಿಖೆಯಾಗಲಿ, ಈ ಹಲ್ಲೆ ಬಗ್ಗೆ ಸತ್ಯ ಹೊರಬರಲಿ ಎಂದು ಬಿಜೆಪಿ ಹೇಳಲಾರಂಭಿಸಿತು. ಇದಕ್ಕೂ ವಿಶೇಷವೆಂದರೆ ಹಲ್ಲೆಯಾದ ದಿನ ಯಾರೋ ನಾಲ್ಕೈದು ಮಂದಿ ದಾಳಿ ಮಾಡಿದ್ದಾರೆ ಎಂದಿದ್ದ ಮಮತಾ, ಮಾರನೇ ದಿನ ವೀಡಿಯೋ ಸಂದೇಶದಲ್ಲಿ ಇದೊಂದು ಅಪಘಾತ ಎಂದು ಬಿಟ್ಟರು. ಇದೀಗ ಚುನಾವಣ ಆಯೋಗವೇ ಇದೊಂದು ಆಕಸ್ಮಿಕ ಘಟನೆ ಎಂದು ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.

ಆದರೆ ಇದೊಂದು ಗಾಯದ ಘಟನೆ ಸದ್ಯಕ್ಕೆ ಮಾಯುವ ಲಕ್ಷಣ ಇಲ್ಲ. ಹಿಂದಿನಿಂದಲೂ ಮಮತಾ ಇಂಥ ಗಾಯಗಳ ಮೂಲಕವೇ ತಮ್ಮ ರಾಜಕೀಯ ದಿಕ್ಕನ್ನು ಕಂಡುಕೊಂಡವರು.

ಅದೊಂದು ಘಟನೆ…
1990 ಆ.16. ಇದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೀವನದಲ್ಲಿಯೇ ಮರೆಯಲಾ­ರದ ದಿನ. ಅಂದು ದಕ್ಷಿಣ ಕೋಲ್ಕತಾದ ಹಜ್ರಾ ಕ್ರಾಸಿಂಗ್‌ ಬಳಿ ದೊಡ್ಡ ಪ್ರತಿಭಟನೆ. ಇದರ ನೇತೃತ್ವ ವಹಿಸಿದ್ದವರು ಆಗಿನ್ನು ಯುವ ನೇತಾರರೆನಿಸಿಕೊಂಡಿದ್ದ, ಯಂಗ್‌ ಫೈರ್‌ ಬ್ರಾಂಡ್‌ ಎಂದೇ ಖ್ಯಾತರಾಗಿದ್ದ ಮಮತಾ ಬ್ಯಾನರ್ಜಿ. ಆದರೆ ಆಗಿನ್ನೂ ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳ ಆರ್ಭಟ, ಜೋರು ಹೆಚ್ಚಾಗಿಯೇ ಇತ್ತು. ಹೀಗಾಗಿಯೇ ಇಂಥ ಪ್ರತಿಭಟನೆಗಳನ್ನು ಸಹಿಸದ ಆ ಪಕ್ಷದ ಕಾರ್ಯಕರ್ತನೊಬ್ಬ ಅದೆಲ್ಲಿಂದಲೋ ಒಂದು ಲಾಠಿ ಹಿಡಿದು ಮಮತಾ ಬ್ಯಾನರ್ಜಿಯವರತ್ತ ನುಗ್ಗಿ, ಅವರ ತಲೆಗೈ ಬಲವಾದ ಏಟು ಕೊಟ್ಟಿದ್ದ.

ಒಂದು ರೀತಿಯಲ್ಲಿ ಈ ಘಟನೆ ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನ ತೆರೆದುಕೊಂಡಿತಾದರೂ ಅಂದು ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಅವರ ಪ್ರಾಣವೇ ಹೋಗುವ ಸಂಭವವಿತ್ತು. ಅಂದಿನ ಘಟನೆ ಅನಂತರ ಬಹಳಷ್ಟು ದಿನ ಆಸ್ಪತ್ರೆಯಲ್ಲೇ ಇದ್ದ ಮಮತಾ ಸುಧಾರಿಸಿಕೊಂಡು ಆಚೆ ಬಂದಿದ್ದರು. ಅಂದಿನ ಘಟನೆಯಿಂದಾಗಿ ಮಮತಾ ಅವರ ಹೆಸರು ಇಡೀ ಪಶ್ಚಿಮ ಬಂಗಾಲಕ್ಕೇ ಪಸರಿಸಿತ್ತು. ರಾಜ್ಯದ ಮಾಸ್‌ ಲೀಡರ್‌ ಎಂದೇ ಗುರುತಿಸಿಕೊಂಡಿದ್ದ ಎ.ಬಿ.ಎ. ಘನಿ ಖಾನ್‌ ಚೌಧರಿ, ಪ್ರಿಯರಂಜನ್‌ ದಾಸ್‌ ಮುನ್ಶಿ ಮತ್ತು ಸೋಮನ್‌ ಮಿತ್ರಾ ಅವರ ಸಾಲಿಗೆ ನಿಲ್ಲಿಸಿತ್ತು.

