Advertisement

ಬಂಗಾರದ ಬಂಗಾಲಕ್ಕೆ ಬಂಪರ್‌

01:05 AM Mar 22, 2021 | Team Udayavani |

ಕೋಲ್ಕತಾ: ಬಂಗಾಲಿ ಸಂಸ್ಕೃತಿ- ಭಾಷೆಯ ಹಿತಕ್ಕೆ ಆದ್ಯತೆ, ದೀದಿ ಸರಕಾರ ವಿಧಿಸಿದ್ದ ಎಲ್ಲ ಅಡೆತಡೆಗಳ ನಿರ್ಮೂಲನೆ, ಬಡ ಮಧ್ಯಮವರ್ಗದ ಕಲ್ಯಾಣಕ್ಕೆ ಒತ್ತು, ಸಿಎಎ ಜಾರಿ… ಇದು ಪಶ್ಚಿಮ ಬಂಗಾಳದ ಗದ್ದುಗೆ ಏರುವ ಛಲದಲ್ಲಿರುವ ಬಿಜೆಪಿ, ರವಿವಾರ ಮಂಡಿಸಿದ ಚುನಾವಣ ಪ್ರಣಾಳಿಕೆಯ ತಿರುಳು! ಬಹುನಿರೀಕ್ಷಿತ ಪ್ರಣಾಳಿಕೆಯನ್ನು ಗೃಹ ಸಚಿವ ಅಮಿತ್‌ ಶಾ ಬಿಡುಗಡೆ ಮಾಡಿದರು.

Advertisement

ಬಂಗಾಲಿ ಸಂಸ್ಕೃತಿಗೆ ಒತ್ತು: ಪ್ರಣಾಳಿಕೆಯಲ್ಲಿ ಬಿಜೆಪಿ ಮುಖ್ಯವಾಗಿ ದುರ್ಗೆಯನ್ನು ಜಪಿಸಿದೆ. “ಕೋಲ್ಕತಾದ ದುರ್ಗಾ ಪೂಜೆ ಪರಂಪರೆಯನ್ನು ಜಾಗತಿಕ ಉತ್ಸವವಾಗಿ ಆಚರಣೆ, ಯಾವುದೇ ನಿರ್ಬಂಧಗಳಿಲ್ಲದೆ ಸರಸ್ವತಿ, ದುರ್ಗಾ ಪೂಜೆ ಆಚರಿಸಲು ಜನತೆಗೆ ಅವಕಾಶ, ಬಂಗಾಲದ ಕಲೆ ಮತ್ತು ಸಂಸ್ಕೃತಿ ಉತ್ತೇಜನಕ್ಕೆ 11 ಸಾವಿರ ಕೋಟಿ ರೂ.ಗಳ ಸೋನಾರ್‌ ಬಾಂಗ್ಲಾ ಪ್ಯಾಕೇಜ್‌’ ಅನ್ನು ಶಾ ಘೋಷಿಸಿದ್ದಾರೆ.

“ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಗೆ ಉತ್ತೇಜನ, ಬಂಗಾಲಿ ಭಾಷೆಯಲ್ಲೇ ತಾಂತ್ರಿಕ ಶಿಕ್ಷಣ, ಸರ್ಕಾರಿ ಕಡತಗಳಿಗೆ ಕಡ್ಡಾಯ ಬಂಗಾಲಿ ಅಳವಡಿಕೆ, ಕೋಲ್ಕತಾ- ಸಿಲಿಗುರಿ ನಡುವೆ 675 ಕಿ.ಮೀ. ನೇತಾಜಿ ಎಕ್ಸ್‌ಪ್ರಸ್‌ ರೈಲು ಮಾರ್ಗ ನಿರ್ಮಿಸುತ್ತೇವೆ’ ಎಂದು ಪ್ರಕಟಿಸಿದ್ದಾರೆ.

