Advertisement

ಕೆಎಸ್‌ಆರ್‌ಟಿಸಿ ಇಂಧನ ಉಳಿತಾಯ: ಸುಳ್ಯ ಘಟಕ ರಾಜ್ಯದಲ್ಲೇ ಪ್ರಥಮ!

10:00 AM Jan 13, 2020 | Sriram |

ಸುಳ್ಯ: ವಾರ್ಷಿಕ ಇಂಧನ ಉಳಿತಾಯದ ಕಾರಣಕ್ಕಾಗಿ ಕೆಎಎಸ್ಸಾರ್ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯ ಸುಳ್ಯ ಘಟಕ ಪ್ರಥಮ ಸ್ಥಾನ ಗಳಿಸಿದೆ.

Advertisement

ಪೆಟ್ರೋಲಿಯಂ ಕನ್ಸರ್ವೇಶನ್‌ ರಿಸರ್ಚ್‌ ಅಸೋಸಿಯೇಶನ್‌ (ಪಿಸಿಆರ್‌ಎ) ಈ ಪ್ರಶಸ್ತಿ ನೀಡುತ್ತಿದೆ. ಪಾವಗಢ, ಅರಸೀಕೆರೆ ಘಟಕ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ.

ಆಯ್ಕೆ ಹೇಗೆ?
ಕೆಎಸ್ಸಾರ್ಟಿಸಿ ಘಟಕ ಪ್ರತಿ ತಿಂಗಳು ನೀಡುವ ಅಂಕಿ-ಅಂಶ ಆಧರಿಸಿ ಈ ಆಯ್ಕೆ ನಡೆಯುತ್ತದೆ. 2017-18 ಮತ್ತು 2018-19ರ ನಡುವೆ ವ್ಯಯಿಸಲಾದ ಡೀಸೆಲ್‌ನ ಮೌಲ್ಯಮಾಪನ ನಡೆಯುತ್ತದೆ. ಅನಂತರ ಹೆಚ್ಚಳವನ್ನು ಪರಿಗಣಿಸಿ 2018ರ ಅಕ್ಟೋಬರ್‌ನಿಂದ 2019ರ ಡಿಸೆಂಬರ್‌ ತನಕ ಡೀಸೆಲ್‌ ಉಳಿಕೆ ಲೆಕ್ಕ ಹಾಕಲಾಗುತ್ತದೆ. ಕಡಿಮೆ ಡೀಸೆಲ್‌ ವ್ಯಯಿಸಿ ಹೆಚ್ಚು ಕಿ.ಮೀ. ಸಂಚರಿಸಿರುವ ಘಟಕ ಪ್ರಶಸ್ತಿಗೆ ಅರ್ಹತೆ ಹೊಂದುತ್ತದೆ.

ಗರಿಷ್ಠ ಉಳಿತಾಯ!
ಗ್ರಾಮಾಂತರ ರಸ್ತೆ ಹೊಂದಿರುವ ಸುಳ್ಯ ಘಟಕದ ಪ್ರತಿ ಬಸ್‌2018- 19ರಲ್ಲಿ 1 ಲೀ. ಡೀಸೆಲ್‌ಗೆ 4.69 ಕಿ.ಮೀ. ಓಡಾಟ ನಡೆಸಿದೆ. ಇದರ ಹಿಂದಿನ ವರ್ಷ 4.59 ಕಿ.ಮೀ. ನಷ್ಟಿತ್ತು. ಒಂದು ವರ್ಷದಲ್ಲಿ ಸಂಚಾರ ದೂರ 0.10 ಕಿ.ಮೀ.ಯಷ್ಟು ಹೆಚ್ಚಳವಾಗಿದೆ. ಅಂದರೆ ಒಂದು ವರ್ಷದಲ್ಲಿ 20 ಲಕ್ಷ ರೂ. ಮೌಲ್ಯದ ಇಂಧನ ಉಳಿಸಲಾಗಿದೆ. ತಿಂಗಳ ಅಂಕಿ ಅಂಶ ಆಯಾ ಘಟಕದ ನಡುವೆ ಹೆಚ್ಚು ಕಮ್ಮಿ ಕಂಡುಬಂದರೂ ವಾರ್ಷಿಕ ಒಟ್ಟು ಪ್ರಮಾಣ ಆಧರಿಸಿ ದೊರೆಯುವ ಅಂಕ ಇಲ್ಲಿ ಮುಖ್ಯವಾಗುತ್ತದೆ. ಗರಿಷ್ಠ ಓಡಾಟ, ಕನಿಷ್ಠ ಇಂಧನ ಬಳಕೆ ಅಂಕಿಅಂಶ ಪರಿಗಣಿಸಿದಾಗ ಸುಳ್ಯ ಘಟಕದ ಬಸ್‌ ಪ್ರತಿ ಲೀ.ಗೆ 4.69 ಕಿ.ಮೀ. ದೂರ ಸಂಚರಿಸಿದ್ದು, ರಾಜ್ಯದ ಉಳಿದ ಘಟಕಗಳಿಗಿಂತ ಅಧಿಕ ಇಂಧನ ಉಳಿಸಿದೆ.