Advertisement

ಇದಾದ ಒಂದು ವರ್ಷದ ಅನಂತರ ನಡೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸಿಪಿಎಂನ ಹಿರಿಯ ನಾಯಕರೊಬ್ಬರನ್ನು ಭಾರೀ ಅಂತರದಲ್ಲಿ ಸೋಲಿಸಿದ್ದರು. ದೀದಿ ಮೇಲಿನ ಹಲ್ಲೆ ಘಟನೆ ಜನರ ಮನಸ್ಸನ್ನು ಬದಲಾವಣೆ ಮಾಡಿತ್ತು. ಹೀಗಾಗಿಯೇ ಮಮತಾ ಗೆಲುವು ಸರಾಗವಾಗಿತ್ತು.

ಇದಾದ ಅನಂತರ 1993ರ ಜನವರಿಯಲ್ಲಿ ಪಶ್ಚಿಮ ಬಂಗಾಲದ ಕಾಂಗ್ರೆಸ್‌ ಯುವ ಮೋರ್ಚಾದ ಅಧ್ಯಕ್ಷರಾಗಿದ್ದ ಮಮತಾ ಬ್ಯಾನರ್ಜಿ ಅವರು ಸಿಪಿಎಂನ ಕಾರ್ಯಕರ್ತನೊಬ್ಬ ದಿವ್ಯಾಂಗ ಯುವತಿ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭವತಿ­ಯಾಗಲು ಕಾರಣನಾಗಿದ್ದಾನೆ. ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿ ರೈಟರ್ಷ್‌ ಬಿಲ್ಡಿಂಗ್‌(ಆಗಿನ ವಿಧಾನಸಭೆ)ಗೆ ಅಪಾರ ಕಾರ್ಯಕರ್ತರ ಜತೆ ಮುತ್ತಿಗೆ ಹಾಕಿದ್ದರು. ಆಗಿನ ಸಿಎಂ ಜ್ಯೋತಿ ಬಸು ಅವರು ಈ ಘಟನೆಯಿಂದ ಸಂಪೂರ್ಣ ವಿಚಲಿತರಾಗಿದ್ದರು. 2 ಗಂಟೆಗಳ ಕಾಲ ಪೊಲೀಸರು ಮಮತಾ ಜತೆಗೆ ಸಂಧಾನ ನಡೆಸಿದ್ದಾದರೂ ಅವರು ಅಲ್ಲಿಂದ ತೆರಳಿರಲಿಲ್ಲ. ಕಡೆಗೆ ಪೊಲೀಸರು ಮಮತಾ ಅವರ ಕೂದಲು ಹಿಡಿದು ಹೊರಗೆ ಎಳೆದೊಯ್ದಿದ್ದರು.

ಇನ್ನು 1993ರ ಜುಲೈ. ಮಮತಾ ಬ್ಯಾನರ್ಜಿ ಅವರು ವೋಟರ್‌ ಐಡಿ ಕಾರ್ಡ್‌ನಲ್ಲಿ ಫೋಟೋ ಹಾಕಬೇಕು ಎಂದು ಒತ್ತಾಯಿಸಿ ರೈಟರ್ಷ್‌ ಬ್ಯುಲ್ಡಿಂಗ್‌(ಆಗಿನ ವಿಧಾನಸಭೆ)ನತ್ತ ದೊಡ್ಡ­ದೊಂದು ರ್ಯಾಲಿ ನಡೆಸಿದ್ದರು. ಈ ರ್ಯಾಲಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಗೋಲಿಬಾರ್‌ ಕೂಡ ನಡೆಸಿದ್ದರು. ಆಗ 14 ಯುವ ಕಾರ್ಯಕರ್ತರು ಸಾವನ್ನಪ್ಪಿದ್ದು ಅಷ್ಟೇ ಅಲ್ಲ, ಮಮತಾ ಅವರೂ ಗಂಭೀರವಾಗಿ ಗಾಯಗೊಂಡಿದ್ದರು.

