Advertisement

ಶೀಘ್ರವೇ ಮುಂಬೈ ಸರಣಿ ಸ್ಫೋಟದ ಹಿಂದಿನ ಅಸಲಿ ಕಥೆ, ನೆರವು ಕೊಟ್ಟವರ ವಿವರ ಬಹಿರಂಗ: ಮೋದಿ

10:36 AM Oct 18, 2019 | Nagendra Trasi |

ಮಹಾರಾಷ್ಟ್ರ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಕಟವರ್ತಿ ಇಕ್ಬಾಲ್ ಮೆಮೋನ್ ಅಲಿಯಾಸ್ ಮಿರ್ಚಿಯ ವ್ಯವಹಾರ ನಡೆಸುತ್ತಿದ್ದವರು ಶರದ್ ಪವಾರ್ ನೇತೃತ್ವದ ಎನ್ ಸಿಪಿ ನಾಯಕ, ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್. ಇದಕ್ಕಾಗಿಯೇ ಇ.ಡಿ ಸಮನ್ಸ್ ಜಾರಿ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ಅಕೋಲಾದಲ್ಲಿ ಹೇಳಿದರು.

Advertisement

ಅಷ್ಟೇ ಅಲ್ಲ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿಗಳು ಪರಾರಿಯಾಗಲು ನೆರವು ಕೊಟ್ಟು, ಶತ್ರು ನೆಲದಲ್ಲಿ ಆಶ್ರಯ ಪಡೆಯಲು ಅವಕಾಶ ಕಲ್ಪಿಸಿಕೊಟ್ಟವರು ಯಾರು ಎಂಬುದು ಶೀಘ್ರದಲ್ಲಿಯೇ ಬಹಿರಂಗವಾಗಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಟೈಗರ್ ಮೆಮೋನ್ ಮತ್ತು ಇನ್ನಿತರ ಪ್ರಮುಖ ಆರೋಪಿಗಳು ಪಾಕಿಸ್ತಾನಕ್ಕೆ ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಶರದ್ ಪವಾರ್ ನೇತೃತ್ವದ ಸರಕಾರ ಆಡಳಿತದಲ್ಲಿತ್ತು, ಆದರೆ ಭೂಗತ ಪಾತಕಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಪರಾರಿಯಾಗಲು ಅವಕಾಶ ನೀಡಿತ್ತು ಎಂಬ ವಿಪಕ್ಷಗಳ ಆರೋಪವನ್ನು ಪವಾರ್ ಮತ್ತು ಪಕ್ಷದ ಶಾಸಕರು ನಿರಾಕರಿಸಿದ್ದರು ಎಂದು ಮೋದಿ ಆರೋಪಿಸಿದರು.

ಯಾರ ಹೆಸರನ್ನೂ ಉಲ್ಲೇಖಿಸದೇ ವಾಗ್ದಾಳಿ ನಡೆಸಿದ ಅವರು, ನಿಮಗೆ ಮಹಾರಾಷ್ಟ್ರ ಅದರಲ್ಲಿಯೂ ಮುಖ್ಯವಾಗಿ ಮುಂಬೈಯ ರೈಲುಗಳಲ್ಲಿ, ಬಸ್, ಕಟ್ಟಡಗಳಲ್ಲಿ ಸಂಭವಿಸಿದ ಸರಣಿ ಸ್ಫೋಟದ ಬಗ್ಗೆ ನೆನಪಿದೆಯಾ? ಆದರೆ ಸ್ಫೋಟದ ರೂವಾರಿಗಳು ಪರಾರಿಯಾಗಿ ಶತ್ರು ದೇಶದ ನೆಲದಲ್ಲಿ ಆಶ್ರಯ ಪಡೆದುಕೊಂಡಿರುವುದಾಗಿ ಹೇಳಿದರು.

ಇದು ಹೇಗೆ ಸಂಭವಿಸಿತು ಎಂಬುದನ್ನು ಜನ ಪ್ರಶ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿಗಳು ಪರಾರಿಯಾಗಲು ಯಾರು ನೆರವು ನೀಡಿದರು, ಸಂಚುಕೋರರು ಮತ್ತು ಇವರ ನಡುವಿನ ಸಂಬಂಧ ಏನು, ವ್ಯವಹಾರಗಳು ಏನು ಎಂಬುದು ಹೊಸ ಅಧ್ಯಾಯದಲ್ಲಿ ಬಹಿರಂಗಗೊಳ್ಳಲಿದೆ ಎಂದು ಶರದ್ ಪವಾರ್ ಹಾಗೂ ಎನ್ ಸಿಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next