Advertisement

ವೆನ್ಲಾಕ್  ಹೊಸ ಬ್ಲಾಕ್‌ ಕೋವಿಡ್‌ 19 ಚಿಕಿತ್ಸೆಗೆ ಸಜ್ಜು

02:04 AM Apr 07, 2020 | Sriram |

ಮಂಗಳೂರು: ವೆನ್ಲಾಕ್ ಆಸ್ಪತ್ರೆಯ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ ಕೋವಿಡ್‌ 19 ಶಂಕಿತ ಹಾಗೂ ಸೋಂಕಿತರ ತಪಾಸಣೆಗಾಗಿ ಸಜ್ಜುಗೊಂಡಿದೆ. ಹಿರಿಯ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ಶಂಕಿತ ಅಥವಾ ಸೋಂಕಿತ ರೋಗಿಗಳನ್ನು ಯಾವ ರೀತಿಯಲ್ಲಿ ಉಪಚರಿಸಲಾಗುತ್ತದೆ ಎಂಬ ಬಗ್ಗೆ ಸೋಮವಾರ ಪ್ರಾತ್ಯಕ್ಷಿಕೆ ನಡೆಸಲಾಯಿತು.

Advertisement

ವೆನ್ಲಾಕ್ ಕೃತಕ ಅವಯವ ಕೇಂದ್ರ ಬಳಿಯ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ ಅನ್ನು ಸಂಪೂರ್ಣವಾಗಿ ಕೋವಿಡ್‌ ಬ್ಲಾಕ್‌ ಆಗಿ ಪರಿವರ್ತಿಸಲಾಗಿದೆ. ಸದ್ಯ ಸೋಂಕಿತರು ಹಾಗೂ ಶಂಕಿತ ರೋಗಿಗಳು ಆಸ್ಪತ್ರೆಯ ಆಯುಷ್‌ ಬ್ಲಾಕ್‌ನ ನಿಗಾದಲ್ಲಿದ್ದಾರೆ.

ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ನ ನೂತನ ಕೋವಿಡ್‌ ಬ್ಲಾಕ್‌ನ 3ನೇ ಮಹಡಿಯನ್ನು ಸಂಪೂರ್ಣವಾಗಿ ಕೋವಿಡ್‌ 19 ಶಂಕಿತ ರೋಗಿಗಳಿಗೆ ಮೀಸಲಿಡಲಾಗಿದೆ. ಇಲ್ಲಿ ನಾಲ್ಕು ವಿಭಾಗಗಳಲ್ಲಿ ಒಟ್ಟು 79 ಹಾಸಿಗೆ ಗಳಿವೆ. ಪ್ರತಿ ವಿಭಾಗದಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬಂದಿಗೆ ಡಾನ್ನಿಂಗ್‌ ಹಾಗೂ ಡಾಪ್ಪಿಂಗ್‌ ರೂಂ (ರೋಗಿಯ ಬಳಿ ತೆರಳುವಾಗ ಹಾಕಬೇಕಾದ ಉಡುಪುಗಳನ್ನು ಹಾಕಿಕೊಳ್ಳಲು ಹಾಗೂ ತೆಗೆಯಲು ಪ್ರತ್ಯೇಕವಾದ ಕೊಠಡಿ)ಗಳಿವೆ. ಶಂಕಿತ ರೋಗಿಯ ಗಂಟಲ ದ್ರವ ಸಂಗ್ರಹಕ್ಕೂ ಪ್ರತ್ಯೇಕ ಸುಸಜ್ಜಿತ ಕೊಠಡಿ ಇದೆ. ಶಂಕಿತ ರೋಗಿಗಳ ವರದಿ ಪಾಸಿಟಿವ್‌ ಬಂದಲ್ಲಿ ಅವರನ್ನು 2ನೇ ಮಹಡಿ ಯಲ್ಲಿರುವ ಪಾಸಿಟಿವ್‌ ರೋಗಿಗಳ ವಿಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಒಟ್ಟು 99 ಹಾಸಿಗೆಗಳಿವೆ.

ಸೋಂಕಿತರಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳನ್ನು 1ನೇ ಮಹಡಿಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ 49 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ದ್ವಿತೀಯ ಮತ್ತು ತೃತೀಯ ಮಹಡಿ (ಶಂಕಿತರು ಹಾಗೂ ಪಾಸಿಟಿವ್‌ ರೋಗಿಗಳನ್ನು ಇರಿಸಲಾಗಿರುವ ವಿಭಾಗ)ಗಳಿಗೆ ತೆರಳಬೇಕಾದರೆ ಪ್ರತ್ಯೇಕ ಲಿಫ್ಟ್ಗಳನ್ನು ಮೀಸಲಿಡಲಾಗಿದೆ. ವೆನ್ಲಾಕ್ಆಸ್ಪತ್ರೆಯಲ್ಲಿ ಕೆಎಂಸಿಯ 50 ಮಂದಿ, ಎನ್‌ಎಚ್‌ಎಂನ 44 ಹಾಗೂ 136 ಸರಕಾರಿ ದಾದಿಯರು ಕರ್ತವ್ಯದಲ್ಲಿದ್ದು, ಅವರೆಲ್ಲರ ಸೇವೆಯನ್ನು ಕೋವಿಡ್‌ 19 ಚಿಕಿತ್ಸೆಗೆ ಪಡೆಯಲಾಗುತ್ತಿದೆ.

ಕೋವಿಡ್‌ 19 ಪರೀಕ್ಷಾ ಕೇಂದ್ರಕ್ಕೆ ಅನುಮತಿ
ಕೋವಿಡ್‌ 19 ವೈರಸ್‌ ಪತ್ತೆಗೆ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಲು ನಗರದ ವೆನ್ಲಾಕ್ ಆಸ್ಪತ್ರೆಗೆ ಮಂಜೂರಾಗಿರುವ ಪ್ರಯೋಗಾಲಯಕ್ಕೆ ಐಸಿಎಂಆರ್‌ನ ಅನುಮತಿ ಲಭಿಸಿದೆ.ಪ್ರಯೋಗಾಲಯವು 3 ದಿನ ಗಳ ಹಿಂದೆ ಆರಂಭವಾಗಿದ್ದು, ಪ್ರಾಯೋ ಗಿಕವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈಗ ಅಧಿಕೃತವಾಗಿ ಆರಂಭವಾಗುವುದರೊಂದಿಗೆ ರೋಗಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯನ್ನು ಅಂದಂದೇ ಪಡೆಯಬಹುದಾಗಿದೆ. ಈವರೆಗೆ ಮಾದರಿಯನ್ನು ಹಾಸನ ಅಥವಾ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು

Advertisement
Advertisement

Udayavani is now on Telegram. Click here to join our channel and stay updated with the latest news.

Next