“ತಡೆ’ಗಳಿಗೆ ತೆರವು: ಕೇಂದ್ರದ ಯೋಜನೆಗಳಿಗೆಲ್ಲ ದೀದಿ ತಡೆಗೋಡೆಯಂತಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿತ್ತು. “ಅಧಿಕಾರಕ್ಕೇರಿದ ಕೆಲವೇ ಕ್ಷಣಗಳಲ್ಲಿ ಕಳೆದ 3 ವರ್ಷಗಳಿಂದ ಮಮತಾ ತಡೆಹಿಡಿದಿದ್ದ ಕಿಸಾನ್‌ ಸಮ್ಮಾನ್‌ ನಿಧಿಯ 18 ಸಾವಿರ ಕೋಟಿ ರೂ. ಹಣವನ್ನು ಬಂಗಾಲದ 75 ಲಕ್ಷ ರೈತರ ಖಾತೆಗೆ ವರ್ಗಾಯಿಸುತ್ತೇವೆ’ ಎಂದು ವಾಗ್ಧಾನ ನೀಡಿದ್ದಾರೆ. ಅಲ್ಲದೆ ಅಂಫಾನ್‌, ಆಲಿಯಾ ಮತ್ತು ಬುಲ್‌ಬುಲ್‌ ಸೈಕ್ಲೋನ್‌ನ ಸಂತ್ರಸ್ತರ ಪರಿಹಾರ ನಿಧಿ ದುರ್ಬಳಕೆ ಕುರಿತು ತನಿಖೆ ನಡೆಸುವುದಾಗಿಯೂ ಘೋಷಿಸಿದ್ದಾರೆ.

“ಬಡ- ಮಧ್ಯಮ’ ಕಲ್ಯಾಣ: “ಸರಕಾರಿ ಕ್ಯಾಂಟೀನ್‌ ಸ್ಥಾಪಿಸಿ 5 ರೂ. ದರದಲ್ಲಿ ಮೂರು ಹೊತ್ತು ಭೋಜನ ಪೂರೈಕೆ, 5 ವರ್ಷಗಳವರೆಗೆ ಪ್ರತೀ ನಿರಾಶ್ರಿತ ಕುಟುಂಬಗಳಿಗೆ ವಾರ್ಷಿಕ 10 ಸಾವಿರ ರೂ. ನಿಧಿ ನೆರವು, ಪ್ರತೀ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ, ಸರಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.30 ಮೀಸಲಾತಿ ನೀಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

Advertisement

7ನೇ ವೇತನ ಆಯೋಗ ಜಾರಿ, ಬಂಗಾಲದ ದೂರದ ಪ್ರದೇಶಗಳಲ್ಲಿ 3 ಹೊಸ ಎಐಐಎಂಎಸ್‌ ಆಸ್ಪತ್ರೆ ನಿರ್ಮಾಣ, ಬಂಗಾಲದ ಖ್ಯಾತ ಫ‌ುಟ್ಬಾಲ್‌ ತಾರೆ ಸೈಲೆನ್‌ ಮನ್ನಾ ಸ್ಮರಣಾರ್ಥ  ಕ್ರೀಡಾ ವಿವಿ ಸ್ಥಾಪನೆ, ಮಹಿಳಾ ಪೊಲೀಸ್‌ ತುಕಡಿ 12ಕ್ಕೆ ಏರಿಕೆ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು- ಇವು ಬಿಜೆಪಿಯ ಇನ್ನಿತರ ಪ್ರಮುಖ ಆಶ್ವಾಸನೆಗಳು.

ಮೆಟ್ರೋ ಮ್ಯಾನ್‌ ಪರ ತೇಜಸ್ವಿ ಪ್ರಚಾರ :

ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸರಕಾರಗಳೆಲ್ಲ “ಮೆಟ್ರೋ ಮ್ಯಾನ್‌’ ಇ. ಶ್ರೀಧರನ್‌ ಅವರ ಪ್ರಮುಖ ಯೋಜನೆಗಳನ್ನು ಹೊಂದಿವೆ. ಕೇರಳದ ಜನ ಅವರನ್ನು ತೆರೆದ ತೋಳುಗಳಿಂದ ಸ್ವಾಗತಿಸಿದ್ದಾರೆ. ಜನಸೇವೆಗಾಗಿ ಮುಂದೆ ಬಂದಿರುವ ಅಂಥ ವ್ಯಕ್ತಿಯನ್ನು ಕೇರಳ ಖಂಡಿತಾ ಆಶೀರ್ವದಿಸಲಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾಲಕ್ಕಾಡ್‌ನ‌ಲ್ಲಿ ಶ್ರೀಧರನ್‌ ಪರವಾಗಿ ರ್ಯಾಲಿಯಲ್ಲಿ ಅವರು, “ಬಿಜೆಪಿ ಮಾತ್ರ ಕೇರಳಕ್ಕೆ ವೇಗದ ಪ್ರಗತಿ ನೀಡಬಲ್ಲದು’ ಎಂದಿದ್ದಾರೆ.

 ಅಮ್ಮನ ಸ್ಟೈಲಿನಲ್ಲಿ ಸ್ಟಾಲಿನ್‌ ಪ್ರಚಾರ :

ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ತಮಿಳುನಾಡಿನಲ್ಲಿ “ಅಮ್ಮ’ನ ಸ್ಟೈಲಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಜನಪ್ರಿಯ ಸಾಲುಗಳನ್ನೇ ಭಾಷಣಕ್ಕೆ ಅಳವಡಿಸಿಕೊಂಡಿದ್ದಾರೆ. “ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಅಭ್ಯರ್ಥಿಗಳನ್ನು ನೀವು ಚುನಾವಣೆಯಲ್ಲಿ ಗೆಲ್ಲಿಸುತ್ತೀರಾ? ಪ್ರಾಮಿಸ್‌ ಮಾಡಿ…’ ಎಂದು ಜನತೆ ಬಳಿ ಭಾಷೆ ತೆಗೆದುಕೊಂಡ ದೃಶ್ಯ ತಿರುನೆಲೆಧೀÌಲಿ ರ್ಯಾಲಿ ವೇಳೆ ಕಂಡುಬಂತು. ಅಮ್ಮ ತಮ್ಮ ಪ್ರತೀ ಭಾಷಣದಲ್ಲೂ ಈ ಡೈಲಾಗ್‌ ಹೇಳುತ್ತಿದ್ದರು.

ಓವರ್‌ ಕಾನ್ಫಿಡೆನ್ಸ್‌ನಲ್ಲಿ ಎಐಎನ್‌ಆರ್‌ಸಿ :

ಪುದುಚೇರಿಯಲ್ಲಿ ಕಾಂಗ್ರೆಸ್‌ ಸರಕಾರವನ್ನು ಉರುಳಿಸಿದ ಖುಷಿಯಲ್ಲಿರುವ ಎನ್‌ಡಿಎ ಬಳಗದ ಪ್ರಮುಖ ಪಕ್ಷ ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌ನ (ಎಐಎನ್‌ಆರ್‌ಸಿ) ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಲ್ಲೂ ಆ ಉತ್ಸಾಹ ತೋರ್ಪಡಿಸಿದ್ದಾರೆ. ಚುನಾವಣೆಗೂ ಪೂರ್ವದಲ್ಲಿ ಎಐಎನ್‌ಆರ್‌ಸಿ ಸೇರಿದ್ದ ಮಾಜಿ ಸಚಿವರು, ಶಾಸಕರು ಪಕ್ಷ ಟಿಕೆಟ್‌ ಘೋಷಿಸುವುದಕ್ಕೂ ಮುನ್ನವೇ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.

