Advertisement
ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವ ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಮಾತ್ರ ಮೂಲ ಸೌಲಭ್ಯಗಳಿಂದ ವಂಚಿತ ವಾಗಿದೆ. ಈ ಕಚೇರಿಯನ್ನು ಬೆಳ್ಳಾರೆ – ಸುಳ್ಯ ರಸ್ತೆಯ ಪಶು ಚಿಕಿತ್ಸಾಲಯದ ಬಳಿ ಇರುವ ಪಂಚಾಯತ್ ಉದ್ಯೋಗಿಗಳ ವಾಸಸ್ಥಳದ ಕಟ್ಟಡಕ್ಕೆ ಸ್ಥಳಾಂತರಿಸಲು ಲೋಕಸಭಾ ಚುನಾವಣೆಗೂ ಮೊದಲು ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯಲಾಗಿದೆ. ಆದರೆ ಇದುವರೆಗೆ ಸ್ಥಳಾಂತರ ಪ್ರಕ್ರಿಯೆ ನಡೆದಿಲ್ಲ. ಮಳೆಗಾಲದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಸೋರುತ್ತಿದ್ದು, ನೀರು ಬಿದ್ದರೆ ದಾಖಲೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ.
ಸ್ವಚ್ಛ ಗ್ರಾಮದ ಅನ್ವಯ ಪ್ರತಿ ಮನೆಗೂ ಶೌಚಾಲಯ ಕಡ್ಡಾಯ. ಆದರೆ ಬಂಗ್ಲೆಗುಡ್ಡೆಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದರೂ ಇಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕವೂ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಕತ್ತಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಬೇಸಗೆಯಲ್ಲೂ ಫ್ಯಾನ್ ಇಲ್ಲದೆ ಕರ್ತವ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ. ಕುಡಿಯುವ ನೀರು ಬೇಕಿದ್ದರೂ ಪೇಟೆಯಿಂದ ತಂದಿಡಬೇಕಿದೆ. ಪೇಟೆಯಿಂದ ಬಲು ದೂರ
ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ತರೆಳಬೇಕಾದರೆ ಬೆಳ್ಳಾರೆ ಪ್ರಾಥಮಿಕ ಶಾಲೆಯ ಹಿಭಾಗದಿಂದ ಸುತ್ತು ಬಳಸಿ ಬರಬೇಕು. ಇದು ಬೆಳ್ಳಾರೆ ಬಸ್ ನಿಲ್ದಾಣದಿಂದ 1 ಕಿ.ಮೀ. ದೂರದಲ್ಲಿದೆ. ಹಿಂದೆ ಬೆಳ್ಳಾರೆ ಪದವಿಪೂರ್ವ ಕಾಲೇಜಿನ ಆಟದ ಮೈದಾನದಿಂದ ನೇರವಾಗಿ ಸಂಪರ್ಕಕ್ಕೆ ದಾರಿ ಇತ್ತು. ಆದರೆ ಈಗ ಅದನ್ನು ಮುಚ್ಚಲಾಗಿದೆ.
Related Articles
ಸರಕಾರದ ಸವಲತ್ತುಗಳನ್ನು ಪಡೆಯಲು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಬರಲೇಬೇಕು. ಆದರೆ ಇಲ್ಲಿನ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬರುವ ಮಣ್ಣಿನ ರಸ್ತೆ ಮಳೆಗಾಲದಲ್ಲಿ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದರಿಂದ ವೃದ್ಧರು ಹಾಗೂ ಅಂಗವಿಕಲರು ಕಚೇರಿಗೆ ಅನುಭವಿಸುವಂತಾಗಿದೆ.
