Advertisement

ವೇಗದ ದಾಳಿ ನಿಭಾಯಿಸಿದವರಿಗೆ ಒಲಿದೀತು ವೆಲ್ಲಿಂಗ್ಟನ್‌

09:57 AM Feb 21, 2020 | Team Udayavani |

ವೆಲ್ಲಿಂಗ್ಟನ್‌: ಟಿ20 ಸರಣಿಯಲ್ಲಿ 5-0 ವಿಜಯೋತ್ಸವ ಆಚರಿಸಿ, ಏಕದಿನದಲ್ಲಿ 0-3 ವೈಟ್‌ವಾಶ್‌ ಅನುಭವಿಸಿದ ಭಾರತವೀಗ ನ್ಯೂಜಿ ಲ್ಯಾಂಡ್‌ ನೆಲದಲ್ಲಿ ಮತ್ತೂಂದು ಸವಾಲಿಗೆ ಅಣಿ ಯಾಗುತ್ತಿದೆ. ಶುಕ್ರವಾರದಿಂದ ವೆಲ್ಲಿಂಗ್ಟನ್‌ನಲ್ಲಿ 2 ಪಂದ್ಯಗಳ ಕಿರು ಟೆಸ್ಟ್‌ ಸರಣಿ ಆರಂಭವಾಗಲಿದೆ. ನಿಂತು ಆಡುವವರ ಸಾಮರ್ಥ್ಯಕ್ಕೆ ಇದೊಂದು ವೇದಿಕೆ.

Advertisement

ಭಾರತವನ್ನು ತವರಲ್ಲಿ ಮಣಿಸುವುದು ಹೇಗೆ ಸುಲಭವಲ್ಲವೋ, ಹಾಗೆಯೇ ನ್ಯೂಜಿಲ್ಯಾಂಡಿನಲ್ಲಿ ನ್ಯೂಜಿಲ್ಯಾಂಡನ್ನು ಸೋಲಿಸುವುದು ಕೂಡ ಬಹಳ ಕಷ್ಟ. ಇಲ್ಲಿನ ಬೌನ್ಸಿ ಹಾಗೂ ಸೀಮ್‌ ಟ್ರ್ಯಾಕ್‌, ಶೀತ ಗಾಳಿ ಏಶ್ಯದ ಪ್ರವಾಸಿ ತಂಡಗಳಿಗೆ ಸದಾ ಅಗ್ನಿಪರೀಕ್ಷೆ ಒಡ್ಡುತ್ತದೆ. ಆದರೆ ಭಾರತ ಈಗಾಗಲೇ ಒಂದು ತಿಂಗಳಿಂದ ನ್ಯೂಜಿಲ್ಯಾಂಡಿನಲ್ಲಿ ಬೀಡುಬಿಟ್ಟಿರುವ ಕಾರಣ ಅಲ್ಲಿನ ವಾತಾವರಣ ಸಮಸ್ಯೆಯಾಗದು. ಇಲ್ಲಿರುವುದು ವೇಗದ ದಾಳಿಯನ್ನು ಎದುರಿಸಿ ನಿಲ್ಲುವ ಸವಾಲು. ಇದರಲ್ಲಿ ಭಾರತ ಎಷ್ಟು ಯಶಸ್ವಿ ಆಗುತ್ತದೆ ಎಂಬುದು ಮುಖ್ಯ. ಜತೆಗೆ ಆತ್ಮವಿಶ್ವಾಸವೂ ಅಗತ್ಯ.

ಸಾಧನೆ ಕಳಪೆಯೇನಲ್ಲ
ನ್ಯೂಜಿಲ್ಯಾಂಡಿನಲ್ಲಿ ಭಾರತದ ಟೆಸ್ಟ್‌ ಸಾಧನೆ ತೀರಾ ಕಳಪೆಯೇನಲ್ಲ. ಆಸ್ಟ್ರೇಲಿಯ ಹೊರತುಪಡಿಸಿ ಉಳಿದೆಲ್ಲ ತಂಡಗಳಿಗೆ ಹೋಲಿಸಿದರೆ ಉತ್ತಮ ಮಟ್ಟದಲ್ಲಿಯೇ ಇದೆ. ಕಿವೀಸ್‌ ನೆಲದಲ್ಲಿ 23 ಟೆಸ್ಟ್‌ ಆಡಿರುವ ಭಾರತ ಐದನ್ನು ಗೆದ್ದು, ಎಂಟರಲ್ಲಿ ಸೋತಿದೆ. ಉಳಿದ 10 ಪಂದ್ಯಗಳು ಡ್ರಾಗೊಂಡಿವೆ.

