Advertisement

ವೆಲ್ಲಿಂಗ್ಟನ್‌ ಟೆಸ್ಟ್‌ : ರವಿಶಾಸ್ತ್ರಿ ಫ್ಲ್ಯಾಶ್‌ಬ್ಯಾಕ್‌

10:07 AM Feb 22, 2020 | sudhir |

ವೆಲ್ಲಿಂಗ್ಟನ್‌: ಶುಕ್ರವಾರದಿಂದ ಆರಂಭವಾಗಲಿರುವ ಭಾರತ-ನ್ಯೂಜಿಲ್ಯಾಂಡ್‌ ಟೆಸ್ಟ್‌ ಪಂದ್ಯವನ್ನು ಎರಡೂ ದೇಶಗಳ ಕ್ರಿಕೆಟ್‌ ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಗಮನಿಸುತ್ತಿದ್ದಾರೆ. ಈ ಪಂದ್ಯದ ಮೇಲೆ ಇದಕ್ಕೂ ಮಿಗಿಲಾದ ಕುತೂಹಲ ಹೊಂದಿರುವ ವ್ಯಕ್ತಿಯೊಬ್ಬರಿದ್ದಾರೆ.

Advertisement

ಅದು ಟೀಮ್‌ ಇಂಡಿಯಾ ಕೋಚ್‌ ರವಿಶಾಸ್ತ್ರಿ!

ಸರಿಯಾಗಿ 39 ವರ್ಷಗಳ ಹಿಂದೆ, 1981ರ ಫೆ. 21ರಂದು ವೆಲ್ಲಿಂಗ್ಟನ್‌ನಲ್ಲೇ ರವಿಶಾಸ್ತ್ರಿ ದಿಢೀರನೇ ಟೆಸ್ಟ್‌ ಕ್ರಿಕೆಟಿಗೆ ಅಡಿಯಿರಿಸಿದ್ದರು. ಅದೇ ದಿನಾಂಕದಂದು ಮತ್ತೆ ವೆಲ್ಲಿಂಗ್ಟನ್‌ನಲ್ಲಿ ಭಾರತ ಟೆಸ್ಟ್‌ ಆಡುತ್ತಿದ್ದು, ರವಿಶಾಸ್ತ್ರಿ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ದಿಢೀರ್‌ ಕರೆ ಪಡೆದ ರವಿಶಾಸ್ತ್ರಿ
ಅಂದಿನ ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್‌ ಜಂಟಿ ಪ್ರವಾಸಕ್ಕಾಗಿ ರವಿಶಾಸ್ತ್ರಿ ಭಾರತ ತಂಡಕ್ಕೆ ಆಯ್ಕೆ ಆಗಿರಲಿಲ್ಲ. ಆದರೆ ಸ್ಪಿನ್ನರ್‌ ದಿಲೀಪ್‌ ದೋಶಿ ಗಾಯಾಳಾದರು. ಬದಲಿ ಸ್ಪಿನ್ನರ್‌ ಆಗಿ ರವಿಶಾಸ್ತ್ರಿ ಅವರನ್ನು ಕೂಡಲೇ ಕರೆಸಿಕೊಳ್ಳಲಾಯಿತು. ನ್ಯೂಜಿಲ್ಯಾಂಡಿಗೆ ಬಂದಿಳಿದವರೇ ನೇರವಾಗಿ ಟೆಸ್ಟ್‌ ಆಡಲು ವೆಲ್ಲಿಂಗ್ಟನ್‌ ಅಂಗಳಕ್ಕಿಳಿದಿದ್ದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 3 ವಿಕೆಟ್‌ ಕಿತ್ತು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

“39 ವರ್ಷಗಳೇ ಉರುಳಿವೆ. ಅದೇ ದಿನಾಂಕದಂದು, ಅದೇ ನಗರದ ಅದೇ ಅಂಗಳದಲ್ಲಿ ನನ್ನ ಟೆಸ್ಟ್‌ ಪದಾರ್ಪಣೆಯ ಸವಿನೆನಪು ಗರಿ ಬಿಚ್ಚಲಿರುವುದು ಖುಷಿಯ ಸಂಗತಿ’ ಎಂದಿದ್ದಾರೆ ರವಿಶಾಸ್ತ್ರಿ.

Advertisement

ತರಾತುರಿಯಲ್ಲಿ ಟೆಸ್ಟ್‌ ಕ್ಯಾಪ್‌!
ಅಂದು ದಿಢೀರ್‌ ಕರೆ ಪಡೆದಾಗ 19 ವರ್ಷದ ರವಿಶಾಸ್ತ್ರಿ ಕಾನ್ಪುರದಲ್ಲಿ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಆಡುತ್ತಿದ್ದರು. ಇದನ್ನು ಅವರಿಗೆ ತಿಳಿಸಿದ್ದು ಯಾರು ಗೊತ್ತೇ? ಮುಂಬಯಿ ತಂಡ ತಂಗಿದ್ದ ಗೆಸ್ಟ್‌ಹೌಸ್‌ನ ಗೇಟ್‌ಕೀಪರ್‌!
“ನ್ಯೂಜಿಲ್ಯಾಂಡ್‌ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದವರು ಬಾಪು ನಾಡಕರ್ಣಿ. ನಾನು ನೇರವಾಗಿ ಹೊಟೇಲ್‌ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಆಗ ಭಾರತ ತಂಡ ರಾಯಭಾರ ಕಚೇರಿಯ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿತ್ತು. ಮರುದಿನವೇ ಟೆಸ್ಟ್‌ ಆರಂಭ. ನಾನು ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದೆ…’ ಎಂದು ಪೂಜಾರ ಅವರಿಗೆ ನೀಡಿದ ಸಂದರ್ಶನದಲ್ಲಿ ರವಿಶಾಸ್ತ್ರಿ ತಮ್ಮ ಟೆಸ್ಟ್‌ ಪದಾರ್ಪಣೆಯ ಕ್ಷಣಗಳನ್ನು ತೆರೆದಿರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next