ಇವಿಷ್ಟು ಘಟನೆಗಳೂ ಮಮತಾ ಬ್ಯಾನರ್ಜಿ ಅವರ ರಾಜಕೀಯ ದಿಕ್ಕನ್ನೇ ಬದಲಿಸಿದ್ದರೆ, ಸಿಪಿಎಂ ರಾಜಕೀಯಕ್ಕೆ ಅಂತ್ಯ­ವಾಡಿತ್ತು. ವಿಚಿತ್ರವೆಂದರೆ ಮಮತಾ ಬ್ಯಾನರ್ಜಿ ಅವರ ಮೇಲಿನ ದಾಳಿ ಅಷ್ಟಕ್ಕೇ ನಿಂತಿರಲಿಲ್ಲ. 2011ರಲ್ಲಿ ಪಶ್ಚಿಮ ಬಂಗಾ ಲಕ್ಕೆ ಸಿಎಂ ಆಗುವವರೆಗೆ ಮುಂದುವರಿದೇ ಇದ್ದವು. ಎಷ್ಟೋ ಬಾರಿ, ಕೂದಲೆಳೆಯ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದರು.
ಪ್ರತೀ ಗಾಯದಲ್ಲೂ ಮಮತಾ ಬ್ಯಾನರ್ಜಿ ಅವರ ರಾಜಕೀಯ ಶಕ್ತಿ ಇಮ್ಮಡಿಯಾಗುತ್ತಿತ್ತು. ಸಿಪಿಎಂ ಮತ್ತು ಕಾಂಗ್ರೆಸ್‌ನ ಶಕ್ತಿ ಕಡಿಮೆಯಾಗುತ್ತಿತ್ತು.

ಈಗ ಇನ್ನೊಂದು ಗಾಯ…
ವಿಶೇಷವೆಂದರೆ ಪ್ರಸ್ತುತದಲ್ಲಿ ಪಶ್ಚಿಮ ಬಂಗಾಲಕ್ಕೆ ಮಮತಾ ಬ್ಯಾನರ್ಜಿ ಅವರು ಅನಭಿಷಿಕ್ತ ರಾಣಿಯಂತೆ ಇದ್ದಾರೆ. ಇಲ್ಲಿ ಅವರ ನಾಯಕತ್ವ ಪ್ರಶ್ನಿಸುವ ಮಾತೇ ಇಲ್ಲ. ಆದರೆ 2019ರ ಲೋಕಸಭೆ ಚುನಾವಣ ಫ‌ಲಿ ತಾಂಶ ಮಮತಾ ಬ್ಯಾನರ್ಜಿ ಅವರಲ್ಲಿ ಎಲ್ಲೋ ಒಂದು ರೀತಿಯ ರಾಜಕೀಯ ಅಸ್ಥಿರತೆ ಕಾಡಲು ಶುರು ಮಾಡಿದ್ದು ಸುಳ್ಳಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಂಥ ಸಾಧನೆಯನ್ನೇನೂ ಮಾಡಲ್ಲ ಅಂದುಕೊಂಡಿದ್ದ ಮಮತಾಗೆ, ಬಿಜೆಪಿ 18 ಸ್ಥಾನ ಗೆದ್ದು ಶಾಕ್‌ ನೀಡಿತ್ತು. ಈ ಮೂಲಕ ರಾಜ್ಯದಲ್ಲಿ ತಳವೂರುತ್ತಿರುವ ಸ್ಪಷ್ಟ ಸಂದೇಶವನ್ನೂ ನೀಡಿತ್ತು.

