ಪುಟ್ಟನ ಮನೆಯಂಗಳದಲ್ಲಿ ಇಳಿದ ರಾಕೆಟ್‌ನಿಂದ ದನಿ ಕೇಳಿ ಬಂತು. “ನಾವು ಚಂದ್ರನಲ್ಲಿ ಕಳೆದುಹೋಗಿರುವ ದೇಶದ ವಿಕ್ರಮ್ ಲ್ಯಾಂಡರ್ ಆಕಾಶ ನೌಕೆಯನ್ನು ಪತ್ತೆ ಹಚ್ಚೋಣಾ. ಬರುತ್ತೀಯಾ?’ ಎಂದು ಕೇಳಿತು ಆ ಧ್ವನಿ. ಅಚ್ಚರಿಯಿಂದ ಪುಟ್ಟ “ನನಗೆ ಬರುವುದಕ್ಕೇನೋ ಇಷ್ಟ. ಆದರೆ ನಾಳೆ ಶಾಲೆಗೆ ಹೋಗಬೇಕಲ್ಲ’ ಎಂದನು. “ಚಿಂತೆ ಬೇಡ. ಈ ರಾಕೆಟ್‌ನಲ್ಲಿ ಬಹಳ ಬೇಗ ಹೋಗಿ ವಾಪಸ್ ಬಂದುಬಿಡಬಹುದು’ ಎಂದಿತು ಆ ಅಶರೀರವಾಣಿ.
ಅವತ್ತು ದೇಶವೇ ಬೇಸರದಲ್ಲಿ ಮುಳುಗಿತ್ತು. ಭಾರತ ಚಂದ್ರನ ಬಳಿ ಕಳಿಸಿದ್ದ ನೌಕೆಯ ಜೊತೆ ಸಂಪರ್ಕ ಕಡಿದುಹೋಗಿದೆ, ಅದು ನಿಯಂತ್ರಣ ತಪ್ಪಿದೆ ಎಂಬ ಸುದ್ದಿಯೇ ಅದಕ್ಕೆ ಕಾರಣವಾಗಿತ್ತು. ಹಾಗಿದ್ದೂ ಭಾರತದ ಚಂದ್ರಯಾನ ಪ್ರಯತ್ನವನ್ನು ಪ್ರಪಂಚವೇ ಹೊಗಳುತ್ತಿತ್ತು. ಆದರೂ ಪುಟ್ಟನಿಗೆ ಬೇಸರ. ಅಯ್ಯೋ ಯಾಕೆ ಹೀಗಾಯ್ತು? ಮತ್ತೆ ಅದರ ಸಂಪರ್ಕ ಸಾಧ್ಯವಿಲ್ಲವೇ? ಹೇಗೆ ಸಂಪರ್ಕ ಸಾಧಿಸುವುದು? ಎಂದು ರಾತ್ರಿ ಇಡೀ ಯೋಚಿಸುತ್ತಿದ್ದ. ಆವಾಗ ಪುಟ್ಟನಿಗೆ ಬಾಲ್ಕನಿಯಲ್ಲಿ ಸದ್ದಾದಂತಾಯಿತು. ಮೆಲ್ಲಗೆ ಅತ್ತಕಡೆ ಎದ್ದು ಹೋದ. ಹೋಗಿ ನೋಡಿದಾಗ ಒಂದು ಸಣ್ಣ ರಾಕೆಟ್ ತಮ್ಮ ಮನೆಯ ಅಂಗಳದಲ್ಲಿ ಇಳಿದಿದ್ದು ಕಂಡಿತು. ಅವನಿಗೆ ತನ್ನ ಕಣ್ಣನ್ನು ನಂಬಲಾಗಲೇ ಇಲ್ಲ. ಆಶ್ಚರ್ಯದಿಂದ ನೋಡುತ್ತಾ ನಿಂತವನಿಗೆ ಅದರ ಒಳಗಿಂದ ಧ್ವನಿ ಕೇಳಿ ಇನ್ನೂ ಅಚ್ಚರಿಯಾಯಿತು.
“ಹಲ್ಲೋ ಪುಟ್ಟಾ ಹೇಗಿದ್ದಿಯಾ? ನನ್ನೊಡನೆ ಬರುವೆಯಾ? ನಾವು ಚಂದ್ರನಲ್ಲಿ ಕಳೆದು ಹೋಗಿರುವ ವಿಕ್ರಮ್ ಲ್ಯಾಂಡರ್ ಆಕಾಶ ನೌಕೆ ಏನಾಯಿತು ಎಂದು ಪತ್ತೆ ಹಚ್ಚಿ ಬರೋಣಾ’ ಎಂದಿತು ಆ ಧ್ವನಿ. “ನನಗೆ ಬರುವುದಕ್ಕೇನೋ ಇಷ್ಟ. ಆದರೆ ನಾಳೆ ಶಾಲೆಗೆ ಹೋಗಬೇಕಲ್ಲ’ ಎಂದನು. “ಚಿಂತೆ ಬೇಡ. ಈ ರಾಕೆಟ್‌ನಲ್ಲಿ ಬಹಳ ಬೇಗ ಹೋಗಿ ವಾಪಸ್ ಬಂದುಬಿಡಬಹುದು’ ಎಂದಿತು ಆ ಅಶರೀರವಾಣಿ. ಒಡನೆಯೇ ಪುಟ್ಟ ತಡ ಮಾಡದೆ ಶೂ, ಜಾಕೆಟ್, ಟೋಪಿ ಎಲ್ಲಾ ಹಾಕಿಕೊಂಡು ಬಂದ. “ಬೇಗ ರಾಕೆಟ್ ಹತ್ತಿ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೋ’ ಎಂದಿತು ಧ್ವನಿ. ಪುಟ್ಟ ಹಾಗೆಯೇ ಮಾಡಿದ. ಕ್ಷಣ ಮಾತ್ರದಲ್ಲಿ ರಾಕೆಟ್ ಆಕಾಶದೆಡೆಗೆ ಚಿಮ್ಮಿತು.
