ಕೋಲ್ಕತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ದೇಶದ ಪ್ರಧಾನಿಯಾಗುವ ಅರ್ಹತೆ ಇದೆ. ಹೀಗೆಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಡಾ.ಅಮಾರ್ತ್ಯ ಸೆನ್ ಪ್ರತಿಪಾದಿಸಿದ್ದಾರೆ.
2024ರ ಚುನಾವಣೆಯಲ್ಲಿ ಬಿಜೆಪಿಯೊಂದಕ್ಕೇ ಲಾಭವಾಗಲಿದೆ ಎಂಬ ಅಭಿಪ್ರಾಯ ಸರಿಯಲ್ಲ. ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಧಾನ ಪಾತ್ರ ವಹಿಸಬೇಕು ಎಂದು “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ ಹೀಗೆ, ಹಲವು ಪಕ್ಷಗಳು ಮುಖ್ಯ ಭೂಮಿಕೆ ವಹಿಸಬೇಕು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮುಂದಿನ ಪ್ರಧಾನಿಯಾಗುವ ಅರ್ಹತೆ ಮತ್ತು ಸಾಮರ್ಥ್ಯ ಇದೆ. ಮಮತಾ ಅವರು ಇತರ ಪಕ್ಷಗಳನ್ನು ತಮ್ಮ ಜತೆಗೆ ಸೇರಿಸಿಕೊಂಡು ಮುನ್ನಡೆಯಬಲ್ಲರು ಎನ್ನುವುದು ಇನ್ನೂ ಸಾಬೀತಾಗಿಲ್ಲ’ ಎಂದರು.
ಬಿಜೆಪಿ ವಿರುದ್ಧ ಆಕ್ರೋಶ:
ಬಿಜೆಪಿ ವಿರುದ್ಧ ಹರಿಹಾಯ್ದ ಅವರು “ದೇಶದ ಬಗ್ಗೆ ಬಿಜೆಪಿ ಹೊಂದಿರುವ ನಿಲುವು ಸಂಕುಚಿತದ್ದು. ಅದು ಕೇವಲ ಹಿಂದೂ ಎಂಬ ನೆಲೆಯಲ್ಲಿ ಎಲ್ಲವನ್ನೂ ಗಮನಿಸುತ್ತಿದೆ. ಆ ಪಕ್ಷಕ್ಕೆ ಪರ್ಯಾಯವಾಗಿ ಯಾರೂ ಇಲ್ಲದಿರುವುದು ದುರಂತ ಎಂದರು