ಸರಣಿ ಲೆಕ್ಕಾಚಾರದಲ್ಲಿ ಹೇಳುವುದಾದರೆ, 9ರಲ್ಲಿ ಎರಡನ್ನು ಗೆದ್ದಿದೆ. 5ರಲ್ಲಿ ಸೋತಿದೆ. 2 ಡ್ರಾಗೊಂಡಿದೆ. 2008-09ರ ಬಳಿಕ ನ್ಯೂಜಿಲ್ಯಾಂಡಿನಲ್ಲಿ ಟೆಸ್ಟ್‌ ಹಾಗೂ ಸರಣಿಯನ್ನು ಗೆದ್ದಿಲ್ಲ. 2013-14ರಲ್ಲಿ ಕೊನೆಯ ಸಲ ಪ್ರವಾಸಗೈದ ವೇಳೆ 2 ಪಂದ್ಯಗಳ ಸರಣಿಯನ್ನು 0-1ರಿಂದ ಕಳೆದುಕೊಂಡಿತ್ತು.

ಐಸಿಸಿ ಟೆಸ್ಟ್‌: ಭಾರತ ಅಜೇಯ
ಇದು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಒಳಪಡುವ ಸರಣಿಯಾದ್ದರಿಂದ ತೀವ್ರ ಪೈಪೋಟಿ ಕಂಡುಬರುವುದರಲ್ಲಿ ಅನುಮಾನವಿಲ್ಲ. ಭಾರತ ಏಳೂ ಟೆಸ್ಟ್‌ಗಳನ್ನು ಗೆದ್ದು ಅಗ್ರಸ್ಥಾನ ಅಲಂಕರಿಸಿದೆ (360 ಅಂಕ). ನ್ಯೂಜಿಲ್ಯಾಂಡ್‌ ಐದರಲ್ಲಿ ಒಂದನ್ನಷ್ಟೇ ಗೆದ್ದಿದೆ. 60 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಹೀಗಾಗಿ ತವರಿನ ಲಾಭವನ್ನು ಎತ್ತಲು ವಿಲಿಯಮ್ಸನ್‌ ಪಡೆ ಗರಿಷ್ಠ ಪ್ರಯತ್ನ ನಡೆಸುವುದರಲ್ಲಿ ಅನುಮಾನವಿಲ್ಲ. ಜತೆಗೆ ಇದು ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಅವರ 100ನೇ ಟೆಸ್ಟ್‌ ಪಂದ್ಯ. ಇದನ್ನು ಸ್ಮರಣೀಯಗೊಳಿಸಲು ಕಿವೀಸ್‌ ಹಾತೊರೆಯುತ್ತಿದೆ.ತವರಲ್ಲಿ ವಿಲಿಯಮ್ಸನ್‌ ಅವರ ನಾಯಕತ್ವದ ದಾಖಲೆ ಅಮೋಘ. 8 ಸರಣಿಗಳಲ್ಲಿ ಏಳನ್ನು ವಶಪಡಿಸಿಕೊಂಡಿದ್ದಾರೆ. 2019ರ ಅಂತ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 1-0 ಸರಣಿ ಜಯಿಸಿದ್ದು ತಾಜಾ ನಿದರ್ಶನ.
ಘಾತಕ ವೇಗಿ ಟ್ರೆಂಟ್‌ ಬೌಲ್ಟ್ ಮರಳಿದ್ದರಿಂದ ಕಿವೀಸ್‌ ಬೌಲಿಂಗ್‌ ಹೆಚ್ಚು ಬಲಿಷ್ಠಗೊಂಡಿದೆ. ಅನುಭವಿ ಸೌಥಿ, ವ್ಯಾಗ್ನರ್‌, ನೂತನ ಅಸ್ತ್ರ ಜಾಮೀಸನ್‌ ಅಪಾಯಕಾರಿ ಆಗಬಲ್ಲರು.

Advertisement

ಮಾಯಾಂಕ್‌-ಶಾ ಓಪನಿಂಗ್‌
ರೋಹಿತ್‌ ಶರ್ಮ ಗೈರಲ್ಲಿ ಮಾಯಾಂಕ್‌ ಅಗರ್ವಾಲ್‌ಗೆ ಜೋಡಿಯಾಗಿ ಪೃಥ್ವಿ ಶಾ ಕಣಕ್ಕಿಳಿಯಲಿದ್ದಾರೆ. ಕೇವಲ 2 ಟೆಸ್ಟ್‌ ಪಂದ್ಯಗಳ ಅನುಭವಿಯಾಗಿರುವ ಶಾ 2018ರ ಅಕ್ಟೋಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕೊನೆಯ ಟೆಸ್ಟ್‌ ಆಡಿದ್ದರು. ಏಕದಿನ ಸರಣಿಯಲ್ಲಿ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. ಹೀಗಾಗಿ ಇಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಬ್ಯಾಟ್‌ ಬೀಸಬೇಕಾಗುತ್ತದೆ.