ಪುಟ್ಟ ಕಿಟಕಿಯಿಂದ ಅಂತರಿಕ್ಷವನ್ನೇ ದಿಟ್ಟಿಸಿ ನೋಡುತ್ತಿದ್ದ. ನಕ್ಷತ್ರಗಳು, ಆಕಾಶಕಾಯಗಳು ಇನ್ನಷ್ಟು ದೊಡ್ಡದಾಗಿ ಕಾಣುತ್ತಿದ್ದವು. ಭೂಮಿ ಪುಟ್ಟ ಚೆಂಡಿನಂತೆ ಕಾಣುತ್ತಿತ್ತು. ಪುಟ್ಟನ ಖುಷಿಗೆ ಪಾರವೇ ಇರಲಿಲ್ಲ. ಇವೆಲ್ಲದರ ಜೊತೆಗೆ ತಮ್ಮ ಕೆಲಸ ಮುಗಿಸಿ ನಿಷ್ಕ್ರಿಯವಾಗಿದ್ದ ಹಲವು ಮಾನವ ನಿರ್ಮಿತ ಉಪಗ್ರಹಗಳು ಅಲ್ಲಲ್ಲಿ ಸುತ್ತುತ್ತಾ ಇರುವುದನ್ನು ಪುಟ್ಟ ನೋಡಿದನು. ಪ್ರಯಾಣ ಮುಂದುವರಿದಂತೆ ಚಂದಮಾಮ ಇನ್ನೂ ಹತ್ತಿರವಾಗುತ್ತಿದ್ದ. ಚಂದ್ರನ ಮೇಲ್ಮೆ„ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕಣ್ಣುಗಳು ವಿಕ್ರಮ್ ಲ್ಯಾಂಡರ್‌ನನ್ನು ಹುಡುಕುತ್ತಿದ್ದವು. ಚಂದ್ರನ ಮೇಲೆ ಫಳಫಳ ಹೊಳೆಯುತ್ತಿದ್ದ ಒಂದು ವಸ್ತು ಪುಟ್ಟನಿಗೆ ಕಂಡಿತು. ಅದು ವಿಕ್ರಮ್ ಲ್ಯಾಂಡರ್ ಆಗಿತ್ತು.
ಪುಟ್ಟ “ಅದೋ ಅಲ್ಲಿ ಹೊಳೆಯುತ್ತಿರುವ ವಸ್ತುವಿನ ಬಳಿಗೆ ಹೋಗು’ ಎಂದು ಕಿರುಚಿದ. ಇನ್ನೇನು ರಾಕೆಟ್ ಅದರ ಹತ್ತಿರ ಹೋಗಬೇಕು, ಅಷ್ಟರಲ್ಲಿ ಎಲ್ಲಿಂದಲೋ ಬಂದ ಉಲ್ಕೆಯೊಂದು ಪುಟ್ಟ ಪ್ರಯಾಣಿಸುತ್ತಿದ್ದ ರಾಕೆಟ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆಯಿತು. “ಅಯ್ಯೋ ಅಮ್ಮಾ’ ಎನ್ನುತ್ತಾ ಪುಟ್ಟ ರಾಕೆಟ್‌ನಿಂದ ಹೊರಕ್ಕೆ ಬಿದ್ದುಬಿಟ್ಟ. ಕಣ್ಣುಬಿಟ್ಟು ನೋಡುತ್ತಾನೆ. ಹಾಸಿಗೆಯಿಂದ ಕೆಳಕ್ಕೆ ಬಿದ್ದಿದ್ದ ಪುಟ್ಟ. ಅಷ್ಟರಲ್ಲಿ ಅಡುಗೆ ಮನೆಯ ಒಳಗಿಂದ ಅಮ್ಮ “ಪುಟ್ಟಾ… ಏನೋ ಅದು ಸದ್ದು?’ ಎಂದು ಕೇಳಿದರು. ಒಡನೆಯೇ ಪುಟ್ಟ “ಏನೂ ಇಲ್ಲಮ್ಮಾ…’ ಎಂದು ಏನೂ ಆಗದವನಂತೆ ಮೇಲಕ್ಕೆದ್ದ. ಅವನ ಮನಸ್ಸು ಮಾತ್ರ ಇನ್ನೂ ಚಂದ್ರನ ಅಂಗಳದಲ್ಲೇ ಗಿರಕಿ ಹೊಡೆಯುತ್ತಿತ್ತು. ಛೆ ಹಾಸಿಗೆಯ ಅಂಚಿಗೆ ಬರದೇ ಇದ್ದರೆ ಕನಸಿನಲ್ಲಾದರೂ ವಿಕ್ರಮ್ ಲ್ಯಾಂಡರ್‌ನ ದರ್ಶನ ಮಾಡಬಹುದಿತ್ತು ಎಂದುಕೊಂಡ ಪುಟ್ಟ ಶಾಲೆಗೆ ಹೋಗಲು ತಯಾರಿ ನಡೆಸಿದ.
– ಪ್ರಕಾಶ್ ಕೆ. ನಾಡಿಗ್, ತುಮಕೂರು