Advertisement

ನಿಮಗೇನೂ ಆಗಲ್ಲ ವೀ, ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮೊಂದಿಗಿದೆ

01:55 PM Apr 14, 2020 | |

ಬೆಂಗಳೂರು: ಸುಪಾರಿ ಹತ್ಯೆ ಯತ್ನ ಪ್ರಕರಣದಲ್ಲಿ ರವಿ ಬೆಳಗೆರೆ ಬಂಧನವಾಗುತ್ತಿದ್ದಂತೆ ನಾಪತ್ತೆಯಾಗಿದ್ದಲ್ಲದೇ, ತಮ್ಮ ಫೇಸ್‌ಬುಕ್‌ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದ ರವಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ, ಸೋಮವಾರ ಪತಿಗೆ ನ್ಯಾಯಾಂಗ ಬಂಧನವಾಗುತ್ತಿದ್ದಂತೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ರವಿ ಬೆಳಗೆರೆಗೆ ಬೆಂಬಲವಾಗಿ ನಿಂತಿದ್ದಾರೆ.

Advertisement

ಘಟನೆ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಯಶೋಮತಿ, ಬೆಳಗೆರೆಗೆ ಧೈರ್ಯ ತುಂಬಿ ಬರೆದಿರುವ ಒಕ್ಕಣೆ ಹೀಗಿದೆ;
“ಮೊನ್ನೆ ತಾನೇ ನಡೆದ ಹಿಮನ ಬರ್ತ್‌ಡೇಯ ಫೊಟೋಗಳನ್ನು ನೋಡುತ್ತಾ ಕುಳಿತಿದ್ದೆ. ಅದರಲ್ಲಿ ಕೆಲವನ್ನು ಆಯ್ಕೆ ಮಾಡಿ ರವಿಗೆ ಕಳಿಸಬೇಕು ಅಂದುಕೊಳ್ಳುವಷ್ಟರಲ್ಲಿ… ಯಶೂ ಮಾ ಎಲ್ಲಿದ್ದೀರಾ?

ಸ್ವಲ್ಪ ಟಿವಿ ನೋಡಿ ಅಂದ ಕೂಡಲೇ ಅದನ್ನು ಅಲ್ಲೇ ಬಿಟ್ಟು ಟಿವಿ ಆನ್‌ ಮಾಡಿದವಳ ಕಿವಿಗೆ ಮೊದಲು ರಾಚಿದ್ದೇ ನನ್ನ ಹೆಸರು! ಏನಾಗ್ತಿದೆ? ನನ್ನ ಹೆಸರು ಯಾಕೆ ಬರುತ್ತಿದೆ. ಅದೂ ನಂಗೇ ಗೊತ್ತಿಲ್ಲದೇ… ಹಿಮ ಬೇರೆ ಸ್ಕೂಲಿಂದ ಬರುವ ಹೊತ್ತಾಗಿತ್ತು. ಮೊದಲು ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ. ರಾತ್ರಿಯಿಡೀ ಒಂದೇ ಸಮನೆ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳು ಕಿವಿಗೆ ಕಾದ ಸೀಸದಂತೆ ಬೀಳುತ್ತಿದ್ದವು.

ಕಚೇರಿಯ ಫೋನ್‌ಗಳೆಲ್ಲ ಪೊಲೀಸರ ವಶದಲ್ಲಿದ್ದವು. ಹಾಗಾಗಿ ಎಲ್ಲಿಂದಲೂ ಉತ್ತರ ಸಿಗುತ್ತಿಲ್ಲ. ಸರಿ, ಆದದ್ದಾಗಲಿ ನೋಡೋಣ ಭಗವಂತನೊಬ್ಬನಿದ್ದಾನೆ ಅಂದು ಧೈರ್ಯವಾಗಿ ಕುಳಿತವಳಿಗೆ ಅಮ್ಮ, ತಂಗಿ, ಅಣ್ಣನ ಮಗನ ಜೊತೆಗೆ ಗೆಳತಿಯರ ಧೈರ್ಯ ತುಂಬುವ ಸಂದೇಶಗಳು ಜೊತೆಯಾದವು. ಅಮ್ಮಾ ಯಾವುದಕ್ಕೂ ಹೆದರಿಕೊಳ್ಳಬೇಡ. ಏನೇ ಬಂದ್ರೂ ಧೈರ್ಯವಾಗಿ ಎದುರಿಸು…ಅಂದ ಹಿಮ.

ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ರಿವೇಂಜಿಗಿಳಿದಿವೆ. ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ.. “ಏನೂ ಯೋಚನೆ ಮಾಡಬೇಡ ನಂಗೇನೂ ಆಗಲ್ಲ ‘ ಅಂತ ಚೆಲ್ಲಿ ಹೋದ ರವಿಯ ನಗುವೇ ಮನೆ ಮನ ತುಂಬಿದೆ. ಅದೇ ನಿರೀಕ್ಷೆಯಲ್ಲಿದ್ದೇವೆ ನಾನು, ಹಿಮ.

Advertisement

ನಿಮಗೇನೂ ಆಗಲ್ಲ ವೀ. ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮೊಂದಿಗಿದೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ.

ರವಿ ಬೆಳಗೆರೆ ಕನ್ನಡದ ಸನ್ನಿಲಿಯೋನ್‌: ಅಗ್ನಿಶ್ರೀಧರ್‌
“ಹಾಯ್‌ ಬೆಂಗಳೂರು’ ಸಂಪಾದಕ ರವಿಬೆಳಗೆರೆ ಕನ್ನಡಕ್ಕೆ ಬಾಲಿವುಡ್‌ ಚಿತ್ರನಟಿ “ಸನ್ನಿಲಿಯೋನ್‌’ ಇದ್ದಂತೆ ಎಂದು ಅಗ್ನಿ ಪತ್ರಿಕೆ ಸಂಪಾದಕ ಅಗ್ನಿ ಶ್ರೀಧರ್‌ ಟೀಕಿಸಿದರು. ಸೋಮವಾರ ನಗರದ ಇಸ್ರೋ ಲೇಔಟ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಕಾಮ(ಸೆಕ್ಸ್‌) ಮತ್ತು ಅಪರಾಧ ವಿಷಯಗಳೆಂದರೆ ಆಸಕ್ತಿ.

ಇದನ್ನೆ ರವಿಬೆಳಗೆರೆ ಬಂಡವಾಳ ಮಾಡಿಕೊಂಡು, ಪತ್ರಿಕಾರಂಗವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೇವಲ ಲೈಂಗಿಕತೆ ಮತ್ತು ಹಿಂಸೆಯನ್ನು ಪತ್ರಿಕೆಯಲ್ಲಿ ಬಿಂಬಿಸುತ್ತಿದ್ದ. ಒಂದು ರೀತಿ ಆತ ಕನ್ನಡಕ್ಕೆ ಸನ್ನಿ ಲಿಯೋನ್‌ ಇದ್ದಂತೆಯೇ ಎಂದರು. ರವಿಬೆಳಗೆರೆ ಅಪರಾಧ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಕೆಳಕ್ಕೆ ಬಿದ್ದವರಿಗೆ ಇನ್ನೊಂದು ಕಲ್ಲು ಹಾಕಬಾರದು.

ಪರದೆಯ ಬದುಕು ನಮ್ಮದು, ಆದರೆ, ಬೆಳಗೆರೆ ಅವರು ತಮ್ಮ ಮೂಲ ಉದ್ದೇಶವನ್ನೇ ಮರೆತಿದ್ದಾರೆ. ಎರಡು ವರ್ಷದ ಹಿಂದೆ ಆದ ಪ್ರಕರಣದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದ್ದಾಗಿ ರವಿಬೆಳಗರೆ ಮಾತನಾಡಿದ್ದ. ಮಹಿಳೆಯರ ಬಗ್ಗೆ ಬೆಳಗೆರೆ ಬಳಸುವ ಪದ ಅತ್ಯಂತ ಕೀಳಾಗಿದ್ದು, ಇಷ್ಟೆಲ್ಲಾ ಆದ ಮೇಲಾದರೂ ಬದಲಾಗಲಿ ಅನ್ನೋದೆ ನನ್ನ ಆಶಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next