ಅಗರ್ವಾಲ್‌-ಶಾ ಉತ್ತಮ ಅಡಿಪಾಯ ನಿರ್ಮಿಸಬೇಕಿದೆ. ಭಾರತದ ಮುಂದಿನ ಬಾÂಟಿಂಗ್‌ ಸರದಿ ಬಲಿಷ್ಠವಾಗಿ ಗೋಚರಿಸುತ್ತದೆ. ಪೂಜಾರ, ಕೊಹ್ಲಿ, ರಹಾನೆ, ವಿಹಾರಿ, ಸಾಹಾ, ಅಶ್ವಿ‌ನ್‌ ಅಥವಾ ಜಡೇಜ… ಇದೊಂದು ಉತ್ತಮ ಕಾಂಬಿನೇಶನ್‌. ಆದರೆ ನ್ಯೂಜಿಲ್ಯಾಂಡಿಗೆ ಕಾಲಿಟ್ಟ ಬಳಿಕ ನಾಯಕ ಕೊಹ್ಲಿ ಅವರ ಬ್ಯಾಟ್‌ ಮಾತಾಡದಿರುವುದು ಆತಂಕದ ಸಂಗತಿ. ಆಡಿದ 7 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯಷ್ಟೇ 50ರ ಗಡಿ ದಾಟಿದ್ದಾರೆ. ಕಪ್ತಾನನ ಬ್ಯಾಟಿನಿಂದ ಹರಿದು ಬಂದ ರನ್‌ ಹೀಗಿದೆ: 45, 11, 38, 11, 51, 15 ಮತ್ತು 9. ಟೆಸ್ಟ್‌ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಬೇಕಾದರೆ ಕೊಹ್ಲಿ ಫಾರ್ಮ್ ನಿರ್ಣಾಯಕ.

ವೇಗದ ಬೌಲಿಂಗ್‌ ವಿಭಾಗದಲ್ಲಿ ಇಶಾಂತ್‌, ಶಮಿ, ಬುಮ್ರಾ ಮತ್ತು ಉಮೇಶ್‌ ಯಾದವ್‌ ಇದ್ದಾರೆ. ಇವರಲ್ಲಿ ಒಬ್ಬರು ಹೊರಗುಳಿಯಬೇಕಾಗುತ್ತದೆ. ಏಕೈಕ ಸ್ಪಿನ್ನರ್‌ ಅವಕಾಶ ಅಶ್ವಿ‌ನ್‌ ಪಾಲಾಗಬಹುದು.

1967-68ರ ಯಶಸ್ವಿ ಪ್ರವಾಸ
ಭಾರತ 1967-68ರಲ್ಲಿ ಮೊದಲ ಸಲ ನ್ಯೂಜಿಲ್ಯಾಂಡಿಗೆ ತೆರಳಿತ್ತು. ಇದು ಭಾರತದ ಅತ್ಯಂತ ಯಶಸ್ವಿ ನ್ಯೂಜಿಲ್ಯಾಂಡ್‌ ಪ್ರವಾಸವಾಗಿದೆ. ಮನ್ಸೂರ್‌ ಅಲಿಖಾನ್‌ ಪಟೌಡಿ ಸಾರಥ್ಯದ ಭಾರತ 4 ಟೆಸ್ಟ್‌ಗಳಲ್ಲಿ ಮೂರನ್ನು ಗೆದ್ದಿತ್ತು. ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿತ್ತು.

ಇದು ನ್ಯೂಜಿಲ್ಯಾಂಡ್‌ನ‌ಲ್ಲಿ ಭಾರತ ಆಡಲಿರುವ 10ನೇ ಟೆಸ್ಟ್‌ ಸರಣಿ. ಹಿಂದಿನ 9 ಸರಣಿಗಳಲ್ಲಿ ಭಾರತ ಎರಡರಲ್ಲಿ ಗೆದ್ದಿತ್ತು. ನ್ಯೂಜಿಲ್ಯಾಂಡ್‌ ಐದರಲ್ಲಿ ಮೇಲುಗೈ ಸಾಧಿಸಿದೆ. 2 ಸರಣಿ ಸಮಬಲದಲ್ಲಿ ಮುಗಿದಿದೆ.

