Advertisement

ಪಶು ಆಸ್ಪತ್ರೆಯ ಸುಸಜ್ಜಿತ ಕಟ್ಟಡ ಸಿದ್ಧ; ಪ್ರಾಣಿಗಳಿಗೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ

05:37 PM Jan 22, 2022 | Team Udayavani |

ಕೊಡಿಯಾಲಬೈಲ್‌: ದಕ್ಷಿಣ ಕನ್ನಡ ಜಿಲ್ಲಾ ವಿವಿಧೋದ್ದೇಶ ಪಶು ಆಸ್ಪತ್ರೆ (ಪಾಲಿ ಕ್ಲಿನಿಕ್‌)ಯ ನೂತನ ಸುಸಜ್ಜಿತ ಕಟ್ಟಡವು ಪಶು ವೈದ್ಯಕೀಯ ಸೇವೆ ಒದಗಿಸಲು ಸಜ್ಜಾಗಿದೆ.

Advertisement

ಕೊಡಿಯಾಲಬೈಲ್‌ನಲ್ಲಿರುವ ಜಿಲ್ಲಾ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಕಚೇರಿ ಆವರಣದಲ್ಲಿ ಕೇಂದ್ರ ಸರಕಾರದ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಧಿ (ಆರ್‌ಐಡಿಎಫ್‌) ಯೋಜನೆಯ 2.2 ಕೋಟಿ ರೂ. ಅನುದಾನದಲ್ಲಿ ಈ ನೂತನ ಕಟ್ಟಡ ನಿರ್ಮಾಣಗೊಂಡಿದೆ.

ಈ ಆಸ್ಪತ್ರೆಯಲ್ಲಿ ಎಲ್ಲ ಪ್ರಾಣಿಗಳಿಗೆ ತಜ್ಞರಿಂದ ಪಶು ವೈದ್ಯಕೀಯ ಸೇವೆ ಲಭ್ಯವಿದೆ. ಮುಖ್ಯವಾಗಿ ದನ, ಎಮ್ಮೆ, ಆಡು, ಹಂದಿ, ಕೋಳಿ, ನಾಯಿ, ಬೆಕ್ಕು ಮತ್ತಿತರ ಪ್ರಾಣಿಗಳ ರಕ್ತ ತಪಾಸಣೆ, ಸ್ಕ್ಯಾನಿಂಗ್ , ಲ್ಯಾಬ್‌, ಅಗತ್ಯ ಬಿದ್ದರೆ ಶಸ್ತ್ರ ಚಿಕಿತ್ಸೆ ಮತ್ತಿತರ ಸೇವೆಗಳನ್ನು ಒದಗಿಸಲಾಗುತ್ತದೆ.

ವಿಶೇಷವಾಗಿ ತಾಲೂಕು, ಹೋಬಳಿ, ಗ್ರಾಮ ಮಟ್ಟದ ಪಶು ಆಸ್ಪತ್ರೆ ಮತ್ತು ಪ್ರಾಥಮಿಕ ಪಶು ಚಿಕಿತ್ಸಾಲಯಗಳಿಂದ ಹೆಚ್ಚುವರಿ ಚಿಕಿತ್ಸೆಗೆ ಶಿಫಾರಸು ಮಾಡುವ ಪ್ರಾಣಿಗಳಿಗೆ ಇಲ್ಲಿ ಹೊರ ರೋಗಿ ಚಿಕಿತ್ಸೆಯನ್ನು ಕೊಡಲಾಗುತ್ತದೆ. ಅಲ್ಲದೆ ಸ್ಥಳೀಯವಾಗಿ ಕರೆ ತರುವ ನಾಯಿ, ಬೆಕ್ಕುಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ.

ಪಶು ಸಂಜೀವಿನಿ ಆ್ಯಂಬುಲೆನ್ಸ್‌
ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿ ದನ, ಎಮ್ಮೆ, ಹಂದಿ, ಆಡು ಮತ್ತಿತರ ದೊಡ್ಡ ಪ್ರಾಣಿಗಳನ್ನು ಒಂದೆಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು ಕಷ್ಟ ಸಾಧ್ಯವಾದ್ದರಿಂದ ತಜ್ಞ ವೈದ್ಯರು ಅವುಗಳಿರುವ ಸ್ಥಳಕ್ಕೆ ತೆರಳಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲು ಅನು ಕೂಲವಾಗುವಂತೆ ಸುಸಜ್ಜಿತ ವಾಹನ ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಅನ್ನು ಈ ಆಸ್ಪತ್ರೆ ಹೊಂದಿದೆ.

