ಕೋಲ್ಕತಾ:ದೇಸೀಯ ಬಡವರಿಗಾಗಿ ಷರತ್ತುಬದ್ಧ ಉಚಿತ ವಿದ್ಯುತ್, ಚಹಾ ತೋಟದ ಖಾಯಂ ಕೆಲಸಗಾರರಿಗೆ ಗೃಹ ನಿರ್ಮಾಣ ಯೋಜನೆ, ಮುಂದಿನ ಮೂರು ವರ್ಷಗಳಲ್ಲಿ 100 ಹೊಸ ಎಂಎಸ್ ಎಂಇ ಪಾರ್ಕ್ಸ್ ಗಳನ್ನು ರಾಜ್ಯಾದ್ಯಂತ ನಿರ್ಮಿಸಲಾಗುವುದು…ಇದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಮಂಡಿಸಿದ ಪೂರ್ಣಪ್ರಮಾಣದ ಕೊನೆಯ ಬಜೆಟ್ ನ ಘೋಷಣೆಗಳು. 2021ಕ್ಕೆ ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಪಶ್ಚಿಮಬಂಗಾಳ ರಾಜ್ಯ ಹಣಕಾಸು ಸಚಿವ ಅಮಿತ್ ಮಿತ್ರಾ ಬಜೆಟ್ ಭಾಷಣದ ವೇಳೆ, ಮೂರು ತಿಂಗಳಿಗೆ ಬಡ ನಾಗರಿಕನಿಗೆ 75 ಯೂನಿಟ್ಸ್ ಉಚಿತ ವಿದ್ಯುತ್ ನೀಡಲಾಗುವುದು. ಅಲ್ಲದೇ ಚಹಾ ತೋಟದಲ್ಲಿ ಕೆಲಸ ನಿರ್ವಹಿಸುವವರ ಕೃಷಿ ಆದಾಯ ತೆರಿಗೆಯನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.
ಮುಂದಿನ ವರ್ಷದೊಳಗೆ ಎಂಎಸ್ ಎಂಇ(ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ ಸಚಿವಾಲಯ) ಪಾರ್ಕ್ಸ್ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಚಹಾ ತೋಟದ ಕಾರ್ಮಿಕರ ಗೃಹ ನಿರ್ಮಾಣ(ಚಾಯ್ ಸುಂದರಿ) ಯೋಜನೆಗಾಗಿ 500 ಕೋಟಿ ರೂಪಾಯಿ ಕಾಯ್ದಿರಿಸಿದೆ. ಈ ಯೋಜನೆಯಿಂದ ರಾಜ್ಯದ 370 ಟೀ ಗಾರ್ಡನ್ಸ್ ಗಳಲ್ಲಿ ಇರುವ ಸುಮಾರು 3 ಲಕ್ಷ ಕಾರ್ಮಿಕರಿಗೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಪ್ರಾಬಲ್ಯ ಹೊಂದಿರುವ ಝಾರ್ ಗ್ರಾಮ್ ನಲ್ಲಿ ನೂತನ ವಿವಿ ಸ್ಥಾಪಿಸುವುದಾಗಿ ಪಶ್ಚಿಮಬಂಗಾಳ ಸರ್ಕಾರ ಘೋಷಿಸಿದ್ದು, ಹಿಂದುಳಿದ ವರ್ಗಕ್ಕೂ ವಿವಿ ಸ್ಥಾಪಿಸುವುದಾಗಿ ತಿಳಿಸಿದೆ.
ಪಶ್ಚಿಮಬಂಗಾಳದ “ಕಾರ್ಮಾ ಸಾಥಿ ಪ್ರಕಲ್ಪಾ ಯೋಜನೆ ಮೂಲಕ ಮೂರು ವರ್ಷಗಳ ಕಾಲಾವಧಿಗೆ ಒಂದು ಲಕ್ಷ ನಿರುದ್ಯೋಗಿಗಳಿಗೆ ಒಂದು ಲಕ್ಷ ರೂಪಾಯಿ ಸಾಲ ನೀಡಲಾಗುವುದು. ಕೋಲ್ಕತಾ, ದುರ್ಗಾಪುರ್ ಮತ್ತು ಸಿಲಿಗುರಿಯಲ್ಲಿ ನೂತನ ಸಿವಿಲ್ ಸರ್ವೀಸ್ ಅಕಾಡೆಮಿ ಸ್ಥಾಪಿಸುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.