Advertisement

ಸದ್ದಿಲ್ಲದೆ ನಡೆಯುತ್ತಿದೆ “ಓದುವ ಕ್ರಾಂತಿ’…ವೆನ್ಲಾಕ್‌  ಆಸ್ಪತ್ರೆ ವಾರ್ಡ್‌ಗಳಲ್ಲಿ ಪತ್ರಿಕೆ, ಮ್ಯಾಗಝೀನ್‌ ಲಭ್ಯ!

11:07 AM Jan 11, 2023 | Team Udayavani |

ಮಹಾನಗರ: ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರು ಹೊರ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳಿಂದ ಬಹುತೇಕವಾಗಿ ದೂರ ವಾಗಿರುತ್ತಾರೆ. ಅದರಲ್ಲೂ ಸರಕಾರಿ ಆಸ್ಪತ್ರೆಗಳಲ್ಲಿ ವಾರ್ಡ್‌ ಗಳಲ್ಲಿ ಟಿವಿ ಸೌಲಭ್ಯವೂ ಇರುವುದಿಲ್ಲ. ಆದರೆ ದ.ಕ. ಜಿಲ್ಲೆಯ ವೆನ್ಲಾಕ್‌ ಆಸ್ಪತ್ರೆಯ ವಾರ್ಡ್‌ ಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರು ದಿನಪತ್ರಿಕೆಗಳು, ಮ್ಯಾಗ ಝೀನ್ಸ್‌ಗಳನ್ನು ಓದಬಹುದು. ಈ ಮೂಲಕ ವಾರ್ಡ್‌ನ ಹಾಸಿಗೆಯಲ್ಲಿ ಚಿಕಿತ್ಸೆಯ ಜತೆಗೆ ಬಡ ರೋಗಿಗಳು ಜಗತ್ತಿನ ವಿದ್ಯಮಾನವನ್ನು ತಿಳಿಸುವ ಜತೆಗೆ ಓದಿನ ಹವ್ಯಾಸವನ್ನು ಬೆಳೆಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

Advertisement

ನಾಲ್ಕು ತಿಂಗಳುಗಳ ಹಿಂದೆ ಭಾರತೀಯ ರೆಡ್‌ಕ್ರಾಸ್‌, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ ಕ್ರಾಸ್‌, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ವೆನ್ಲಾಕ್‌ ಆಸ್ಪತ್ರೆಯ ಆವರಣದಲ್ಲಿ ಆರಂಭಗೊಂಡ ಸಮುದಾಯ ವಾಚನಾಲಯದ ಮೂಲಕ ಈ ಕಾರ್ಯ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ, ರೆಡ್‌ಕ್ರಾಸ್‌ ಯುನಿಫಾರಂ ಧರಿಸಿದ ಕಾಲೇಜು ವಿದ್ಯಾರ್ಥಿಗಳು ಸಂಜೆ ಹೊತ್ತು ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ತೆರಳಿ ಆ ದಿನಪತ್ರಿಕೆಗಳು, ಮ್ಯಾಗಝೀನ್‌ಗಳನ್ನು ಒದಗಿಸುತ್ತಾರೆ. ಮರುದಿನ ಅವರಿಂದ ವಾಪಸ್‌ ಪಡೆಯುತ್ತಾರೆ.

ವಿಶೇಷವೆಂದರೆ, ವಾಚನಾಲಯಕ್ಕೆ ರೆಡ್‌ಕ್ರಾಸ್‌ ಪ್ರತಿನಿಧಿಗಳು ಅಥವಾ ಆಸಕ್ತರು ತಾವು ಖರೀದಿಸಿ, ಓದಿದ ಬಳಿಕ ನೀಡುವ ಪತ್ರಿಕೆ, ಮ್ಯಾಗಝೀನ್‌ ಗಳನ್ನೇ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಬಡ ರೋಗಿಗಳಲ್ಲಿ ಓದಿನ ಆಸಕ್ತಿ ಬೆಳೆಸುವ ಜತೆಗೆ ಆಯಾ ದಿನದ ವಿದ್ಯಮಾನಗಳ ಬಗ್ಗೆ ತಿಳಿಸುವುದು ಇದರ ಉದ್ದೇಶವಾಗಿದೆ ಎನ್ನುವುದು ವಾಚನಾಲಯದ ಮೇಲ್ವಿ ಚಾರಕರ ಅಭಿಪ್ರಾಯ. “ವಾಚನಾಲಯಕ್ಕೆ ಕೊಡುಗೆಯಾಗಿ, ಉಚಿತವಾಗಿ ನೀಡಲಾಗಿರುವ
ಹಲವು ರೀತಿಯ ಕಥೆ, ಕಾದಂಬರಿ, ವೃತ್ತಿಪರ ತರಬೇತಿಗೆ ಅಗತ್ಯವಾದ ಪುಸ್ತಕಗಳಿದ್ದು, ವಾಚನಾಲಯದಲ್ಲಿ ಬಂದು ಓದುವ ಅವಕಾಶವೂ ಇದೆ.

