ಜಲಪಾಯ್‌ಗಾರಿ : ಪಶ್ಚಿಮ ಬಂಗಾಲದ ಜಲಪಾಯ್‌ಗಾರಿ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿ ಮಹಿಳೆಯೊಬ್ಬಳನ್ನು ಆಕೆಯ ಸಂಬಂಧಿಯೋರ್ವ ಅತ್ಯಾಚಾರಗೈದು ಆಕೆಯ ಗುಪ್ತಾಂಗಕ್ಕೆ ರಾಡ್ ತೂರಿದ ಅತ್ಯಮಾನುಷ ಲೈಂಗಿಕ ದೌರ್ಜನ್ಯದ ಪ್ರಕರಣ ವರದಿಯಾಗಿದೆ.
ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಮಹಿಳೆಯನ್ನು ಜಲಪಾಯ್‌ಗಾರಿಯ ಸದರ್ ಆಸ್ಪತ್ರೆಗೆ ಸೇರಿಸಲಾಗಿದ್ದು ಆಕೆಯ ಸ್ಥಿತಿ ಚಿಂತಾಜನಕವಿದೆ. ಈ ಪ್ರಕರಣವು 2012ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ಮಹಿಳೆಯೊಬ್ಬಳ ಮೇಲೆ ನಡೆದಿದ್ದ ಅತ್ಯಮಾನುಷ ಗ್ಯಾಂಗ್ ರೇಪ್ ಪ್ರಕರಣವನ್ನು ನೆನಪಿಸುವಷ್ಟು ಘೋರವಾಗಿದೆ.
ಜಲಪಾಯ್‌ಗಾರಿ ಮಹಿಳೆಯ ಮೇಲಿನ ಅತ್ಯಾಚಾರ ಕಳೆದ ಶನಿವಾರ ರಾತ್ರಿ ನಡೆದಿದೆ. ಧೂಪ್ ಗುರಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿನ ನಿರಂಜನ್ ಪಾತ್ ಪ್ರದೇಶದಲ್ಲಿರುವ ಮಹಿಳೆಯ ಮನೆ ಹತ್ತಿರದ ಕೊಳವೊಂದರ ಬಳಿ ಈ ಘಟನೆ ನಡೆದಿದೆ.
ಭೂ ವಿವಾದವನ್ನು ಪರಿಹರಿಸುವುದಿದೆ; ಹೊರಗೆ ಬಾ ಎಂದು ಆರೋಪಿಯು ಮಹಿಳೆಯ ಮನೆ ಎದುರು ನಿಂತು ಕರೆದಿದ್ದ. ಆ ಪ್ರಕಾರ ಹೊರ ಬಂದಿದ್ದ ಮಹಿಳೆಯನ್ನು ಆತ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಗುಪ್ತಾಂಗಕ್ಕೆ ರಾಡ್ ತೂರಿದ. ಆತನ ಜತೆಗೆ ಇನ್ನೋರ್ವ ವ್ಯಕ್ತಿ ಇದ್ದನಾದರೂ ಆತ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಎಂಬ ವಿಷಯ ರೇಪ್ ಸಂತ್ರಸ್ತೆಯ ಹೇಳಿಕೆಯಿಂದ ಗೊತ್ತಾಗಿದೆ.
ಅತ್ಯಾಚಾರದ ಬಳಿಕ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿ ಕೊಳದ ಬಳಿ ಬಿದ್ದಿದ್ದ ಮಹಿಳೆಯನ್ನು ಒಬ್ಬ ರಿಕ್ಷಾವಾಲಾ ಗುರುತಿಸಿ ಆಕೆಯನ್ನು ಆಕೆಯ ಮನೆಗೆ ತಲುಪಿಸಿದ್ದಾನೆ. ಭಾನುವಾರ ಬೆಳಗ್ಗೆ ಆಕೆಯನ್ನು ಧೂಪ್ ಗುರಿ ಆಸ್ಪತ್ರೆಗೆ ಸೇರಿಸಲಾಗಿದೆ; ಅಲ್ಲಿಂದ ಆಕೆಯನ್ನು ಜಲಪಾಯ್‌ಗಾರಿ ಸದರ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಘಟನೆ ನಡೆದ ವೇಳೆ ಆಕೆಯ ಪತಿಯು ಮನೆಯಲ್ಲಿ ಇರಲಿಲ್ಲ. ಪೊಲೀಸರು ಆರೋಪಿ ಮತ್ತು ಆತನ ಜತೆಗಾರನನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸುತ್ತಿದ್ದಾರೆ.