ಕೋಲ್ಕತ್ತಾ: ಈಗಾಗಲೇ ನಿಷೇಧಿಸಲಾದ ಕ್ರಮದಿಂದ ಆನೆಯನ್ನು ಓಡಿಸಲು ಪ್ರಯತ್ನಪಟ್ಟ ಗುಂಪೊಂದು ಆನೆಯ ಸಾವಿಗೆ ಕಾರಣವಾದ ಘಟನೆ ಪಶ್ಚಿಮ ಬಂಗಾಳದ ಜಾರ್ಗ್ರಾಮ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಕಳೆದ ಗುರುವಾರನ (ಆ.15) ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.
ಸಂರಕ್ಷಣಾವಾದಿ ಪ್ರೇರಣಾ ಸಿಂಗ್ ಬಿಂದ್ರಾ ಶನಿವಾರ ಮಧ್ಯಾಹ್ನ ಆನ್‌ಲೈನ್ ಪೋಸ್ಟ್‌ನಲ್ಲಿ ಘಟನೆಯನ್ನು ಹಂಚಿಕೊಂಡಿದ್ದಾರೆ.
ಗುರುವಾರ ಮುಂಜಾನೆ ಎರಡು ಮರಿಗಳು ಸೇರಿದಂತೆ ಆರು ಆನೆಗಳು ರಾಜ್ ಕಾಲೇಜು ಕಾಲೋನಿಗೆ ನುಗ್ಗಿ ಕೆಲವು ಗೋಡೆಗಳನ್ನು ಒಡೆದಿವೆ. ಕೆಲವು ಗಂಟೆಗಳ ನಂತರ, ಹಿಂಡಿನ ಮತ್ತೊಂದು ಆನೆ ಕಾಲೋನಿಯ ಹಿರಿಯ ನಿವಾಸಿಯೊಬ್ಬರನ್ನು ಕೊಂದು ಹಾಕಿದೆ.
ಆನೆಯ ಹಿಂಡಿನ ಹಾವಳಿ ಹೆಚ್ಚಾದಂತೆ ʼಹುಲ್ಲಾʼ ತಂಡದ ಸದಸ್ಯರು ಆನೆ ಓಡಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಮೊನಚಾದ ರಾಡ್ ಗಳು ಮತ್ತು ಬೆಂಕಿಯ ಪಂಜುಗಳೊಂದಿಗೆ ಆನೆ ಓಡಿಸಲು ಬಂದಿದ್ದಾರೆ. ಹುಲ್ಲಾ ತಂಡವು ಅರಣ್ಯ ಇಲಾಖೆಯ ಸಂಪೂರ್ಣ ಅರಿವಿನೊಂದಿಗೆ ಕೆಲಸ ಮಾಡುತ್ತಿದೆ ಎಂದು ಸ್ಥಳೀಯರು ಸೂಚಿಸಿದ್ದಾರೆ ಎಂದು ಪ್ರೇರಣಾ ಸಿಂಗ್ ಹೇಳಿದ್ದಾರೆ.
ಹುಲ್ಲಾ ಗುಂಪು ಆನೆಗಳನ್ನು ಕೃಷಿ ಭೂಮಿಯಿಂದ ಓಡಿಸುವ ಕಾರ್ಯವನ್ನು ಹೊಂದಿರುವ ಜನರ ಗುಂಪು. ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಕಂಡುಬರುವ ಮೊನಚಾದ ರಾಡ್‌ಗಳನ್ನು ಬಳಸುವ ಮತ್ತು ಬೆಂಕಿಯ ಚೆಂಡುಗಳನ್ನು ಎಸೆಯುವ ಅಭ್ಯಾಸವನ್ನು ಪ್ರೇರಣಾ ಸಿಂಗ್ ಬಿಂದ್ರಾ ಮತ್ತು ಇತರ ಕಾರ್ಯಕರ್ತರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ನಂತರ 2018 ರಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿದೆ.
ಧರಮ್ ಪುರ ಫುಟ್ಬಾಲ್ ಮೈದಾನದಲ್ಲಿ ಸಲಗಕ್ಕೆ ಅರಣ್ಯ ಇಲಾಖೆ ಟ್ರ್ಯಾಂಕ್ವಿಲೈಸರ್ ಡಾರ್ಟ್‌ಗಳಿಂದ ಹಲವು ಬಾರಿ ಗುಂಡು ಹಾರಿಸಿದೆ. ನಂತರ ಅದಕ್ಕೆ ಸರಿಯಾಗಿ ನಡೆಯಲು ಸಾಧ್ಯವಾಗಲಿಲ್ಲ. ಮುಂಜಾನೆ ವೃದ್ಧನನ್ನು ಇದೇ ಆನೆ ಕೊಂದಿದೆಯೇ ಎಂಬುದು ದೃಢಪಟ್ಟಿಲ್ಲ.
ಹುಲ್ಲಾ ಗುಂಪಿನಿಂದ ದಾಳಿಗೊಳಗಾದ ಹೆಣ್ಣು ಆನೆಯೊಂದಕ್ಕೆ ಬೆಂಕಿಯುಂಡೆಯಿದ್ದ ಕಬ್ಬಿಣದ ರಾಡ್ ತಾಗಿದೆ. ಇದರಿಂದ ಆನೆಯ ಬೆನ್ನು ಮೂಳೆಗೆ ಹಾನಿಯಾಗಿದೆ.
ಆನೆಯನ್ನು ಚಿಕಿತ್ಸೆಗಾಗಿ ತಡರಾತ್ರಿ ಅರಣ್ಯ ಇಲಾಖೆಯವರು ತೆಗೆದುಕೊಂಡು ಹೋಗಿದ್ದಾರೆ. ಎಂಟು ಗಂಟೆಗಳಿಗೂ ಹೆಚ್ಚು ವಿಳಂಬದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಅಧಿಕಾರಿಗಳಿಂದ ಯಾವುದೇ ಮಾಹಿತಿಯಿಲ್ಲದಿದ್ದರೂ, ಬೆಳಿಗ್ಗೆ ಆನೆಯು ಗಾಯಗೊಂಡು ಸಾವನ್ನಪ್ಪಿದೆ ಎಂದು ಪ್ರೇರಣಾ ಸಿಂಗ್ ಬಿಂದ್ರಾ ಹೇಳಿದ್ದಾರೆ.