Advertisement
ಸೋರುತ್ತಿದೆ ಕಟ್ಟಡಗ್ರಾಮ ಲೆಕ್ಕಾಧಿಕಾರಿಗಳ ಕಟ್ಟಡ ಶಿಥಿಲವಾಗಿ ಸೋರುತ್ತಿದೆ. ಕಚೇರಿಯ ಹಿಂಭಾಗದಲ್ಲಿ ಛಾವಣಿ ಭಾಗಶಃ ಕುಸಿದಿದ್ದು, ಗಾಳಿ, ಮಳೆಯಿಂದ ಕಟ್ಟಡಕ್ಕೆ ಹಾನಿಯಾಗುವ ಅಪಾಯವಿದೆ. ಬಾವಲಿಗಳು ರಾತ್ರಿ ಕಚೇರಿಯೊಳಗೆ ಬಂದು ವಾಸವಾಗುವುದರಿಂದ ಸ್ವಚ್ಛತೆಯೇ ದೊಡ್ಡ ಸವಾಲು. ಸ್ಥಳಾಂತರಕ್ಕೆ ಆಗ್ರಹ
ಸ್ಥಳೀಯರು ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ಉದ್ಯೋಗಿಗಳ ವಾಸಸ್ಥಳದ ಕಟ್ಟಡವನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಬೆಳ್ಳಾರೆ ಗ್ರಾ.ಪಂ. ಮುಂದಾಗಿದೆ. ಶೀಘ್ರದಲ್ಲಿ ಸ್ಥಳಾಂತರ ಪ್ರಕ್ರಿಯೆ ನಡೆಸಿದಲ್ಲಿ ಗ್ರಾಮಸ್ಥರಿಗೆ ಹಾಗೂ ಸಿಬಂದಿಗೆ ಅನುಕೂಲ. ತಿಂಗಳಾಂತ್ಯಕ್ಕೆ ಸ್ಥಳಾಂತರ
ಪಂಚಾಯತ್ ಉದ್ಯೋಗಿಗಳ ವಾಸಸ್ಥಳ ಕಟ್ಟಡ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಸ್ಥಳಾಂತರಕ್ಕೆ ಪ್ರಸ್ತಾವ ಬಂದಿದೆ. ಪಂಚಾಯತ್ ನಿರ್ಣಯ ಮಾಡಿ, ಈ ತಿಂಗಳ ಅಂತ್ಯಕ್ಕೆ ಸ್ಥಳಾಂತರ ಪ್ರಕ್ರಿಯೆ ನಡೆಸಲಾಗುವುದು.
– ಶಕುಂತಳಾ ನಾಗರಾಜ್, ಗ್ರಾ.ಪಂ. ಅಧ್ಯಕ್ಷರು, ಬೆಳ್ಳಾರೆ ಶೀಘ್ರ ಸ್ಥಳಾಂತರಿಸಿ
ಕಟ್ಟಡ ಹಾಗೂ ಕಚೇರಿಗೆ ಹೋಗುವ ರಸ್ತೆಯೂ ಶಿಥಿಲವಾಗಿದೆ. ನಮ್ಮ ಕೆಲಸಗಳಿಗೆ ಕಚೇರಿಗೆ ಹೋಗುವುದೇ ಕಷ್ಟವಾಗಿದೆ. ರಸ್ತೆ ಬದಿ ಇರುವ ಸರಕಾರಿ ಕಟ್ಟಡಕ್ಕೆ ಇದನ್ನು ಆದಷ್ಟೂ ಶೀಘ್ರದಲ್ಲಿ ಸ್ಥಳಾಂತರಿಸಿದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗಬಹುದು.
– ಪ್ರೇಮಚಂದ್ರ ಬೆಳ್ಳಾರೆ ಗ್ರಾಮಸ್ಥರು ಸೂಚನೆ ನೀಡಿದ್ದೇನೆ
ಸ್ಥಳಾಂತರಗೊಳ್ಳಲಿರುವ ಪಂಚಾ ಯತ್ ಉದ್ಯೋಗಿಗಳ ವಾಸಸ್ಥಳದ ಕಟ್ಟಡ ವನ್ನು ಆದಷ್ಟು ಶೀಘ್ರದಲ್ಲಿ ಸರಿಪಡಿಸಿ ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ.
– ಕುಂಞಿ ಅಹಮ್ಮದ್ ತಹಶೀಲ್ದಾರರು, ಸುಳ್ಯ ಉಮೇಶ್ ಮಣಿಕ್ಕಾರ