Advertisement

ಸರ್ಕಾರದ ವಿರುದ್ಧ ಬಾವಿ ಸಮರ

11:43 AM Jun 03, 2017 | Team Udayavani |

ಬಾವಿ ಕಳೆದ್ಹೋಗಿದೆ … ಹಾಗಂತ ಅವನು ಹೇಳುತ್ತಿದ್ದಂತೆಯೇ ಎಲ್ಲರಿಗೂ ಆಶ್ಚರ್ಯ. ಅದು ಸುಳ್ಳು ಎನ್ನುತ್ತಾರೆ ಪೊಲೀಸರು. ಇಲ್ಲ ನಿಜ ಎನ್ನುತ್ತಾನೆ ಇವನು. ಇದ್ಯಾವುದೋ ಮೆಂಟ್ಲು ಕೇಸು ಅಂತ ಅವರು ದೂರು ದಾಖಲಿಸುವುದಕ್ಕೆ ನಿರಾಕರಿಸುತ್ತಾರೆ. ಇವನು ಕಂಪ್ಲೇಂಟ್‌ ರಿಜಿಸ್ಟರ್‌ ಆಗುವಂತೆ ನೋಡಿಕೊಳ್ಳುತ್ತಾನೆ. ಇಷ್ಟಕ್ಕೂ ಬಾವಿ ಕಳ್ಳತನವಾಗೋದಕ್ಕೆ ಸಾಧ್ಯವಾ? 

Advertisement

ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರ ನೋಡಬೇಕು. ಹೆಸರು ಕೇಳುತ್ತಿದ್ದಂತೆಯೇ, ಕಥೆ ಏನಿರಬಹುದು ಎಂಬ ಊಹೆ ಬರುವುದು ಸಹಜ. ಸಂಶಯವೇ ಬೇಡ. ಭ್ರಷ್ಟಾಚಾರದ ಬಗ್ಗೆ, ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ ತಾಂಡವವಾಡುತ್ತಿರುವ ಲಂಚಾವತಾರದ ಬಗ್ಗೆ ಈ ಚಿತ್ರ ಸುತ್ತುತ್ತದೆ. ಇಲ್ಲೊಬ್ಬ ನಾಯಕನಿಗೆ, ಲಂಚ ಕೊಡುವುದಾಗಲೀ, ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದಾಗಲೀ ಇಷ್ಟವಿಲ್ಲ.

ಆದರೆ, ಅದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಸರಿ, ಅಲೆಯ ವಿರುದ್ಧ ಈಜುವುದು ಕಷ್ಟ ಎಂದು ಅಲೆಯ ಜೊತೆಗೆ ಸೇರಿಕೊಳ್ಳುತ್ತಾನೆ. ಒಂದು ಬಾವಿ ಕಟ್ಟಿಸುವುದಕ್ಕೆ ಅನುಮತಿ ಬೇಕು ಎಂದು ಸಾವಿರಾರು ರೂಪಾಯಿ ಲಂಚ ಕೊಡುತ್ತಾನೆ. ಹಾಗೆ ಕೊಟ್ಟ ಲಂಚವನ್ನೇ ಅಸ್ತ್ರವಾಗಿಸಿಕೊಂಡು, ಇಡೀ ವ್ಯವಸ್ಥೆಯ ವಿರುದ್ಧ ಸಮರ ಸಾರುತ್ತಾನೆ. ಈ ಸಮರದಲ್ಲಿ ಶಾಸಕನಿಂದ ಪ್ರಾರಂಭಿಸಿ, ಸರ್ಕಾರದ ವಿವಿಧ ವಿಭಾಗಗಳ ಅಧಿಕಾರಿಗಳನು ಬೇಟೆಯಾಡುತ್ತಾನೆ.

ಇಲ್ಲಿ ಬಾವಿ ಕಳೆದ್ಹೋಗಿದೆ ಎನ್ನುವುದನ್ನು ವಿಡಂಬನಾತ್ಮಕವಾಗಿ ಹೇಳಲಾಗಿದೆ. ದೇವರ ಕೆಲಸವಾಗಬೇಕಿದ್ದ ಸರ್ಕಾರಿ ಕೆಲಸವು ಲಂಚಕೋರತನದಿಂದ ಎಷ್ಟೆಲ್ಲಾ ಹದಗೆಟ್ಟಿ ಹೋಗಿದೆ ಎಂಬುದನ್ನು ಹಲವು ಘಟನೆಗಳ ಮೂಲಕ ಹೇಳಲಾಗಿದೆ. ಹಾಗೆ ನೋಡಿದರೆ, ಈ ಕಥೆ ಹೊಸದೇನಲ್ಲ. “ಬಾವಿ ಕಳೆದುಹೋಗಿದೆ’ ತರಹದ ಕಥೆಗಳು ಬೇರೆ ಭಾಷೆಗಳಲ್ಲಿ ಸಿನಿಮಾ ಆಗಿ, ನಾಟಕಗಳಾಗಿ ಬಂದಿದೆ. ಕನ್ನಡ ಕಿರುತೆರೆಗೂ ಇದು ಹೊಸದಲ್ಲ.

