ಕೋಲ್ಕತಾ: ಅಂಫಾನ್ ಚಂಡಮಾರುತದಿಂದ ತೀವ್ರ ಹಾನಿಗೆ ಒಳಗಾಗಿರುವ ಕೋಲ್ಕತಾದ ಹಲವು ಭಾಗಗಳಲ್ಲಿ ಇನ್ನೂ ಪರಿಹಾರ ಕಾರ್ಯಾ ಚರಣೆ ಚುರುಕುಗೊಂಡಿಲ್ಲ.
ಹೀಗಾಗಿ, ಟಿಎಂಸಿ ಸರಕಾರದ ಗ್ರಾಹಕ ವ್ಯವಹಾರಗಳ ಸಚಿವ ಸಾಧಾನ್ ಪಾಂಡೆ ಪಕ್ಷದ ಆಡಳಿತ ಇರುವ ಕೋಲ್ಕತಾ ಮಹಾನಗರ ಪಾಲಿಕೆ ವಿರುದ್ಧವೇ ಹರಿಹಾಯ್ದಿದ್ದಾರೆ.
ಚಂಡಮಾರುತದ ಬಳಿಕ ಕೈಗೊಳ್ಳಬೇಕಾಗಿರುವ ರಕ್ಷಣೆ ಮತ್ತು ಇತರ ಕಾಮಗಾರಿಗಳು ಸೂಕ್ತ ವೇಗ ಪಡೆದುಕೊಂಡಿಲ್ಲವೆಂದು ಪ್ರತಿಪಕ್ಷಗಳಾಗಿರುವ ಕಾಂಗ್ರೆಸ್, ಬಿಜೆಪಿ ಆಕ್ಷೇಪ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಮಹಾನಗರ ಪಾಲಿಕೆಯಲ್ಲಿ ಟಿಎಂಸಿಯ ಅಧಿಕಾರಾವಧಿ ಮುಕ್ತಾಯವಾಗಿದೆ. ಹೀಗಾಗಿ, ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಂ ಅಧ್ಯಕ್ಷತೆಯಲ್ಲಿ ತಾತ್ಕಾಲಿಕ ಸಮಿತಿ ನೇಮಕವಾಗಿದೆ. ಇದೇ ವೇಳೆಗೆ ಪಾಲಿಕೆ ಆಯುಕ್ತರನ್ನೂ ವರ್ಗಾಯಿಸಿರುವುದು ವಾಕ್ಸಮರಕ್ಕೆ ಮತ್ತೂಂದು ದಾರಿಯನ್ನು ಮಾಡಿಕೊಟ್ಟಿದೆ.
ಶಾಸಕರ ಮೇಲೆ ಹಲ್ಲೆ: ಮತ್ತೊಂದೆಡೆ ಕೋಲ್ಕತಾದ ಮೇಟಿಯಾಬುರ್ಜ್ ಎಂಬಲ್ಲಿ ಪರಿಹಾರ, ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ನೋಡಲು ಹೋದ ಟಿಎಂಸಿ ಶಾಸಕ ಅಬ್ದುಲ್ ಖಲೆಕ್ ಮೇಲೆ ಹಲ್ಲೆ ನಡೆಸಲಾಗಿದೆ.
ವಿದ್ಯುತ್ ಮತ್ತು ನೀರು ಪೂರೈಕೆ ಸರ್ಮಪಕವಾಗಿ ಲ್ಲವೆಂದು 2 ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಅವರನ್ನು ಸಮಾಧಾನ ಪಡಿಸಲು ಹೋದಾಗ ಶಾಸಕರ ಮೇಲೆ ಹಲ್ಲೆ ನಡೆಸಲಾಗಿದೆ. ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರು ವಾಯು ಶೆಲ್ ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.