ವಿವಿಧ ಭಾಷೆಯ ದಿನಪತ್ರಿಕೆಗಳು ಸುಮಾರು ದಿನವೊಂದಕ್ಕೆ 20ರಷ್ಟು ವಾಚನಾಲಯಕ್ಕೆ ಸಹೃದಯಿಗಳು ತಂದು ನೀಡುತ್ತಾರೆ. ಅದನ್ನು ಸಂಜೆ ಹೊತ್ತು ವಾರ್ಡ್ ಗಳಲ್ಲಿ ರೋಗಿಗಳಿಗೆ ನೀಡಲಾಗುತ್ತದೆ. ಆಸಕ್ತರು, ವಾಚನಾಲಯಕ್ಕೆ ಉಚಿತವಾಗಿ ಪತ್ರಿಕೆ, ಪುಸ್ತಕಗಳನ್ನು ಒದಗಿಸುವ ಮೂಲಕ ಸಹಕಾರ ನೀಡಬಹುದು’ ಎನ್ನುತ್ತಾರೆ ವಾಚನಾಲಯದ ಮೇಲ್ವಿಚಾರಕ ಸಫ್ಜಾನ್‌. ಇದಕ್ಕೆ ರೋಗಿಗಳೂ ಸ್ಪಂದಿಸುತ್ತಿದ್ದಾರೆ.ಲಭ್ಯವಾದ ಪತ್ರಿಕೆ, ಮ್ಯಾಗಜಿನ್‌ ಗಳನ್ನು ಓದುವ ಮೂಲಕ ಸಮಯ ಕಳೆಯುತ್ತಿದ್ದಾರೆ. ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಆಸ್ಪತ್ರೆ, ಜನನಿಬಿಡ ಸ್ಥಳಗಳ ಸುತ್ತಮುತ್ತ ಕಂಡುಬರುತ್ತಿದ್ದ ಪುಸ್ತಕ, ಪೇಪರ್‌ ಸ್ಟಾಲ್‌ಗ‌ಳು ಮರೆಯಾಗುತ್ತಿವೆ ಎಂಬ ಕೊರಗಿನ ನಡುವೆ ಆಸ್ಪತ್ರೆಯ ಸಮುದಾಯ ವಾಚನಾಲಯದ ಆಲೋಚನೆ ವಿಭಿನ್ನವಾದದ್ದು.

ಕನ್ನಡ ಪತ್ರಿಕೆಗಳಿಗೆ ಹೆಚ್ಚಿನ ಬೇಡಿಕೆ
“ಪ್ರತಿ ದಿನ ಸುಮಾರು 20ರಷ್ಟು ಪತ್ರಿಕೆಗಳು, ಮ್ಯಾಗಝೀನ್‌ ಗಳನ್ನು ವಾರ್ಡ್‌ಗಳ ರೋಗಿಗಳಿಗೆ ನೀಡಲಾಗುತ್ತಿದೆ. ನನ್ನ ಜತೆ ನಮ್ಮ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿ ರವಿ ಹನಮಸಾಗರ್‌ ಮತ್ತು ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವ ವಿದ್ಯಾರ್ಥಿಗಳೂ ಜತೆಗೂಡುತ್ತಾರೆ. ಕನ್ನಡ ಪತ್ರಿಕೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ವಿವಿಧ ಜಿಲ್ಲೆ, ರಾಜ್ಯಗಳಿಂದ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಓದುವ ಆಸಕ್ತಿಯನ್ನೂ ಇದು ಹೆಚ್ಚಿಸಿದೆ.

Advertisement

ಸ್ವಯಂ ಸೇವಕರಾಗಿ ಈ ಕಾರ್ಯ ಮಾಡುವುದರಿಂದ ರೋಗಿಗಳು ಹಾಗೂ ಅವರ ಜತೆಗಿರುವವರ ಜತೆ ಒಡನಾಟ, ಅವರ ಸಂಕಷ್ಟಗಳನ್ನು ತಿಳಿಯುವ ಅವಕಾಶವೂ ದೊರಕಿದೆ.
-ಎಂ. ಸಾಕ್ಷಿ ಕಿಣಿ,
ವಿದ್ಯಾರ್ಥಿನಿ, ದಯಾನಂದ ಪೈ
ಹಾಗೂ ಸತೀಶ್‌ ಪೈ ಸರಕಾರಿ ಪದವಿ
ಕಾಲೇಜು, ರಥಬೀದಿ

*ಸತ್ಯಾ ಕೆ

 

Advertisement

Udayavani is now on Telegram. Click here to join our channel and stay updated with the latest news.

Next