Advertisement

6 ರಾಜ್ಯಗಳಲ್ಲಿ ಹಿಂಸಾಚಾರ; ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: ಹೌರಾದಲ್ಲಿ ಗಲಭೆ

01:15 AM Apr 01, 2023 | Team Udayavani |

ಹೊಸದಿಲ್ಲಿ: ಶ್ರೀ ರಾಮನವಮಿ ಹಿನ್ನೆಲೆಯಲ್ಲಿ ಗುರುವಾರ ನಡೆದ ಮೆರವಣಿಗೆಗಳ ವೇಳೆ ಒಟ್ಟು 6 ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ಬಿಹಾರ, ಗುಜರಾತ್‌ ಮತ್ತು ಉತ್ತರಪ್ರದೇಶಗಳಲ್ಲಿ ಘರ್ಷ ಣೆಗಳು ನಡೆದಿವೆ. ಕೆಲವು ಕಡೆ ಶುಕ್ರವಾರವೂ ಗಲಭೆ ಮುಂದುವರಿದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

Advertisement

ಪಶ್ಚಿಮ ಬಂಗಾಲದಲ್ಲಿ ಮತ್ತೆ ಹಿಂಸೆ
ಪಶ್ಚಿಮ ಬಂಗಾಲದ ಹೌರಾದಲ್ಲಿ ಶುಕ್ರವಾರವೂ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಮಧ್ಯಾಹ್ನ ಹಲ ವೆಡೆ ಕಲ್ಲುತೂರಾಟದಂಥ ಪ್ರಕರಣಗಳು ವರದಿ ಯಾಗಿವೆ. ಗುಂಪುಗೂಡುತ್ತಿದ್ದ ಜನರನ್ನು ಚದುರಿ ಸಲು ಪೊಲೀಸರು ಲಾಠಿಪ್ರಹಾರ ಮಾಡಿದ್ದಾರೆ. ಕಾಜಿಪಾರಾ ಪ್ರದೇಶದಲ್ಲಿ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಿಂಸಾಚಾರ ಸಂಬಂಧ ಒಟ್ಟಾರೆ 45 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಯೊಂದು ಸೂಕ್ಷ್ಮ ಪ್ರದೇಶದಲ್ಲೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ರಾಜಕೀಯ ವಾಕ್ಸಮರ: ಹಿಂಸಾಚಾರ ಸಂಬಂಧ ಟಿಎಂಸಿ ಮತ್ತು ಬಿಜೆಪಿ ನಾಯಕರ ನಡುವೆ ಪರಸ್ಪರ ವಾಗ್ಯುದ್ಧ ನಡೆದಿದೆ. ಈ ಗಲಭೆಯ ಹಿಂದೆ ಬಿಜೆಪಿ ಮತ್ತು ಬಜರಂಗದಳದ ಕೈವಾಡವಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಮಾªರ್‌ ಮಾತನಾಡಿ “ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯಂತ ಅಪಾಯದಲ್ಲಿದೆ. ಮೆರವಣಿಗೆ ನಡೆಯುತ್ತಿದ್ದಾಗ ಪೊಲೀಸರು ಅಲ್ಲಿಂದ ಹೊರನಡೆದರು. ಆಗ ಕಲ್ಲುಗಳು ತೂರಿಬಂದವು’ ಎಂದಿದ್ದಾರೆ.

ಅಮಿತ್‌ ಶಾ ಮಾತುಕತೆ: ಶುಕ್ರವಾರ ಪ.ಬಂಗಾಲ ರಾಜ್ಯಪಾಲ ಸಿ.ವಿ.ಆನಂದಬೋಸ್‌ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪರಿಸ್ಥಿತಿಯ ವಿವರ ಪಡೆದಿದ್ದಾರೆ.