ಸಪುಯಿ ಮನೆಗೆ ಲಿಂಬಾವಳಿ ಭೇಟಿ :

ಪಶ್ಚಿಮ ಬಂಗಾಲದ ಕಾಕ್‌ದೀಪ್‌ನಲ್ಲಿ ವಿಸ್ತಾರ­ಕರಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪಂಕರ್‌ ಸಪುಯಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಬಂಗಾಲದಲ್ಲಿ ಬಿಜೆಪಿ ಉಸ್ತುವಾರಿ ಹೊಣೆ ವಹಿಸಿಕೊಂಡಿರುವ ಕರ್ನಾಟಕದ ಸಚಿವ ಅರವಿಂದ ಲಿಂಬಾವಳಿ ಅವರು ಮೃತನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಬಿಜೆಪಿ ಸ್ಕೀಮ್‌, ಟಿಎಂಸಿ ಸ್ಕ್ಯಾಮ್‌ :

ಜನತೆ ಹಿತಕ್ಕಾಗಿ ಬಿಜೆಪಿ ಸ್ಕೀಮ್‌ಗಳನ್ನು ತಂದರೆ, ಟಿಎಂಸಿ ಸ್ಕ್ಯಾಮ್‌ಗಳನ್ನು ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ರೀತಿಯ ಭ್ರಷ್ಟಾಚಾರಗಳೂ ಕೊನೆಗೊಳ್ಳಲಿವೆ.

ಕೋಲ್ಕತಾದ ಬೀದಿಗಳಲ್ಲಿ ಟಿಎಂಸಿ ಸದಸ್ಯರು, ನನ್ನ ತಲೆಯನ್ನು ಮಮತಾ ಫ‌ುಟ್ಬಾಲ್‌ ರೀತಿ ಒದೆಯುವಂತೆ ಚಿತ್ರಿಸಿದ್ದಾರೆ. ಇದು ದೀದಿ ಬಂಗಾಲಿ ಸಂಸ್ಕೃತಿಗೆ ಮಾಡಿದ ಅವಮಾನ.

ಬಂಗಾಲದ ಜನತೆಯ ಕನಸು, ಆಕಾಂಕ್ಷೆಗಳನ್ನು ಒದೆಯಲು ಮಮತಾಗೆ ರಾಜ್ಯದ ಜನ ಅವಕಾಶ ಕೊಡುವುದಿಲ್ಲ. ದೀದಿ ತಡೆಹಿಡಿದ ಕೇಂದ್ರದ ಎಲ್ಲ ಯೋಜನೆಗಳನ್ನೂ ಜಾರಿಮಾಡುತ್ತೇವೆ.

“ಕಾಂಗ್ರೆಸ್‌ ಬೊಕ್ಕಸ ಖಾಲಿ’ :

ಕಾಂಗ್ರೆಸ್‌ನ ಖಜಾನೆ ಈಗ ಖಾಲಿ ಆಗಿದೆ. ಅದನ್ನು ಭರ್ತಿ ಮಾಡಲು ಅವರು ಎಷ್ಟೇ ಖರ್ಚು ಮಾಡಿಯಾದರೂ ಅದು  ಅಧಿಕಾರಕ್ಕೇರಲು ಹವಣಿಸುತ್ತಿದೆ.

ಕಾಂಗ್ರೆಸ್‌ ಅಂದ್ರೆ ಸುಳ್ಳು, ಬರೀ ಗೊಂದಲ, ಹಿಂಸಾಚಾರ, ಭ್ರಷ್ಟಾಚಾರ… ಉದ್ಯೋಗ, ಮಹಿಳಾ ಸಶಕ್ತೀಕರಣ ಕುರಿತು ಅವರು ನೀಡುವ ವಚನಗಳೆಲ್ಲ ಬರೀ ಸುಳ್ಳು.

ಕೇಂದ್ರದಲ್ಲಿ ಕಾಂಗ್ರೆಸ್‌ ಇದ್ದಾಗ, ಇಲ್ಲೂ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆಗ ರಾಜ್ಯ ದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ನಿರ್ಲಕ್ಷ್ಯ, ಒಳನುಸುಳುವಿಕೆ ಎಲ್ಲವೂ ದುಪ್ಪಟ್ಟಾಗಿತ್ತು.

ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಅಸ್ಸಾಮಿನ ಜನ ಬಾಂಬ್‌ ಸ್ಫೋಟ,  ಬಂದೂಕು- ಹಿಂಸಾಚಾರ, ಶಾಂತಿಭಂಗಗಳಿಂದ ಮುಕ್ತರಾಗುತ್ತಾರೆ ಎಂದು ಯೋಚಿಸುತ್ತಲೂ ಇರಲಿಲ್ಲ.

