Advertisement
ಕ್ರಿಕೆಟ್ ಆಟ ಪ್ರಸ್ತುತ ವಿಶ್ವದ ಪ್ರಾಮುಖ್ಯ ಆಟಗಳಲ್ಲಿ ಒಂದು. ಎಲ್ಲ ವಯೋಮಾನದವರನ್ನು ಆಕರ್ಷಿಸುತ್ತಿರುವ ಈ ಕ್ರೀಡೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳು ಮಂಗಳೂರಿನಲ್ಲೂ ಆಯೋಜನೆಗೊಂಡರೆ ನಗರ ಅಂತಾರಾಷ್ಟ್ರೀಯವಾಗಿ ಇನ್ನಷ್ಟು ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರವಾಸೋದ್ಯಮಕ್ಕೂ ಹೆಚ್ಚಿನ ಅನುಕೂಲವಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮಂಗಳೂರು ನಗರಕ್ಕೆ ಬೇಕಾಗಿದೆ. ಪಿಲಿಕುಳ, ಕೆಂಜಾರು, ಸುರತ್ಕಲ್ ಸೇರಿದಂತೆ ಮಂಗಳೂರು ನಗರದ ಹೊರವಲಯದಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಅವಶ್ಯ ಜಾಗ ಹೊಂದಿಸಲು ಅವಕಾಶವಿದೆ. ಸುಂದರ ಪ್ರಕೃತಿ ಸೌಂದರ್ಯವೂ ಇಲ್ಲಿದೆ.
Related Articles
ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ 1999ರಲ್ಲಿ ಮಂಗಳೂರಿನಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನವನ್ನು ನಿರ್ಮಿಸುವ ಪ್ರಸ್ತಾವವನ್ನು ದ.ಕ. ಜಿಲ್ಲಾಡಳಿತ ಮುಂದಿರಿಸಿತ್ತು. 15 ಎಕ್ರೆ ಜಾಗವನ್ನು ಜಿಲ್ಲಾಡಳಿತ ನೀಡಿದರೆ ಮೈದಾನ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿತ್ತು. ಪ್ರಸ್ತಾಪ ಮುಂದಿರಿಸಿ 20 ವರ್ಷಗಳಾಗಿವೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಕುರಿತಂತೆ ಒಂದಷ್ಟು ಪ್ರಯತ್ನಗಳು ನಡೆದರೂ ಸಾಕಾರ ರೂಪ ಪಡೆಯಲಿಲ್ಲ.
Advertisement
2002ರಲ್ಲಿ ಪಿಲಿಕುಳದ ಪ್ರಸ್ತುತ ಇರುವ ಗಾಲ್ಫ್ ಮೈದಾನದಲ್ಲಿ ಕ್ರಿಕೆಟ್ ಸ್ಟೇಡಿಯಂ ಹಾಗೂ ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣದ ಪ್ರಸ್ತಾಪ ಕೇಳಿಬಂತು. ಗಾಲ್ಫ್ ಕ್ಲಬ್ 72 ಎಕ್ರೆ ಜಾಗವನ್ನು ಹೊಂದಿದೆ. ಇದನ್ನು ತಣ್ಣೀರುಬಾವಿಗೆ ವರ್ಗಾಯಿಸಿ ಈ ಜಾಗವನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಹಾಗೂ ಕ್ರೀಡಾ ಸಂಕೀರ್ಣಕ್ಕೆ ಬಳಸಲು ನಿರ್ಣಯಿಸಲಾಗಿತ್ತು. ಒಟ್ಟು 72 ಎಕ್ರೆ ಜಾಗದಲ್ಲಿ 30ರಿಂದ 35 ಎಕ್ರೆ ಜಾಗವನ್ನು ಕ್ರಿಕೆಟ್ ಸ್ಟೇಡಿಯಂಗೆ ಹಾಗೂ ಉಳಿದ ಜಾಗವನ್ನು ಕ್ರೀಡಾನಗರ ನಿರ್ಮಾಣಕ್ಕೆ ಬಳಸುವ ಬಗ್ಗೆಯೂ ಪ್ರಸ್ತಾವನೆಯಾಗಿತ್ತು. ಇವೆಲ್ಲವೂ ಪ್ರಸ್ತಾವನೆಗಳಾಗಿಯೇ ಉಳಿದವು ವಿನಾ ಕಾರ್ಯರೂಪಕ್ಕೆ ಇದು ಬರಲಿಲ್ಲ.