ಕನ್ನಡ ಹಿರಿತೆರೆಯಲ್ಲಿ ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗುತ್ತಿದೆ. ಕಥೆ ಕೇಳುವುದಕ್ಕೆ ಸ್ವಾರಸ್ಯಕರವಾಗಿದೆ. ಅದನ್ನು ಇನ್ನಷ್ಟು ಸಮರ್ಥವಾಗಿ ತೆರೆಯ ಮೇಲೆ ತಂದಿದ್ದರೆ, ಅದ್ಭುತ ವಿಡಂಬನಾತ್ಮಕ ಚಿತ್ರವಾಗುವ ಸಾಧ್ಯತೆ ಇತ್ತು. ಆದರೆ, ಸ್ವಲ್ಪ ನಿಧಾನವಾದ ನಿರೂಪಣೆಯಿಂದಾಗಿ ಕೆಲಸ ಕೆಡುತ್ತದೆ. ಹಾಗಂತ ನಿರ್ದೇಶಕ ರವೀಂದ್ರ ಬೇಡದ್ದನ್ನು ಹೇಳುವುದಾಗಲೀ, ಅವಶ್ಯಕವಿಲ್ಲದ್ದನ್ನು ತೋರಿಸುವುದಾಗಲೀ ಮಾಡುವುದಿಲ್ಲ. ಇಡೀ ಚಿತ್ರ ಎರಡು ಗಂಟೆ ಐದು ನಿಮಿಷಗಳಿಗೆಲ್ಲಾ ಮುಗಿದೇ ಹೋಗುತ್ತದೆ.

Advertisement

ಚಿತ್ರದ ಲೆಂಥ್‌ ಕಡಿಮೆ ಇದ್ದರೂ, ಹೇಳುವುದೆಲ್ಲಾ ನೇರಾನೇರಾ ಆದರೂ ಅದ್ಯಾಕೋ ನಿರೂಪಣೆ ಜಾಳುಜಾಳೆನಿಸುತ್ತದೆ. ಅದೇ ಕಾರಣಕ್ಕೆ ಚಿತ್ರದ ಆಶಯ, ಉದ್ದೇಶ ಚೆನ್ನಾಗಿದ್ದರೂ, ಏನೋ ಮಿಸ್‌ ಹೊಡೆಯುತ್ತಿರುವಂತೆ ಅನಿಸುವುದು ಹೌದು. ಆ ನಿಟ್ಟಿನಲ್ಲಿ ಚಿತ್ರತಂಡ ಇನ್ನಷ್ಟು ನಿಗಾವಹಿಸಬೇಕಿತ್ತು. ಅದರಲ್ಲೂ ಪೊಲೀಸ್‌ ಸ್ಟೇಷನ್‌ ದೃಶ್ಯಗಳೂ ಸೇರಿದಂತೆ ಇನ್ನಷ್ಟು ದೃಶ್ಯಗಳಿಗೆ ಕತ್ತರಿ ಹಾಕದ್ದಿರೆ, ಚಿತ್ರಕ್ಕೆ ಇನ್ನಷ್ಟು ವೇಗ ಸಿಗುತಿತ್ತೇನೋ? 

ಆದರೂ ಮೊದಲ ಚಿತ್ರದಲ್ಲಿ ಒಂದು ಬೇರೆ ತರಹದ ಪ್ರಯತ್ನ ಮಾಡಿರುವ ನಿರ್ದೇಶಕರಿಗೆ ಬೆನ್ನು ತಟ್ಟಬೇಕು. ರಂಗಾಯಣ ರಘು, ರಾಜು ತಾಳೀಕೋಟೆ, ರವಿಶಂಕರ್‌ ಗೌಡ, ಸಂಯುಕ್ತಾ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಎಲ್ಲರೂ ತಮಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಮೇಶ್‌ ಬಣಕಾರ್‌ ಒಮ್ಮೊಮ್ಮೆ ಅಂಬರೀಶ್‌ ಅವರನ್ನು ನೆನಪಿಸುತ್ತಾರೆ. ಆಶೀಶ್‌ ವಿದ್ಯಾರ್ಥಿ ಒಂದೇ ಹಾಡಿಗೆ ಮಾಯವಾಗುತ್ತಾರೆ. “ಮಠ’ ಗುರುಪ್ರಸಾದ್‌ ಅವರ ಸಂಭಾಷಣೆ ಅಲ್ಲಲ್ಲಿ ಚುರುಕು ಮುಟ್ಟಿಸುತ್ತದೆ. ಇನ್ನು ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳ ಕಾಡುತ್ತವೆ.

ಚಿತ್ರ: ಸರ್ಕಾರಿ ಕೆಲಸ ದೇವರ ಕೆಲಸ
ನಿರ್ಮಾಣ: ಅಶ್ವಿ‌ನಿ ರಾಮ್‌ಪ್ರಸಾದ್‌
ನಿರ್ದೇಶನ: ರವೀಂದ್ರ
ತಾರಾಗಣ: ರವಿಶಂಕರ್‌ ಗೌಡ, ಸಂಯುಕ್ತ ಹೊರನಾಡು, ರಂಗಾಯಣ ರಘು, ರಾಜು ತಾಳೀಕೋಟೆ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next