ಭಾರತದ ಮತ್ತೂಂದು ಸರಣಿ ಗೆಲುವು ದಾಖಲಾದದ್ದು 2008-09ರಲ್ಲಿ. ಅಂದಿನ 3 ಪಂದ್ಯಗಳ ಸರಣಿ 1-0 ಅಂತರದಿಂದ ಭಾರತದ ಪಾಲಾಗಿತ್ತು.

ವೆಲ್ಲಿಂಗ್ಟನ್‌ನಲ್ಲಿ ಒಲಿದದ್ದು ಒಂದೇ ಗೆಲುವು
ಭಾರತ ವೆಲ್ಲಿಂಗ್ಟನ್‌ನಲ್ಲಿ ಈವರೆಗೆ 7 ಟೆಸ್ಟ್‌ ಗಳನ್ನಾಡಿದ್ದು, ಒಂದರಲ್ಲಷ್ಟೇ ಜಯಿಸಿದೆ. ಇದು 1967-68ರ ಪ್ರಪ್ರಥಮ ಸರಣಿಯಲ್ಲಿ ಒಲಿದಿತ್ತು. ಅಂತರ 8 ವಿಕೆಟ್‌. ಅದು ಸರಣಿಯ 3ನೇ ಟೆಸ್ಟ್‌ ಪಂದ್ಯವಾಗಿತ್ತು. ಪ್ರಸನ್ನ ದಾಳಿಗೆ (32ಕ್ಕೆ 5) ತತ್ತರಿಸಿದ ಗ್ರಹಾಂ ಡೌಲಿಂಗ್‌ ಪಡೆ 132ಕ್ಕೆ ಕುಸಿಯಿತು. ಜಬಾಬಿತ್ತ ಭಾರತ 327 ರನ್‌ ಬಾರಿಸಿತು. ಇದರಲ್ಲಿ ಅಜಿತ್‌ ವಾಡೇಕರ್‌ ಕೊಡುಗೆ 143 ರನ್‌. ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಆತಿಥೇಯರನ್ನು ಕಾಡಿದವರು ಬಾಪು ನಾಡಕರ್ಣಿ (43ಕ್ಕೆ 6). ಪ್ರಸನ್ನ 3 ವಿಕೆಟ್‌ ಕಿತ್ತರು. ನ್ಯೂಜಿಲ್ಯಾಂಡ್‌ 199ಕ್ಕೆ ಉರುಳಿತು. ಭಾರತ 2 ವಿಕೆಟಿಗೆ 59 ರನ್‌ ಮಾಡಿ ಜಯಭೇರಿ ಮೊಳಗಿಸಿತು; ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು.

ರಾಯಭಾರ ಕಚೇರಿಗೆ ಭೇಟಿ
ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾ ಸದಸ್ಯರು ವೆಲ್ಲಿಂಗ್ಟನ್‌ನಲ್ಲಿ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿದರು. “ಇಲ್ಲಿರುವುದು ಹೆಮ್ಮೆಯ ಸಂಗತಿ. ನಮ್ಮನ್ನಿಲ್ಲಿ ಆಹ್ವಾನಿಸಿದ್ದಕ್ಕೆ ಕೃತಜ್ಞತೆಗಳು’ ಎಂಬುದಾಗಿ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಭಾರತ: ಪೃಥ್ವಿ ಶಾ, ಮಾಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರವೀಂದ್ರ ಜಡೇಜ/ಆರ್‌. ಅಶ್ವಿ‌ನ್‌, ವೃದ್ಧಿಮಾನ್‌ ಸಾಹಾ, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ.

ನ್ಯೂಜಿಲ್ಯಾಂಡ್‌: ಟಾಮ್‌ ಲ್ಯಾಥಂ, ಟಾಮ್‌ ಬ್ಲಿಂಡೆಲ್‌, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಹೆನ್ರಿ ನಿಕೋಲ್ಸ್‌, ಬ್ರಾಡ್ಲಿ ವಾಟಿÉಂಗ್‌, ಕಾಲಿನ್‌ ಡಿ ಗ್ರ್ಯಾಂಡ್‌ ಹೋಮ್‌, ಟಿಮ್‌ ಸೌಥಿ, ನೀಲ್‌ ವ್ಯಾಗ್ನರ್‌/ಮ್ಯಾಟ್‌ ಹೆನ್ರಿ, ಅಜಾಜ್‌ ಪಟೇಲ್‌, ಟ್ರೆಂಟ್‌ ಬೌಲ್ಟ್.

Advertisement

Udayavani is now on Telegram. Click here to join our channel and stay updated with the latest news.

Next