Advertisement

ಬಂಗಾಲ, ಅಸ್ಸಾಂನಲ್ಲಿಂದು “ಬೀಪ್‌’ಸದ್ದು :2 ರಾಜ್ಯಗಳ 77 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

12:27 AM Mar 27, 2021 | Team Udayavani |

ಕೋಲ್ಕತಾ: ಜೈಶ್ರೀರಾಮ್‌ನಿಂದ ದುರ್ಯೋಧನನ ತನಕ, ಹೆಲಿಕಾಪ್ಟರ್‌ನಿಂದ ವ್ಹೀಲ್‌ ಚೇರ್‌ವರೆಗೆ, ಔಟ್‌ಸೈಡರ್‌ನಿಂದ ಭೂಮಿ ಪುತ್ರನ ಕಡೆಗೆ, “ಆಟ ಶುರು’ವಿನಿಂದ (ಖೇಲಾ ಹೋಬ್‌) “ವಿಕಾಸ್‌ ಶುರು’ ಘೋಷಣೆವರೆಗೆ, ವರ್ಣರಂಜಿತ ಮತ್ತು ಸಿಡಿಲಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಲದಲ್ಲಿ ಶನಿವಾರ ಮೊದಲ ಹಂತದ ಮತದಾನದ “ಬೀಪ್‌’ ಸದ್ದು ಮೊಳಗಲಿದೆ.

Advertisement

ಒಟ್ಟು 5 ಜಿಲ್ಲೆಗಳ 30 ಸ್ಥಾನಗಳಿಗೆ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ. ಬುಡಕಟ್ಟು ಜನಾಂಗದವರೇ ಹೆಚ್ಚು ನೆಲೆಕಂಡಿರುವ ಪಶ್ಚಿಮ ಮಿಡ್ನಾಪುರ ಭಾಗ-1, ಪೂರ್ವ ಮಿಡ್ನಾಪುರ ಭಾಗ-2, ಬಂಕುರಾ, ಝಾರ್‌ಗ್ರಾಮ್‌ ಮತ್ತು ಪುರುಲಿಯಾ ಜಿಲ್ಲೆಗಳ ಮತದಾರರ ಬೆರಳುಗಳಿಗೆ ಇಂದು ಶಾಯಿ ಅಚ್ಚಾಗಲಿದೆ.

191 ಅಭ್ಯರ್ಥಿಗಳ ಹಣೆಬರಹ: 73 ಲಕ್ಷಕ್ಕೂ ಅಧಿಕ ಮತದಾರರು ಕಣದಲ್ಲಿರುವ 191 ಅಭ್ಯರ್ಥಿಗಳ ಹಣೆಬರಹ ತೀರ್ಮಾನಿಸಲಿದ್ದಾರೆ. ಟಿಎಂಸಿ ಮತ್ತು ಬಿಜೆಪಿಯ 29 ಅಭ್ಯರ್ಥಿಗಳು ಅಖಾಡದಲ್ಲಿದ್ದರೆ, ಎಡಪಕ್ಷ- ಕಾಂಗ್ರೆಸ್‌- ಐಎಸ್‌ಎಫ್ ಮೈತ್ರಿಯ 30 ಅಭ್ಯರ್ಥಿಗಳು ಮತ ಪರೀಕ್ಷೆ ಎದುರಿಸಲಿದ್ದಾರೆ. 2016ರಲ್ಲಿ ಈ 30 ಸ್ಥಾನಗಳಲ್ಲಿ ಟಿಎಂಸಿ-27, ಕಾಂಗ್ರೆಸ್‌-2, ಆರ್‌ಎಸ್‌ಪಿ-1 ಸಾಧನೆ ಮೆರೆದಿದ್ದವು.

ಭದ್ರತೆ ಹೇಗಿದೆ?: ಕಳೆದ 2-3 ವರ್ಷಗಳಿಂದ ರಾಜಕೀಯ ಕಗ್ಗೊಲೆ, ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಪ. ಬಂಗಾಳದಲ್ಲಿ ಕೇಂದ್ರ ಭದ್ರತಾ ಪಡೆ ವಿಶೇಷ ಭದ್ರತೆ ಆಯೋಜಿಸಿದೆ. ಒಂದು ಕಾಲದಲ್ಲಿ ನಕ್ಸಲರ ಹಾವಳಿಯಿಂದ ನಲುಗಿದ್ದ ಮಹಲ್‌ ಜಂಗಲ್‌ನ ಬೂತ್‌ಗಳಿಗೆ ಭಾರೀ ಭದ್ರತೆ ನೀಡಲಾಗಿದೆ. ಕೇಂದ್ರ ಭದ್ರತಾಪಡೆಯ 684 ತುಕಡಿಗಳು, 10,288 ಮತ ಕೇಂದ್ರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದು, ಶಾಂತಿಯುತ ಮತದಾನಕ್ಕೆ ಶ್ರಮಿಸಲಿವೆ. ಪ. ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳಿಗೆ 8
ಹಂತಗಳಲ್ಲಿ ಮತದಾನ ನಡೆಯಲಿದೆ.

