Advertisement

ವೆನ್ಲಾಕ್‌ ಕೋವಿಡ್‌ ಆಸ್ಪತ್ರೆ; ಇತರ ರೋಗಿಗಳಿಗೆ ಸಂಕಷ್ಟ: ಖಾದರ್‌

11:32 AM Jun 04, 2020 | mahesh |

ಮಂಗಳೂರು: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾರ್ಪಡಿಸಿದ್ದರಿಂದ ಜಿಲ್ಲೆ ಹಾಗೂ ನೆರೆಯ ಹಲವಾರು ಜಿಲ್ಲೆಗಳ ಮಧ್ಯಮ ಹಾಗೂ ಬಡ ವರ್ಗದ ಜನರು ಅನಾರೋಗ್ಯದಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ತತ್‌ಕ್ಷಣ ವೆನ್ಲಾಕ್ ಆಸ್ಪತ್ರೆಯನ್ನು ಇತರ ಎಲ್ಲ ರೋಗಿಗಳಿಗೆ ಮುಕ್ತಗೊಳಿಸಬೇಕು ಎಂದು ಶಾಸಕ ಯು.ಟಿ.ಖಾದರ್‌ ಆಗ್ರಹಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್ಲಾಕ್‌ಗೆ ರೋಗಿ ಬಂದರೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಆರೋಗ್ಯ ಕರ್ನಾಟಕ ಆಯುಷ್ಮಾನ್‌ ಭಾರತ್‌ ಯೋಜನೆ ಕೋಡ್‌ ಬರಲು ಕನಿಷ್ಠ ಎರಡು ದಿನ ಆಗುತ್ತದೆ. ಆ ಎರಡು ದಿನಗಳ ಸಾವಿರಾರು ರೂ. ಮೊತ್ತದ ಶುಲ್ಕ ರೋಗಿಯೇ ಭರಿಸಬೇಕು. ಎಲ್ಲ ರೋಗಕ್ಕೂ ಈ ಕಾರ್ಡ್‌ ಅನ್ವಯ ಆಗುವುದಿಲ್ಲ ಎಂದು ತಿಳಿಸಿದರು. ವಿಕೋಪ ನಿರ್ವಹಣೆ ಸಭೆ ಇನ್ನೂ ಆಗಿಲ್ಲ ಈ ಬಾರಿ ಭಾರೀ ಮಳೆ ಬರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ತತ್‌ಕ್ಷಣ ಸಂಸದರು, ಶಾಸಕರನ್ನು ಸೇರಿಸಿಕೊಂಡು ಕಂದಾಯ, ಅಗ್ನಿಶಾಮಕ, ಪೊಲೀಸ್‌, ಹೋಮ್‌ಗಾರ್ಡ್‌, ಮೆಸ್ಕಾಂ, ಮೀನುಗಾರಿಕೆ, ಕೋಸ್ಟ್‌ ಗಾರ್ಡ್‌ ಸಹಿತ ತುರ್ತು ಇಲಾಖೆಗಳ ಸಭೆ ಕರೆಯಬೇಕು. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಖಾದರ್‌ ಆಗ್ರಹಿಸಿದರು.

ಮಹಾವೀರರಿಗೆ ಮಾಡಿದ ಅವಮಾನ
ಹಲವು ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಅಂದಿನ ಸಂಸದ ವಿ. ಧನಂಜಯ ಕುಮಾರ್‌, ಶಾಸಕ ಯು.ಟಿ. ಫರೀದ್‌ ಸಹಿತ ಪ್ರಮುಖರು ಪಂಪ್‌ವೆಲ್‌ಗೆ ಮಹಾವೀರ ವೃತ್ತ ಎಂದು ನಾಮ ಕರಣ ಮಾಡಿ ಪವಿತ್ರ ಕಲಶ ಇಟ್ಟಿದ್ದರು. ಭಗವಾನ್‌ ಮಹಾವೀರರ ಹೆಸರಿಗೆ ಅವಮಾನ ಮಾಡಲು ರಾತ್ರೋ ರಾತ್ರಿ ವೀರ ಸಾವರ್ಕರ್‌ ಹೆಸರಿನ ಫ್ಲೆಕ್ಸ್‌ ತಂದು ಹಾಕಿದ್ದಾರೆ. ಫ್ಲೆಕ್ಸ್‌ ಅಳವಡಿಸಿದವರು ಮತ್ತು ಅದಕ್ಕೆ ಪ್ರಚೋದನೆ ಕೊಟ್ಟವರ ಮೇಲೆ ಕೇಸು ದಾಖಲಿಸಬೇಕು ಎಂದು ಯು.ಟಿ. ಖಾದರ್‌ ಆಗ್ರಹಿಸಿದ್ದಾರೆ.

ಪತ್ರಿಕಾಗೊಷ್ಠಿಯಲ್ಲಿ ಪ್ರಮುಖರಾದ ಅಬ್ದುಲ್‌ ರವೂಫ್‌, ಭಾಸ್ಕರ್‌ ಕೆ., ಶಶಿಧರ ಹೆಗ್ಡೆ, ನವೀನ್‌ ಡಿ’ಸೋಜಾ, ಮಿಥುನ್‌ ರೈ, ಶುಭೋದಯ ಆಳ್ವ, ಟಿ.ಕೆ. ಸುಧೀರ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next