Advertisement

ನೂತನ ಕಟ್ಟಡದಲ್ಲಿ ಸಣ್ಣ ಮತ್ತು ದೊಡ್ಡ ಪ್ರಾಣಿಗಳಿಗೆ ಚಿಕಿತ್ಸೆ ಒದಗಿಸಲು ಪ್ರತ್ಯೇಕವಾದ ವಿಶಾಲವಾದ ಸ್ಥಳಾವ ಕಾಶ ಇದೆ. ಈ ಕಟ್ಟಡದಲ್ಲಿ ಪಶು ವೈದ್ಯಕೀಯ ಚಿಕಿತ್ಸೆ ಮತ್ತು ಸೇವೆಯನ್ನು ಒದಗಿಸಲು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಅಧಿಕೃತ ಉದ್ಘಾಟನೆ ಇನ್ನಷ್ಟೇ ಆಗಬೇಕಾಗಿದೆ.

ತಜ್ಞ ವೈದ್ಯರ 2 ಹುದ್ದೆ ಖಾಲಿ
ಈ ಪಾಲಿ ಕ್ಲಿನಿಕ್‌ಗೆ ಓರ್ವ ಮುಖ್ಯ ತಜ್ಞ ಪಶು ವೈದ್ಯರು ಮತ್ತು ಇಬ್ಬರು ತಜ್ಞ ಪಶು ವೈದ್ಯರ ಹುದ್ದೆ ಮಂಜೂರಾಗಿದ್ದು, ಪ್ರಸ್ತುತ ಮುಖ್ಯ ತಜ್ಞ ಪಶು ವೈದ್ಯರು ಮಾತ್ರ ಇದ್ದಾರೆ. ತಜ್ಞ ಪಶು ವೈದ್ಯರ 2 ಹುದ್ದೆಗಳು ಖಾಲಿ ಇವೆ. ಎಕ್ಸ್‌ರೇ ಯಂತ್ರ ಕೆಟ್ಟು ಹೋಗಿದ್ದು, ಹೊಸ ಎಕ್ಸ್‌ರೇ ಯಂತ್ರ ಶೀಘ್ರ ಬರಲಿದೆ. ಸ್ಕ್ಯಾನಿಂಗ್ ಯಂತ್ರವೂ ಹಾಳಾಗಿದ್ದು, ಅದನ್ನು ದುರಸ್ತಿಗಾಗಿ ಗುರ್ಗಾಂವ್‌ಗೆ ಕಳುಹಿಸಲಾಗಿದ್ದು, ಶೀಘ್ರದಲ್ಲಿ ದುರಸ್ತಿಯಾಗಿ ಬರಲಿದೆ ಎಂದು ಆಸ್ಪತ್ರೆಯ ಉಪ ನಿರ್ದೇಶಕ ಡಾ| ರಾಮ ಪ್ರಕಾಶ್‌ ಡಿ. ಅವರು ಉದಯವಾಣಿ ಸುದಿನಕ್ಕೆ ಮಾಹಿತಿ ನೀಡಿದ್ದಾರೆ.

ಸೇವೆಗೆ ಸಿದ್ಧವಾಗಿದೆ
ಈ ಹೊಸ ಕಟ್ಟಡಕ್ಕೆ ನನ್ನಿಂದಲೇ ಶಿಲಾನ್ಯಾಸ ನೆರವೇರಿತ್ತು. ಇದೀಗ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸೇವೆಗೆ ಸಿದ್ಧವಾಗಿದೆ. ಹೈನುಗಾರರಿಗೆ, ಸಾಕು ಪ್ರಾಣಿ ಮತ್ತು ಇತರ ಪ್ರಾಣಿಗಳಿಗೆ ಸಂಬಂಧಿಸಿದ ವಿವಿಧ ಆರೋಗ್ಯ ಸೌಲಭ್ಯ ಒದಗಿಸಲು ಸರಕಾರ ಈ ಕಟ್ಟಡವನ್ನು ಒದಗಿಸಿದ್ದು, ಜಿಲ್ಲೆಯ ಜನರು ಇದರ ಪ್ರಯೋಜನ ಪಡೆಯಬೇಕು.
-ಡಿ. ವೇದವ್ಯಾಸ ಕಾಮತ್‌,
ಶಾಸಕರು, ಮಂಗಳೂರು ದಕ್ಷಿಣ

-ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next