ಮಹಾರಾಷ್ಟ್ರದಲ್ಲಿ 21 ಮಂದಿ ಬಂಧನ
ಔರಂಗಾಬಾದ್‌, ಮಡಾಲ್‌ ಮತ್ತು ಜಲಗಾಂವ್‌ನಲ್ಲಿ ಗುರುವಾರ ಹಿಂಸಾಚಾರ ನಡೆದಿದ್ದವು. ಒಬ್ಬರು ಸಾವಿಗೀಡಾಗಿದ್ದರು. ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಲ್ಲದೆ, 13 ವಾಹನಗಳಿಗೆ ಬೆಂಕಿ ಹಚ್ಚಿದರು. ಶುಕ್ರವಾರ ಪರಿಸ್ಥಿತಿ ಶಾಂತವಾಗಿದ್ದು, 21 ಮಂದಿಯನ್ನು ಬಂಧಿಸಿ, 300 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ.

Advertisement

ಬಿಹಾರದಲ್ಲಿ ನಿಷೇಧಾಜ್ಞೆ
ಶುಕ್ರವಾರ ನಡೆದ ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಇಬ್ಬರು ಪೊಲೀಸರೂ ಸೇರಿ ಹಲವರು ಗಾಯ ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಗುಜರಾತ್‌ನಲ್ಲಿ 24 ಮಂದಿ ವಶಕ್ಕೆ
ವಡೋದ ರಾದಲ್ಲಿ ರಾಮನವಮಿ ಸಂದರ್ಭ ಆಯೋಜಿಸಿದ್ದ ಎರಡು ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿದ ಆರೋಪ ಸಂಬಂಧ ಶುಕ್ರವಾರ 24 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ದೇಗುಲ ದುರಂತ: ಸಾವಿನ ಸಂಖ್ಯೆ 36ಕ್ಕೇರಿಕೆ
ರಾಮನವಮಿ ದಿನವಾದ ಗುರುವಾರ ಮಧ್ಯಪ್ರದೇಶದ ಇಂದೋರ್‌ನ ದೇವಾಲಯದಲ್ಲಿ ಸಿಮೆಂಟ್‌ ಹಾಸು ಕುಸಿದು ಬಿದ್ದ ಪರಿಣಾಮ ಉಂಟಾದ ದುರಂತದಲ್ಲಿ ಮಡಿದವರ ಸಂಖ್ಯೆ ಶುಕ್ರವಾರ 36ಕ್ಕೇರಿಕೆಯಾಗಿದೆ. ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ದುರಂತ ಸ್ಥಳಕ್ಕೆ ಆಗಮಿಸಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಹವನ ನಡೆಯುತ್ತಿದ್ದಾಗ ಸಿಮೆಂಟ್‌ ಸ್ಲಾéಬ್‌ ಕುಸಿದ ಕಾರಣ, ಹಲವು ಭಕ್ತರು ಕೆಳಗಿದ್ದ ಬಾವಿಯೊಳಕ್ಕೆ ಬಿದ್ದಿದ್ದರು. ಇದೇ ವೇಳೆ ಆತ್ಮೀಯರನ್ನು ಕಳೆದುಕೊಂಡ ದುಃಖದ ನಡುವೆಯೂ 8 ಕುಟುಂಬಗಳು ಮೃತರ ಅಂಗಾಂಗ ದಾನಕ್ಕೆ ಮುಂದೆ ಬಂದಿವೆ.

ಎನ್‌ಐಎ ತನಿಖೆಗೆ ಆಗ್ರಹ: ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಕುರಿತು ಎನ್‌ಐಎ ತನಿಖೆಗೆ ಆಗ್ರಹಿಸಿ ಪ.ಬಂಗಾಲ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ಕಲ್ಕತ್ತಾ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಗಲಭೆಪೀಡಿತ ಪ್ರದೇಶಗಳಲ್ಲಿ ಕೇಂದ್ರ ಭದ್ರತ ಪಡೆಗಳನ್ನು ನಿಯೋಜಿಸುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next