“ದುರ್ಗೆ ಪೂಜಿಸಿದರ್ರೆ ಮಕ್ಕಳಿಗೆ ಏಟು!’ :

“ಟಿಎಂಸಿ ಆಡಳಿತದಲ್ಲಿ ಮಕ್ಕಳು ಶಾಲೆಯಲ್ಲಿ ದುರ್ಗಾ, ಸರಸ್ವತಿ ಪೂಜೆ ಮಾಡಿದರೆ, ಶಿಕ್ಷಕರು ಮಕ್ಕಳಿಗೆ ಹೊಡೆಯುತ್ತಿದ್ದರು. ಕೊನೆಗೆ ಕೋರ್ಟ್‌ ಮಧ್ಯಪ್ರವೇಶಿಸಿ, ಈ ಪ್ರವೃತ್ತಿಗೆ ತಡೆಹಾಕಿತ್ತು. ಬಂಗಾಲದಲ್ಲಿ ಧಾರ್ಮಿಕ ಉತ್ಸವ ಆಚರಿಸುವುದನ್ನು ತಡೆಯಲು ಯಾರಿಂ­ದಲೂ ಸಾಧ್ಯವಿಲ್ಲ’ ಎಂದು ಗೃಹ ಸಚಿವ ಅಮಿತ್‌ ಶಾ ಗುಡುಗಿದ್ದಾರೆ.

ಬಂಗಾಲದ ಎಗ್ರಾದಲ್ಲಿ ಮಾತನಾಡಿದ ಅವರು, “ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಬಂಗಾಲದ ಜನತೆ ಯಾವುದೇ ಅಡೆತಡೆಗಳಿಲ್ಲದೆ ದುರ್ಗಾ, ಸರಸ್ವತಿ ಪೂಜೆಗಳನ್ನು ಆಚರಿಸಬಹುದು’ ಎಂದಿದ್ದಾರೆ.

ಬಿಜೆಪಿಗೆ ಸುವೇಂದು ತಂದೆ: ನಿರೀಕ್ಷೆಯಂತೆ ನಂದಿಗ್ರಾಮ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ತಂದೆ, ಟಿಎಂಸಿ ಸಂಸದ ಸಿಸಿರ್‌ ಕುಮಾರ್‌ ಅಧಿಕಾರಿ ಕೂಡ ಕೇಸರಿ ಪಕ್ಷ ಸೇರಿದ್ದಾರೆ. ಪೂರ್ವ ಮಿಡ್ನಾಪೋರ್‌ನ ರ್ಯಾಲಿಯಲ್ಲಿ ಅಮಿತ್‌ ಶಾ ಸಮ್ಮುಖದಲ್ಲಿ ಅವರಿಗೆ ಕಮಲ ಧ್ವಜ ಹಸ್ತಾಂತರಿಸಲಾಯಿತು.

ದೇಶದ ಚಿತ್ತ ಕದ್ದ ಗ್ರಾಮ :

ಜಿದ್ದಾಜಿದ್ದಿ:  ಮಮತಾ ಬ್ಯಾನರ್ಜಿ (ಟಿಎಂಸಿ), ಸುವೇಂದು ಅಧಿಕಾರಿ (ಬಿಜೆಪಿ), ಮೀನಾಕ್ಷಿ ಮುಖರ್ಜಿ (ಎಡಪಕ್ಷ) ಕೋಲ್ಕತಾದಿಂದ 131 ಕಿ.ಮೀ. ದೂರದ, ಪೂರ್ವ ಮಿಡ್ನಾಪುರದ ನಂದಿಗ್ರಾಮ ಕಿರು ಅವಧಿಯಲ್ಲಿ ದಟ್ಟ ರಾಜಕೀಯ ಇತಿಹಾಸ ಬರೆದ ಕ್ಷೇತ್ರ. 2007ರಲ್ಲಿ ವಿಶೇಷ ಆರ್ಥಿಕ ವಲಯಕ್ಕಾಗಿ ಇಲ್ಲಿನ ಭೂ ಒತ್ತುವರಿಗೆ ಕೈಹಾಕಿದ್ದ ಕಮ್ಯೂನಿಸ್ಟ್‌ ಸರಕಾರ, ಇದರಿಂದ ಭಾರೀ ಬೆಲೆತೆತ್ತಿದ್ದು, ಈ ಹೋರಾಟದಿಂದ‌ ಮುಖೇನ ಮಮತಾ ಬ್ಯಾನರ್ಜಿ ಅಧಿಕಾರದ ಗದ್ದುಗೆಗೆ ಏರಿದ್ದೆಲ್ಲವೂ ಇತಿಹಾಸ.