ಲೋಕಸಭೆ ಚುನಾವಣೆಯಾದ ಮೇಲೆ ತನ್ನ ಬೇರು ಭದ್ರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಟಿಎಂಸಿಯ ಹಲವಾರು ನಾಯಕರನ್ನು ತನ್ನತ್ತ ಸೆಳೆದುಕೊಂಡಿದೆ. ಲೆಕ್ಕಾಚಾರದಲ್ಲಿ ಲೋಕಸಭೆಗಿಂತ ಈಗ ಇನ್ನಷ್ಟು ಸ್ಟ್ರಾಂಗ್‌ ಆಗಿದೆ. ಅದರಲ್ಲೂ ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯ ಜೀವನ ಕೊಟ್ಟ ನಂದಿಗ್ರಾಮದಲ್ಲಿನ ಬಲಿಷ್ಠವೆನಿಸಿರುವ “ಅಧಿಕಾರಿ’ ಕುಟುಂಬ ಬಿಜೆಪಿಯತ್ತ ವಾಲಿದೆ. ನಂದಿಗ್ರಾಮದಿಂದ ಹಿಡಿದು ಇಲ್ಲಿವರೆಗೆ ಮಮತಾ ಅವರ ಬೆನ್ನಿಗೆ ನಿಂತಿದ್ದ ಸುವೇಂದು ಅಧಿಕಾರಿ ಈಗ ಬಿಜೆಪಿಯಲ್ಲಿದ್ದಾರೆ. ನಂದಿಗ್ರಾಮದಲ್ಲಿ ಸುವೇಂದು ಮತ್ತು ಮಮತಾ ದೀದಿ ಸ್ಪರ್ಧೆ ಮಾಡುತ್ತಿದ್ದಾರೆ.

ಹೇಳಿ ಕೇಳಿ, ನಂದಿಗ್ರಾಮ ಸುವೇಂದು ಅವರ ತವರು ಭೂಮಿ ಮತ್ತು ಇಲ್ಲಿ ಅವರ ಕುಟುಂಬ ತುಂಬಾ ಶಕ್ತಿ ಶಾಲಿಯಾಗಿದೆ. ಹೀಗಾಗಿ ಏನಾದರೂ ಮಾಡಿ ಗೆಲ್ಲಲೇಬೇಕು ಅಂತ ಮಮತಾ ಅವರು ಈಗ ಗಾಯದ ಮೊರೆ ಹೋಗುತ್ತಿದ್ದಾರೆ ಎನ್ನುವುದು ಬಿಜೆಪಿಯ ನೇರ ಆರೋಪ. ದಾಳಿ ಎಂದರೆ ನಂಬಲಾಗದ ಸ್ಥಿತಿ ಪಶ್ಚಿಮ ಬಂಗಾಲದಲ್ಲೇನಿಲ್ಲ. ಅಲ್ಲಿ ರಾಜಕೀಯ ದಾಳಿಗಳೇ ಹಲವು ಬಾರಿ ನಿರ್ಣಾಯಕ ಆಗಿದ್ದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್‌ ಹಾರ್ಬರ್‌ನಲ್ಲಿ ತೆರಳುತ್ತಿದ್ದ ವೇಳೆ ಅವರ ಕಾಲಿನ ಮೇಲೆ ಕಲ್ಲುಗಳಿಂದ ದಾಳಿಯಾಗಿತ್ತು. ಆಗ ಬಿಜೆಪಿಯ ರಾಜ್ಯ ನಾಯಕರಾದ ಮುಕುಲ್‌ ರಾಯ್‌ ಮತ್ತು ಕೈಲಾಶ್‌ ವಿಜಯವರ್ಗೀಯ ಅವರು ಗಾಯಗೊಂಡಿದ್ದರು. ಇದಾದ ಮೇಲೂ ಬಿಜೆಪಿ ಯುವ ಮೋರ್ಚಾ ನಾಯಕ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ರ್ಯಾಲಿಯೊಂದು ನಡೆದ ವೇಳೆಯೂ ಪೊಲೀಸರು ಲಾಠಿ ಚಾರ್ಜ್‌ ನಡೆಸಿ, ಹಲವಾರು ನಾಯಕರು ಗಾಯಗೊಂಡಿದ್ದರು.

ಆದರೆ ಇದು ದಾಳಿಯಲ್ಲ ಎಂದು ಆಯೋಗ ಹೇಳಿದ ಮೇಲೆ ಟಿಎಂಸಿಗೆ ಇದು ಪ್ರಚಾರದ ಅಸ್ತ್ರವಾಗಲಿಕ್ಕಿಲ್ಲ. ಆದರೆ ಗಾಯ ಮಾತ್ರ ಸದ್ಯಕ್ಕೆ ಮಾಸದು.

– ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next