ಬೆಂಗಳೂರು: ‘ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಮಾರ್ಗ ಹಾದುಹೋಗಲಿರುವ ವೆಲ್ಲಾರ ಜಂಕ್ಷನ್ ಬಳಿಯ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಕಗ್ಗಂಟಾಗಿರುವಾಗಲೇ ರಕ್ಷಣಾ ಇಲಾಖೆಯು ‘ಉದ್ದೇಶಿತ ಭೂಮಿ ತನಗೆ ಸೇರಿದ್ದು’ ಎಂಬ ವಾದ ಮುಂದಿಟ್ಟಿದೆ. ಇದರಿಂದ ಮಾಲಿಕತ್ವದ ಬಗ್ಗೆಯೇ ಪ್ರಶ್ನೆ ಕೇಳಿಬರುತ್ತಿದ್ದು, ಪರಿಣಾಮ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
‘ವೆಲ್ಲಾರ ಜಂಕ್ಷನ್ ಬಳಿಯ ಭೂಮಿ ತನಗೂ ಸೇರಿದ್ದು, ಉದ್ದೇಶಿತ ಮಾರ್ಗದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲು ರಕ್ಷಣಾ ಇಲಾಖೆ ಸಚಿವಾಲಯದ ಅನುಮತಿ ಪಡೆಯಬೇಕು’ ಎಂದು ರಕ್ಷಣಾ ಇಲಾಖೆಯು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ಕ್ಕೆ ಸೂಚಿಸಿದೆ. ಇದರಿಂದ ವಿವಾದ ಮತ್ತಷ್ಟು ಗೊಂದಲದ ಗೂಡಾಗಿದ್ದು, ಇದು ಕಾಮಗಾರಿ ವಿಳಂಬಕ್ಕೂ ಕಾರಣವಾಗಲಿದೆ.
ಶೋಲೆ ಸರ್ಕಲ್ನಿಂದ ಫಾತಿಮಾ ಬೇಕರಿ ದಾಟುತ್ತಿದ್ದಂತೆ (ಎಂ.ಜಿ. ರಸ್ತೆಯಿಂದ ಡೈರಿ ವೃತ್ತದ ಕಡೆಗೆ ಹೋಗುವಾಗ) ಎಡಕ್ಕೆ ತಿರುವು ಪಡೆದ ತಕ್ಷಣ ರಸ್ತೆಯೊಂದು ಬರುತ್ತದೆ. ಈ ಎರಡೂ ರಸ್ತೆಗಳ ನಡುವೆ ಬರುವ ಜಾಗವು ರಕ್ಷಣಾ ಇಲಾಖೆಗೆ ಸೇರಿದ್ದು ಎಂದು ಇಲಾಖೆ ವಾದಿಸುತ್ತಿದೆ. ಅಷ್ಟೇ ಅಲ್ಲ, ಈ ಜಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ರಕ್ಷಣಾ ಇಲಾಖೆ ಸಚಿವಾಲಯದ ಅನುಮತಿ ಪಡೆಯಬೇಕು ಹಾಗೂ ಇದಕ್ಕೆ ಪ್ರತಿಯಾಗಿ ಪರಿಹಾರ ನೀಡಬೇಕು ಎಂದು ಹೇಳಿದೆ. ಈಚೆಗೆ ನಡೆದ ಬಿಎಂಆರ್‌ಸಿಯ ಉನ್ನತಾಧಿಕಾರಿಗಳ ಸಮಿತಿ ಸಭೆಯಲ್ಲಿಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.
ಎಚ್ಪಿಸಿ ಸಭೆಯಲ್ಲಿ ಪ್ರಸ್ತಾಪ: ಈ ವಾದಕ್ಕೆ ಸಭೆಯಲ್ಲಿ ಪ್ರತಿಕ್ರಿಯಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್, ಪೂರಕ ದಾಖಲೆಗಳನ್ನು ಸಲ್ಲಿಸಿ, ಪರಿಹಾರ ಪಡೆಯಿರಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಜತೆಗೆ ಬೆನ್ನಲ್ಲೇ ಕಂದಾಯ ಇಲಾಖೆಗೆ ಉದ್ದೇಶಿತ ಭೂಮಿಯ ಒಡೆತನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸುವಂತೆಯೂ ಸರ್ಕಾರ ಸೂಚಿಸಿದೆ ಎಂದು ಉನ್ನತ ಮೂಲಗಳು ‘ಉದಯವಾಣಿ’ಗೆ ತಿಳಿಸಿವೆ. ಈ ಮಧ್ಯೆ ಹೊಸ ವಾದದಿಂದ ಬಿಎಂಆರ್‌ಸಿಎಲ್ ಗೊಂದಲಕ್ಕೆ ಸಿಲುಕಿದೆ.