ಇವಿಎಂ ಬಟನ್‌ ಒತ್ತಲು ಅಸ್ಸಾಂ ರೆಡಿ
ದಿಸ್ಪುರ: ರಾಜಕೀಯ ಪಕ್ಷಗಳ ಭಾರೀ ಟೀಕಾಮಳೆ ಕಂಡಿದ್ದ “ಟೀ’ ನಾಡು ಅಸ್ಸಾಂನಲ್ಲೂ ಶನಿವಾರ ಮೊದಲ ಹಂತದ ಮತದಾನ ನಡೆಯಲಿದೆ. ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಪೈಕಿ 47 ಸ್ಥಾನಗಳಿಗೆ ಮತಪರೀಕ್ಷೆ ಸಾಗಲಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 81,09,815 ಮತದಾರರು 264 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 40,77,210 ಪುರುಷರು, 40,32,481 ಮಹಿಳೆಯರು, 114 ತೃತೀಯ ಲಿಂಗಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸಿಎಂ ಸರ್ಬಾನಂದ ಸೋನೊವಾಲ್‌, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರಿಪುನ್‌ ಬೊರೊ ಸೇರಿದಂತೆ ಪ್ರಮುಖ ಸಚಿವರು, ಮಾಜಿ ಮಂತ್ರಿಗಳ ಭವಿಷ್ಯವನ್ನು ಮತದಾರ ನಿರ್ಧರಿಸಲಿದ್ದಾನೆ. ಜೊಹ್ರಾತ್‌, ಮಾಜುಲಿ, ಸಿಬ್‌ಸಾಗರ್‌, ನಝಿರಾ, ದುಲಿಯಜಾನ್‌, ಗೋಹ್‌ಪುರ, ಬೊಕಖಾತ್‌ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಟ್ಟು 479 ಮತಕೇಂದ್ರಗಳನ್ನು ಮಹಿಳಾ ಅಧಿಕಾರಿಗಳೇ ಮುನ್ನಡೆಸುತ್ತಿರುವುದು ಈ ಬಾರಿಯ ವಿಶೇಷ. ಕೇಂದ್ರ ಭದ್ರತಾ ಪಡೆಗಳೊಂದಿಗೆ ರಾಜ್ಯ ಪೊಲೀಸರೂ ಮತಕೇಂದ್ರಗಳಿಗೆ ಭದ್ರತೆ ಒದಗಿಸಲಿದ್ದಾರೆ. ಅಸ್ಸಾಂ ಒಟ್ಟು 3 ಹಂತಗಳ ಮತದಾನಕ್ಕೆ ಸಾಕ್ಷಿಯಾಗಲಿದೆ.

Advertisement

ಲವ್‌, ಲ್ಯಾಂಡ್‌ ಜೆಹಾದ್‌ ವಿರುದ್ಧ ಕಾನೂನು: ಶಾ
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಪುನಃ ಅಧಿಕಾರಕ್ಕೆ ಬಂದರೆ ಲವ್‌ ಮತ್ತು ಲ್ಯಾಂಡ್‌ ಜೆಹಾದ್‌ ವಿರುದ್ಧ ಕಾನೂನು ಜಾರಿಗೊಳಿಸುತ್ತೇವೆ. ಅಲ್ಲದೆ, ಎಲ್ಲ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತವಾಗಿ ಸ್ಕೂಟಿ ನೀಡುತ್ತೇವೆ ಎಂದು ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ. ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ವಿವಾಹಕ್ಕಾಗಿ ಬಲವಂತದಿಂದ ಮತಾಂತರ ನಡೆಸುವವರ ಮತ್ತು ಸ್ಥಳೀಯ ಅಸ್ಸಾಮಿಗಳ ಭೂಮಿಯನ್ನು ಕಸಿದುಕೊಳ್ಳುವರ ವಿರುದ್ಧ ನಾವು ಕಠಿನ ಕಾನೂನು ಜಾರಿಗೆ ತರುತ್ತೇವೆ’ ಎಂದು ಹೇಳಿದರು. “ಈಗಾಗಲೇ ಪಕ್ಷದ ನೇತೃತ್ವದ ಆಡಳಿತ ಅಸ್ಸಾಂನಲ್ಲಿ ದಂಗೆಮುಕ್ತ, ಭಯೋತ್ಪಾದನೆಮುಕ್ತ ವಾತಾವರಣ ಸೃಷ್ಟಿಸಿದೆ. ಜಾಬ್‌ ಹಬ್‌ ಆಗಿಯೂ ರಾಜ್ಯವನ್ನು ಪರಿವರ್ತಿಸಿದೆ’ ಎಂದು ಮೆಚ್ಚುಗೆ ಸೂಚಿಸಿದರು.

ಕೊರೊನಾ ಭೂತದಿಂದ ಬೂತ್‌ಗಳು ಸೇಫ್
ಕೊರೊನಾ ಭೀತಿ ನಡುವೆ ಚುನಾವಣೆ ನಡೆಯುತ್ತಿರುವ ಕಾರಣ, ಆಯೋಗ ಎಲ್ಲ ಇವಿಎಂ ಯಂತ್ರಗಳನ್ನೂ ಮುಂಚಿತವಾಗಿ ಸ್ಯಾನಿಟೈಸ್‌ ಮಾಡಿದೆ. ನೆಗೆಟಿವ್‌ ದೃಢಪಟ್ಟ ಸಿಬ್ಬಂದಿಯನ್ನಷ್ಟೇ ಬೂತ್‌ಗಳಿಗೆ ನೇಮಿಸಿದೆ. ಕಡ್ಡಾಯ ಮಾಸ್ಕ್ ಧಾರಣೆ, ಮತ ಹಾಕುವ ಮುನ್ನ ಮತ್ತು ನಂತರ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ  ಕಾಯ್ದುಕೊಂಡು ಮತಹಾಕಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next