ಪಿಲಿಕುಳದ ಪ್ರಸ್ತಾವದ ನಡುವೆಯೇ ಇತರೆಡೆಗಳಲ್ಲೂ ಕ್ರಿಕೆಟ್ ಸ್ಟೇಡಿಯಂಗೆ ಸ್ಥಳ ಹುಡುಕಾಟ ನಡೆದಿತ್ತು. ಬೈಕಂಪಾಡಿ, ತಣ್ಣೀರುಬಾವಿ, ಬಜಪೆ ಸಮೀಪದ ಕೆಂಜಾರು, ಮಂಗಳೂರು ನಗರದ ಬೊಂದೇಲ್ ಪ್ರಸ್ತಾವನೆಯಾಯಿತು. ಬೊಂದೇಲ್ನಲ್ಲಿ 10 ಎಕ್ರೆ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಬಗ್ಗೆ ಪ್ರಸ್ತಾವನೆಯಾಗುತ್ತಿದೆ. 2015ರಲ್ಲಿ ಕರ್ನಾಟಕ ಕ್ರಿಕೆಟ್ ಆಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ದ.ಕ. ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಕೆಎಸ್‌ಸಿಎ ಪದಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಥಳ ಪರಿಶೀಲನೆಯೂ ನಡೆದಿತ್ತು. ಇದೆಲ್ಲದರ ನಡುವೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಪೂರಕವಾಗಿ ಕೆಂಜಾರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ಬಳಿ 30 ಎಕ್ರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್‌ಗೆ 30 ವರ್ಷಗಳ ಅವಧಿಗೆ ಲೀಸ್‌ಗೆ ನೀಡುವ ಬಗ್ಗೆಯೂ ಇನ್ನೊಂದು ಪ್ರಸ್ತಾವ ಕೇಳಿ ಬಂದಿತ್ತು.
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಬೇಕು ಎಂಬುದು ಕ್ರಿಕೆಟ್ ಪ್ರೇಮಿಗಳ ಬಹುಕಾಲದ ಹಂಬಲ. ಜಿಲ್ಲೆಯ ಪ್ರತಿಭೆ ಕೆ.ಎಲ್. ರಾಹುಲ್ ಅವರು ಪ್ರಸ್ತುತ ಭಾರತ ತಂಡದ ಪ್ರಧಾನ ಆಟಗಾರರಲ್ಲೋರ್ವರು ಮಾತ್ರವಲ್ಲದೆ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಮಿಂಚುತ್ತಿದ್ದಾರೆ. ಮುಂದುವರಿದ ಜಿಲ್ಲೆ ಎಂದು ಕರೆಯಿಸಿಕೊಳ್ಳುತ್ತಿರುವ ಮಂಗಳೂರು ನಗರದಲ್ಲಿ ಪ್ರಸ್ತುತ ರಣಜಿ ಪಂದ್ಯ ಆಯೋಜನೆಗೂ ಪೂರಕವಾದ ಮೈದಾನ ಸೌಲಭ್ಯ ಇಲ್ಲ. ಶಿವಮೊಗ್ಗ , ಹುಬ್ಬಳ್ಳಿ ಸೇರಿದಂತೆ ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ರಣಜಿ ಪಂದ್ಯಗಳು ಆಯೋಜನೆಗೊಳ್ಳುತ್ತಿವೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಭಾರತ ಮತ್ತು ಶ್ರೀಲಂಕಾದ ಎ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ಆಯೋಜನೆಗೊಂಡಿತ್ತು.
ಸಮಗ್ರ ಕ್ರೀಡಾ ಸಂಕೀರ್ಣಮಂಗಳೂರಿನಲ್ಲಿ ಸಮಗ್ರ ಕ್ರೀಡಾ ಸಂಕೀರ್ಣವೊಂದು ನಿರ್ಮಾಣಗೊಳ್ಳುವ ಆವಶ್ಯಕತೆ ಇದೆ. ಕ್ರೀಡಾ ಕ್ಷೇತ್ರಕ್ಕೆ ಆನೇಕ ಖ್ಯಾತನಾಮರನ್ನು ನೀಡಿದ ಖ್ಯಾತಿ ದ.ಕ. ಜಿಲ್ಲೆಗಿದೆ. ವಂದನಾ ರಾವ್, ವಂದನಾ ಶ್ಯಾನ್‌ಭಾಗ್, ಆನಂದ ಶೆಟ್ಟಿ , ಎಂ.ಆರ್. ಪೂವಮ್ಮ , ಸಹನಾ ಉಳ್ಳಾಲ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ದಕ್ಷಿಣ ಕನ್ನಡ, ಮಂಗಳೂರು ನೀಡಿದೆ. ಈಜು, ಫುಟ್ಬಾಲ್, ಕ್ರಿಕೆಟ್, ಅಥ್ಲೆಟಿಕ್ಸ್ ಸಹಿತ ವಿವಿಧ ಕ್ರೀಡೆಗಳ ಕ್ರೀಡಾಪಟುಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಂಗಳಾ ಕ್ರೀಡಾಂಗಣವನ್ನು ಬಿಟ್ಟರೆ ಇಡೀ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಕ್ರೀಡಾಂಗಣವಿಲ್ಲ. ಪ್ರತಿಯೊಂದಕ್ಕೂ ಮಂಗಳಾ ಕ್ರೀಡಾಂಗಣವನ್ನೇ ನೆಚ್ಚಿಕೊಳ್ಳುವಂತಹ ಪರಿಸ್ಥಿತಿ ಇದೆ. ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿ ಹಲವು ತಿಂಗಳುಗಳಾಗಿವೆ. - ಕೇಶವ ಕುಂದರ್