Advertisement

ಕಡೇ ದಿನವೂ ನಂದಿಗ್ರಾಮ ಉದ್ವಿಗ್ನ

01:24 AM Apr 02, 2021 | Team Udayavani |

ಕೋಲ್ಕತಾ: ಪ್ರಚಾರದ ದಿನಗಳಿಂದಲೇ ಪ್ರತಿಷ್ಠಿತ ಕಣವಾಗಿ ದೇಶದ ಗಮನ ಸೆಳೆದಿದ್ದ ನಂದಿಗ್ರಾಮದಲ್ಲಿ ಆತಂಕ- ಸಂಘರ್ಷಗಳಿಂದಲೇ ಗುರುವಾರ ಮತದಾನ ಸಮಾಪ್ತಿ ಕಂಡಿದೆ. ಅತ್ತ ಮಮತಾ ಬ್ಯಾನರ್ಜಿ, ಇತ್ತ ಸುವೇಂದು ಅಧಿಕಾರಿ ಅವರನ್ನು ಗೆಲ್ಲಿಸುವ ಭರದಲ್ಲಿ ಇಡೀ ನಂದಿಗ್ರಾಮ ಅಕ್ಷರಶಃ ವಿಭಜನೆಯಾದಂತೆ ಕಂಡಿತ್ತು.

Advertisement

ನಿಗೂಢ ಸಾವು, ಕಾರಿನ ಮೇಲಿನ ದಾಳಿ, ಕಲ್ಲು ತೂರಾಟ, ಅಲ್ಲಲ್ಲಿ ಗುಂಪು ಘರ್ಷಣೆ, ಪೊಲೀಸರ ಲಾಠಿಯೇಟು, ಆರೋಪ- ಪ್ರತ್ಯಾರೋಪ… ಇವೆಲ್ಲ ಘಟನಾವಳಿಗಳಿಗೆ ನಂದಿಗ್ರಾಮ ಸಾಕ್ಷಿಯಾಗಿತ್ತು.

ಬಿಜೆಪಿ ಕಾರ್ಯಕರ್ತ ಸಾವು: ಬೆಳಗ್ಗೆ ಮತದಾನ ಆರಂಭಗೊಳ್ಳುತ್ತಿದ್ದಂತೆ ನಂದಿಗ್ರಾಮದ ಭೇಕುಟಿಯಾ ಪ್ರದೇಶದ ಮನೆಯಲ್ಲಿ ಬಿಜೆಪಿ ಕಾರ್ಯಕರ್ತ ಉದಯ್‌ ದುಬೇ ನಿಗೂಢ ಸಾವಿಗೆ ಶರಣಾಗಿದ್ದು, ರಾಜಕೀಯ ವಾಕ್ಸಮರಕ್ಕೆ ಎಡೆಮಾಡಿ ಕೊಟ್ಟಿತ್ತು. “ಮಾ.30ರಂದು ಮಿಥುನ್‌ ಚಕ್ರವರ್ತಿ ಜತೆಗೆ ನಡೆಸಿದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಟಿಎಂಸಿ ಗೂಂಡಾಗಳು ದುಬೇಗೆ ಬೆದರಿಕೆ ಹಾಕಿದ್ದರು. ಇದರಿಂದ ದುಬೇ ನೇಣಿಗೆ ಶರಣಾಗಿದ್ದಾರೆ’ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಆದರೆ ಟಿಎಂಸಿ ಇದನ್ನು ತಳ್ಳಿಹಾಕಿದೆ.

ಸುವೇಂದು ಟಾರ್ಗೆಟ್‌: ಬೆಳಗ್ಗೆ 7.30ರ ಸುಮಾರಿಗೆ ನಂದನಾಯಕ್‌ ಪ್ರೈಮರಿ ಸ್ಕೂಲ್‌ನ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ತಮ್ಮ ಹಕ್ಕು ಚಲಾಯಿಸಿದರು. ಅನಂತರ ಕೆಲವೇ ಹೊತ್ತಿನಲ್ಲಿ ಅವರ ಬೆಂಗಾವಲು ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಬಿಜೆಪಿ ಬೆಂಬಲಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. “ಗದ್ದೆಯಲ್ಲಿ ಜಮಾಯಿಸಿದ್ದ ಟಿಎಂಸಿ ಕಾರ್ಯಕರ್ತರು ಕಲ್ಲೆಸೆದು ಈ ಕೃತ್ಯ ಎಸಗಿದ್ದಾರೆ’ ಎಂದು ಸುವೇಂದು ಆರೋಪಿಸಿದ್ದಾರೆ.

