ಇಸ್ಲಾಮಾಬಾದ್: ಕೋವಿಡ್ ವೈರಸ್ ಹೇಗಿರುತ್ತದೆ? ಅದರ ಗುಣಲಕ್ಷಣಗಳೇನು ಎಂಬುದರ ಬಗ್ಗೆ ಸಂಶೋಧಕರು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಆದರೆ ಪಾಕಿಸ್ಥಾನದ ಧಾರ್ಮಿಕ ಮುಖಂಡರೊಬ್ಬರು ನಾವು ಮಲಗಿದ್ದಾಗ, ವೈರಸ್ ಕೂಡ ಮಲಗಿರುತ್ತದೆ ಎಂದು ಹೇಳಿ ನಗೆಪಾಟಲಿಗೀಡಾಗಿದ್ದಾರೆ.
ಇಂತಹ ಹೇಳಿಕೆ ಕೊಟ್ಟಿದ್ದು, ಅಲ್ಲಿನ ಧಾರ್ಮಿಕ ನಾಯಕ, ಮಾಜಿ ಸಂಸದ ಜೆಯುಐ-ಎಫ್ ಸಂಘಟನೆಯ ಮುಖ್ಯಸ್ಥ, ಮೌಲಾನಾ ಫಜಲುರ್ ಅಲಿ.
ಅವರು ಈ ಹೇಳಿಕೆ ನೀಡುತ್ತಿದ್ದಂತೆ ಪಾಕ್‌ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರೂ ಲೇವಡಿ ಮಾಡಿದ್ದಾರೆ. ನಾವು ಮಲಗಿರುವಾಗ ವೈರಸ್ ಕೂಡ ಮಲಗಿರುತ್ತದೆ. ಆದ್ದರಿಂದ ವೈದ್ಯರು, ಹೆಚ್ಚು ಮಲಗುವಂತೆ ಹೇಳಬೇಕು ಎಂದು ಹೇಳಿದ್ದಾರೆ. ನಾವು ಹೆಚ್ಚು ಮಲಗಿದರೆ, ವೈರಸ್ ಕೂಡ ಹೆಚ್ಚು ಸಮಯ ಮಲಗಿರುತ್ತದೆ. ಇದರಿಂದಾಗಿ ಅದು ನಮಗೆ ಹಾನಿ ಮಾಡುವುದಿಲ್ಲ. ನಾವು ಸತ್ತರೆ ವೈರಸ್ ಕೂಡ ಸಾಯುತ್ತದೆ. ಹೆಚ್ಚು ಹೊತ್ತು ಮಲಗುವಂತೆ ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರೇ ನನಗೆ ಹೇಳಿದ್ದಾರೆ ಎಂದು ಫಜಲುರ್ ವೀಡಿಯೋ ಸಂದೇಶದಲ್ಲಿ ಹೇಳಿದ್ದು ಪ್ರಕಟವಾಗಿದೆ.
ಫಜಲುರ್ ಹೇಳಿಕೆ ಹೊರ ಬೀಳುತ್ತಿದ್ದಂತೆ ಹಲವಾರು ಮೆಮ್ಸ್‌ಗಳು, ಜೋಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿವೆ. ಕೆಲವರು ನೀವು ಯಾವ ಸಂಶೋಧನೆಯಿಂದ ಇದನ್ನು ತಿಳಿದು ಕೊಂಡಿದ್ದೀರಿ ಎಂದು ಕೇಳಿದ್ದಾರೆ. ಇನ್ನು ಕೆಲವರು ಇವರು ದೊಡ್ಡ ವೈದ್ಯರೇ ಇರಬೇಕೆಂದು ಲೇವಡಿ ಮಾಡಿದ್ದಾರೆ. ಇದೇ ವೇಳೆ ಪಾಕ್‌ನಲ್ಲಿ ಕೆಲವು ನಾಯಕರು ಕೋವಿಡ್ ವಿರುದ್ಧ ವಿವಿಧ ಹೇಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರಿಗೆ ವೈದ್ಯಕೀಯ ನೆರವು ಸಿಗದೇ ಇರಲು ಕಾರಣವಾಗುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಗಿವೆ. ಪಾಕ್‌ನಲ್ಲಿ ಈಗಾಗಲೇ 1.60 ಲಕ್ಷ ಮಂದಿಗೆ ಸೋಂಕು ತಗಲಿದ್ದು, 3,000 ಮಂದಿ ಸತ್ತಿದ್ದಾರೆ.