ಮಮತಾಗೆ ಆ ದಿನಗಳಿಂದಲೂ ಜತೆಗಿದ್ದ ಆಪ್ತ ಸುವೇಂದು ಅಧಿಕಾರಿಯೇ ಬಿಜೆಪಿ ಅಭ್ಯರ್ಥಿಯಾಗಿ, “ಭೂಮಿಪುತ್ರ’ನಾಗಿ ಸವಾಲೊಡ್ಡಿದ್ದಾರೆ. ವೈಯಕ್ತಿಕ ವರ್ಚಸ್ಸಿಗಿಂತ, ಸುವೇಂದು ಇಷ್ಟು ವರ್ಷ ಪಕ್ಷದ ಹಿತಕ್ಕೇ ಆದ್ಯತೆ ಕೊಟ್ಟಿದ್ದ ಕಾರಣ ಇಲ್ಲಿ ಟಿಎಂಸಿ ಬೇರುಗಳು ಇನ್ನೂ ಭದ್ರವಾಗಿವೆ.  2016 ಟಾಮುÉಕ್‌ ಸಂಸತ್‌ ಕ್ಷೇತ್ರದ ಉಪಚುನಾವಣೆಯಲ್ಲಿ ಇಲ್ಲಿ ಬಿಜೆಪಿ 2 ಲಕ್ಷ ಮತ, 2019ರ ಸಂಸತ್‌ ಚುನಾವಣೆಯಲ್ಲಿ 5.34 ಲಕ್ಷ ಮತ ಸಂಪಾದಿಸಿ ಟಿಎಂಸಿಗೆ ಭಾರೀ ಪೈಪೋಟಿ ನೀಡಿತ್ತು. ಹೀಗಾಗಿ ಸುವೇಂದುಗೆ ಇಲ್ಲಿ ಹೊಸತಾಗಿ ಬಿಜೆಪಿಯ ಮತಕಟ್ಟುವ ಆವಶ್ಯಕತೆ ಇಲ್ಲ. ಶೇ.70 ಹಿಂದೂ, ಶೇ.30 ಮುಸ್ಲಿಮ್‌ ಮತದಾರರು ಇಲ್ಲಿದ್ದಾರೆ. ಸುವೇಂದು “ಶೇ.70’ರ ಮೇಲಷ್ಟೇ ನಂಬಿಕೆ ಇಟ್ಟಿದ್ದಾರೆ. ಮಮತಾ ವಿರುದ್ಧ “ಹಿಂದೂ ವಿರೋಧಿ’ ಅಸ್ತ್ರ ಬಳಸಿದ್ದಾರೆ. ಈ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಮಮತಾ, “ನಾನು ಬ್ರಾಹ್ಮಣ ಪುತ್ರಿ’ ಎನ್ನುತ್ತಾ, ರ್ಯಾಲಿಗಳಲ್ಲೂ ದುರ್ಗಾ ಸ್ತ್ರೋತ್ರ ಪಠಿಸುತ್ತಾ, ಒಂದೇ ದಿನ 19 ದೇಗುಲ ಪ್ರದಕ್ಷಿಣೆ ಹಾಕಿ, ಹಿಂದೂಗಳ ವಿಶ್ವಾಸಕ್ಕೆ ಯತ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next