57 ರೂಟ್‌
ಸುಳ್ಯ ಘಟಕದಲ್ಲಿ ಒಟ್ಟು 57 ರೂಟ್‌ ಇವೆ. 56 ಬಸ್‌ ಇದ್ದು, 1 ಬಸ್‌ ಕೊರತೆ ಇದೆ. ಚಾಲಕ ಮತ್ತು ನಿರ್ವಾಹಕರು ಸೇರಿ ಒಟ್ಟು 188 ಮಂದಿ ಸಿಬಂದಿಯಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಸ್‌ ಓಡಾಡುತ್ತಿದ್ದರೂ ಇಂಧನ ಬಳಕೆಯಲ್ಲಿ ಮಿತವ್ಯಯದ ಮೂಲಕ ಘಟಕ ತನ್ನ ಕಾರ್ಯಕ್ಷಮತೆ ಪ್ರದರ್ಶಿಸಿದೆ.

Advertisement

ಪುತ್ತೂರು ವಿಭಾಗಕ್ಕೆ ಸಂದ ಮೊದಲ ಗೌರವ
ಐದು ಘಟಕ ಹೊಂದಿರುವ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ಸ್ಥಾಪನೆ ಆದ ಬಳಿಕ ಇಂಧನ ಕ್ಷಮತೆಯಲ್ಲಿ ದೊರೆತ ಮೊದಲ ಪ್ರಶಸ್ತಿಯಿದು. ಐದನೆಯದಾಗಿ 2017ರ ಜುಲೈಯಲ್ಲಿ ಸುಳ್ಯ ಘಟಕ ಕಾರ್ಯಾರಂಭಿಸಿದ ಎರಡೂವರೆ ವರ್ಷಗಳಲ್ಲಿ ಪ್ರಶಸ್ತಿಗೆ ಪಾತ್ರವಾಗಿದೆ.

ಮೊದಲ ಗೌರವ
ಇಂಧನ ಉಳಿತಾಯ ಕಾರಣಕ್ಕಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಆಯ್ಕೆ ಸಂದರ್ಭ ಇಂಧನ ಉಳಿಕೆಯ ಬಗ್ಗೆ ವಾರ್ಷಿಕ ಅಂಕಿ ಅಂಶ ಪರಿಗಣಿಸುತ್ತಾರೆ. ಪ್ರತಿ ಬಸ್‌ 1 ಲೀ. ಡೀಸೆಲ್‌ಗೆ 4.69 ಕಿ.ಮೀ. ಬಸ್‌ ಓಡಾಟ ನಡೆಸಿದೆ. ಒಂದು ವರ್ಷದಲ್ಲಿ 20 ಲಕ್ಷ ರೂ. ಮೌಲ್ಯದ ಇಂಧನ ಉಳಿಸಿದೆ. ಪ್ರಶಸ್ತಿಯು 50 ಸಾವಿರ ರೂ. ನಗದು ಮತ್ತು ಫಲಕ ಒಳಗೊಂಡಿದೆ.
– ಸುಂದರರಾಜ್‌,ಡಿಪೋ ಮ್ಯಾನೇಜರ್‌,ಸುಳ್ಯ ಘಟಕ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next