ನಂದಿಗ್ರಾಮದಲ್ಲೇ ಬೀಡುಬಿಟ್ಟ ದೀದಿ: ರೆಯಾಪರಾ ಏರಿಯಾದ ಇಎಂಸಿ ವಾರ್‌ ರೂಂನಲ್ಲಿ ತಂಗಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಇಡೀ ದಿನ ಗಾಲಿಕುರ್ಚಿಯಲ್ಲೇ ನಂದಿಗ್ರಾಮದ ಬೀದಿಗಳನ್ನು ಸುತ್ತಿದ್ದರು. ಉದ್ವಿಗ್ನತೆ ನಿಯಂತ್ರಿಸುವ ಸಲುವಾಗಿ ಕೆಲವು ಬೂತ್‌ಗಳಿಗೆ ದೀದಿಗೆ ಪ್ರವೇಶ ನಿರಾಕರಿಸಿದ್ದು ಕೂಡ ಟಿಎಂಸಿ ಕಾರ್ಯಕರ್ತರನ್ನು ಕೆರಳಿಸಿತ್ತು. ಭಿಂಕಾಟ ಪ್ರದೇಶದಲ್ಲಿ ಮಮತಾ, ಸುವೇಂದು ಮುಖಾಮುಖೀಯಾದಾಗ ಬೆಂಬಲಿಗರನ್ನು ನಿಯಂತ್ರಿಸುವುದೇ ಭದ್ರತ ತುಕಡಿಗಳಿಗೆ ಸವಾಲಾಗಿತ್ತು.

Advertisement

ಗವರ್ನರ್‌ಗೆ ದೀದಿ ಫೋನ್‌: “ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಚುನಾವಣ ಆಯೋಗ ಸಂಪೂರ್ಣ ವಿಫ‌ಲವಾಗಿದೆ. ಇಂಥ ಕೆಟ್ಟ ಎಲೆಕ್ಷನ್ನನ್ನು ಇದುವರೆಗೂ ನಾನು ಕಂಡಿಲ್ಲ. ಯಾವುದೇ ಕ್ಷಣದಲ್ಲೂ ಏನು ಬೇಕಾದರೂ ಸಂಭವಿಸಬಹುದು’ ಎಂದು ಆತಂಕಿಸಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್‌ ಧನ್ಕರ್‌ ಅವರಿಗೆ ಕರೆಮಾಡಿದ ಪ್ರಸಂಗವೂ ನಡೆಯಿತು. ನಂದಿಗ್ರಾಮದ ಹಲವೆಡೆ, ಬಿಜೆಪಿ- ಟಿಎಂಸಿ ಕಾರ್ಯಕರ್ತರ ನಡುವೆ ವಾಗ್ಯುದ್ಧಗಳು ಜೋರಾಗಿದ್ದವು.

ಬಂಗಾಲದಲ್ಲಿ ಮಿಕ್ಕೆಡೆ ಏನೇನಾಯಿತು? :

ಮಿಕ್ಕ 29 ಕ್ಷೇತ್ರಗಳಲ್ಲಿ ಅಂಥ ಉದ್ವಿಗ್ನತೆ ಸೃಷ್ಟಿಯಾಗಿರಲಿಲ್ಲ. ಒಟ್ಟಾರೆ ಪ. ಬಂಗಾಲದಲ್ಲಿ ಶೇ.80.03ರಷ್ಟು ಮತದಾನವಾಗಿದೆ.

ಕೇಶ್ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತನ್ಮಯ್‌ ಘೋಷ್‌ ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು, ಇಟ್ಟಿಗೆ ತೂರಿದ್ದರು. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಮೊಯ್ನಾ ಕ್ಷೇತ್ರದ 8 ಬೂತ್‌ಗಳನ್ನು ಬಿಜೆಪಿ ಕಾರ್ಯಕರ್ತರು ಅತಿಕ್ರಮಿಸಿ, ಇವಿಎಂ ಯಂತ್ರಗಳನ್ನು ನಿಯಂತ್ರಿಸಿದ್ದಾರೆ ಎಂದು ಟಿಎಂಸಿ ಆರೋಪ ಮಾಡಿದೆ.

“ನನಗೆ ಮತದಾನಕ್ಕೂ ತೆರಳಲು ಬಿಡದೆ ಟಿಎಂಸಿ ಕಾರ್ಯಕರ್ತರು ಅಡ್ಡಹಾಕಿದ್ದರು’ ಎಂದು ದೇಬ್ರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರ್ತಿ ಘೋಷ್‌ ಆರೋಪಿಸಿದ್ದಾರೆ.