ಹಾಗೊಂದು ವೇಳೆ ಈ ಭೂಮಿಯು ರಕ್ಷಣಾ ಇಲಾಖೆಗೆ ಸೇರಿದಲ್ಲಿ, ಅನುಮತಿ ಪಡೆಯಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದು ಯೋಜನಾ ವೆಚ್ಚ ಹೆಚ್ಚಳ ರೂಪದಲ್ಲಿ ಪರಿಣಮಿಸುವ ಸಾಧ್ಯತೆ ಇದೆ. ನಗರದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಇದೇ ರಕ್ಷಣಾ ಇಲಾಖೆ ಭೂಮಿಗಾಗಿ ದಶಕಗಟ್ಟಲೆ ಕಾದಿರುವುದನ್ನು ಇಲ್ಲಿ ಸ್ಮರಿಸಬಹುದು.
ರಕ್ಷಣಾ ಇಲಾಖೆ ವಾದ ಏನು?: ಡೈರಿ ವೃತ್ತ-ನಾಗವಾರ ನಡುವಿನ ಮೆಟ್ರೋ ಸುರಂಗ ಮಾರ್ಗವು ವೆಲ್ಲಾರ ಜಂಕ್ಷನ್ ಮೂಲಕ ಹಾದುಹೋಗಲಿದ್ದು, ಜಂಕ್ಷನ್ ಬಳಿ ಒಂದು ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಚರ್ಚ್‌ಗೆ ಸೇರಿದ ಒಟ್ಟಾರೆ 8,100 ಚದರ ಮೀಟರ್ ಜಾಗದಲ್ಲಿ ಒಂದು ಭಾಗವನ್ನು ಮೆಟ್ರೋ ನಿಲ್ದಾಣಕ್ಕಾಗಿ ಸುಮಾರು 3,600 ಚದರ ಮೀಟರ್ ಜಾಗವನ್ನು ಈಗಾಗಲೇ ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅಂದಾಜು ನೂರು ಕೋಟಿ ರೂ. ಪರಿಹಾರವನ್ನೂ ನೀಡಲಾಗಿದೆ. ಉಳಿದ 4,500 ಚದರ ಮೀಟರ್ ಜಾಗವನ್ನು ಲೀಸ್‌ನಲ್ಲಿ ನಾಲ್ಕು ವರ್ಷಗಳ ಕಾಲ ಕಾಮಗಾರಿ ನಡೆಸಲು ತಾತ್ಕಾಲಿಕವಾಗಿ ಪಡೆಯಲಾಗುತ್ತಿದೆ. ಈ ಕಾಮಗಾರಿಗೆ 80ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ ಎಂಬ ವಿರೋಧ ಕೇಳಿಬರುತ್ತಿದೆ. ಈ ಸಂಬಂಧ ಬಿಎಂಆರ್‌ಸಿ ಮತ್ತು ಆಲ್ ಸೆಂಟ್ಸ್ ಚರ್ಚ್ ನಡುವೆ ತಿಕ್ಕಾಟ ನಡೆದಿದೆ. ಇದರ ಮಧ್ಯೆ ರಕ್ಷಣಾ ಇಲಾಖೆಯು 4,500 ಚದರ ಮೀಟರ್ ಸೇರಿದಂತೆ ಸುರಂಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಿಲ್ದಾಣ ವ್ಯಾಪ್ತಿಯಲ್ಲಿನ ಜಾಗವೆಲ್ಲವೂ ಇಲಾಖೆಗೆ ಸೇರಿದ್ದು ಎಂಬ ವಾದ ಮುಂದಿಟ್ಟಿದೆ.
● ವಿಜಯಕುಮಾರ್ ಚಂದರಗಿ