ದೀದಿ ಫ‌ುಲ್‌ ನರ್ವಸ್‌: ಮೋದಿ ವಾಗ್ಧಾಳಿ :

ಸೋನಿಯಾ ಗಾಂಧಿ ಆದಿಯಾಗಿ ವಿಪಕ್ಷ ಮುಖಂಡರಿಗೆ ದೀದಿ ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ಷೇಪ ತೆಗೆದಿದ್ದಾರೆ. ಪಶ್ಚಿಮ ಬಂಗಾಲದ 24 ಪರಗಣ ಜಿಲ್ಲೆಯ ಜಾಯ್‌ನಗರದಲ್ಲಿ ಗುರುವಾರ ಅವರು ಭಾಷಣ ಮಾಡಿದರು.

ಮಮತಾ ದೀದಿ ಬಹಳ ನರ್ವಸ್‌ ಆಗಿದ್ದಾರೆ. ಯಾರಧ್ದೋ ಲೆಕ್ಕಾಚಾರ ನಂಬಿ ಭವಾನಿಪುರ ಬಿಟ್ಟು, ನಂದಿಗ್ರಾಮದಲ್ಲಿ ಸ್ಪರ್ಧೆಗೆ ನಿಂತರು. ಆದರೆ ಅಲ್ಲಿ ಮೂರು ದಿನ ತಂಗಿದ ಮೇಲೆ ಅವರಿಗೆ ಇಂಚಿಂಚೂ ಸೋಲುವ ಭಯ ಕಾಡಿದೆ. ಇದೇ ಭಯದಲ್ಲೇ ಅವರು ವಿಪಕ್ಷಗಳ ಮುಖಂಡರಿಗೆ ಬಿಜೆಪಿ ವಿರುದ್ಧ ಪತ್ರ ಬರೆದಿದ್ದಾರೆ.

ನಮ್ಮ ನಂಬಿಕೆ, ಸಂಪ್ರದಾಯದ ಬಗ್ಗೆ ನನಗೆ ಯಾವಾಗಲೂ ಹೆಮ್ಮೆ ಇದೆ. ನಾನು ಮಮತಾ ದೀದಿಯಂತೆ ಕಾಲೋಚಿತ ಭಕ್ತನಲ್ಲ. ಅವರಿಗೆ ಚುನಾವಣೆ ಬಂದಾಗ ಮಾತ್ರವೇ ದೇವರ ಮೇಲೆ ಭಕ್ತಿ.

ದೀದಿಗೆ ಏನಾಗಿದೆ ಎಂದು ನನಗೇ ಅಚ್ಚರಿಯಾಗಿದೆ. ಕೆಲವು ದಿನಗಳ ಹಿಂದೆ ನಾನು ಬಾಂಗ್ಲಾದೇಶಕ್ಕೆ ಹೋಗಿದ್ದೆ. 51 ಶಕ್ತಿಪೀಠಗಳಲ್ಲಿ ಒಂದಾದ ಅಲ್ಲಿನ ಜೆಶೋರೇಶ್ವರಿ ಕಾಲಿ ಮಾತಾ ದೇಗುಲದಲ್ಲಿ ದೇಶಕ್ಕಾಗಿ ಪ್ರಾರ್ಥಿಸಿದ್ದೆ. ಆದರೆ ಇದಕ್ಕೆ ದೀದಿ ಆಕ್ಷೇಪ ತೆಗೆದಿದ್ದರು. ಹಾಗಾದರೆ ಕಾಳಿ ಮಾತೆ ದೇಗುಲಕ್ಕೆ ಹೋಗುವುದೂ ತಪ್ಪೇ?’.

ನಾನು ದೇಗುಲಕ್ಕೆ ಹೋದರೂ ದೀದಿಗೆ ಕೋಪ ಬರುತ್ತದೆ. ಜನತೆ ಜೈಶ್ರೀರಾಮ್‌ ಹೇಳಿದರೂ ಅವರು ಸಿಟ್ಟಾಗುತ್ತಾರೆ. ಕೇಸರಿ ವಸ್ತ್ರ, ತಿಲಕಗಳೂ ಅವರಿಗೆ ಅಸಮಾಧಾನ ಸೃಷ್ಟಿಸುತ್ತಿವೆ. ಅವರ ಬೈಗುಳದ

ಮಾತುಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಜನರ ಭಾವನೆಗಳ ಜತೆ ಚೆಲ್ಲಾಟ ಆಡಲು ದೀದಿ ಅವರಿಗೆ ಅವಕಾಶ ಕೊಡಲಾರೆ. ಶ್ರೀರಾಮಕೃಷ್ಣ ಪರಮಹಂಸ, ಚೈತನ್ಯ ಮಹಾಪ್ರಭುಗಳ ಈ ನೆಲದಲ್ಲಿ ಅವರ ಇಂಥ ಆಟಕ್ಕೆ ಆಸ್ಪದ ನೀಡಲಾರೆ.

Advertisement

Udayavani is now on Telegram. Click here to join our channel and stay updated with the latest news.

Next