Advertisement

ಪಶು ಇಲಾಖೆ ಆ್ಯಂಬುಲೆನ್ಸ್‌ ಚಾಲಕನ ಮೇಲೆ ಹಲ್ಲೆ; ಬೆಂಗಳೂರಿನ ಕಾರು ಚಾಲಕನಿಂದ ಕೃತ್ಯ

01:14 AM Mar 13, 2024 | Team Udayavani |

ಬೆಳ್ತಂಗಡಿ: ರಸ್ತೆಯಲ್ಲಿ ಸೈಡ್‌ ಕೊಡುವ ವಿಚಾರಕ್ಕೆ ಬೆಂಗಳೂರು ಮೂಲದ ಕಾರು ಚಾಲಕನೋರ್ವ ಪಶು ಇಲಾಖೆಯ ಆ್ಯಂಬುಲೆನ್ಸ್‌ ಅನ್ನು ತಡೆದು ಚಾಲಕನ ಮೇಲೆ ಹಿಗ್ಗಾ ಮುಗ್ಗ ಥಳಿಸಿದ ಘಟನೆ ಲಾೖಲ ಜಂಕ್ಷನ್‌ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ಹಲ್ಲೆಗೆ ಒಳಗಾಗಿರುವ ಆ್ಯಂಬುಲೆನ್ಸ್‌ ಚಾಲಕ ಕಡಬದ ತಾಲೂಕು ವಿದ್ಯಾನಗರ ನಿವಾಸಿ ಸುಬ್ರಹ್ಮಣ್ಯ ಗ್ರಾಮದ ರಕ್ಷಿತ್‌ (27) ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು, ಮಲ್ಲೇಶ್ವರದ ನಿವಾಸಿ ಶರತ್‌ ರಾಮಚಂದ್ರ (35) ಹಲ್ಲೆ ನಡೆಸಿದ ಆರೋಪಿ.

ಕೊಕ್ಕಡದ 1962 ಪಶುಸಂಗೋಪನ ಇಲಾಖೆಯ ಆ್ಯಂಬುಲೆನ್ಸ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ರಕ್ಷಿತ್‌ಗೆ ಬೆಳ್ತಂಗಡಿಯ ನೆರಿಯದಲ್ಲಿ ಅಗತ್ಯ ಸೇವೆ ಒದಗಿಸುವಂತೆ ಇಲಾಖೆಯ ಆ್ಯಪ್‌ ಮೂಲಕ ಸಂದೇಶ ಬಂದಿತ್ತು. ಅದರಂತೆ ಅಲ್ಲಿಗೆ ತೆರಳುತ್ತಿದ್ದರು. ಆಗ ಲಾೖಲದಲ್ಲಿ ದಾರಿಕೊಡುವ ವಿಚಾರದಲ್ಲಿ ಗಲಾಟೆ ಮಾಡಿ ಕಾರು ಚಾಲಕ ಆ್ಯಂಬುಲೆನ್ಸ್‌ ಅನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದನು.

ಹೆದ್ದಾರಿ ಮಧ್ಯೆ ಈ ಘಟನೆ ನಡೆದಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಪತಿ ಹಲ್ಲೆ ನಡೆಸುವ ವೇಳೆ ಜತೆಗಿದ್ದ ಪತ್ನಿ ಹಲ್ಲೆಗೆ ಪ್ರಚೋದಿಸಿರುವ ದೃಶ್ಯಗಳು ಮೊಬೈಲ್‌ ಕೆಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯನ್ನು ಗಮನಿಸಿದ ಸ್ಥಳೀಯರು ತತ್‌ಕ್ಷಣವೇ ಸ್ಥಳಕ್ಕೆ ಧಾವಿಸಿ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ರಕ್ಷಿತ್‌ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಬೆಳ್ತಂಗಡಿಯ 1962 ಆ್ಯಂಬುಲೆನ್ಸ್‌ ನವರಿಗೆ ರಜೆ ಇದ್ದು ಈ ದಿನ ಅಗತ್ಯ ಸೇವೆ ನೀಡುವ ಜವಾಬ್ದಾರಿ ಕಡಬದ ಆ್ಯಂಬುಲೆನ್ಸ್‌ನವರಿಗೆ ವಹಿಸಲಾಗಿತ್ತು. ನೆರಿಯಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

Advertisement

ಚಾಲಕನಿಗೆ ಹಲ್ಲೆ ನಡೆಸಿರುವುದಲ್ಲದೆ 3 ಸಾವಿರ ರೂ.ನಷ್ಟು ಹಾನಿ ಮಾಡಿ ರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶರತ್‌ ಪತ್ನಿಯೂ ಆ್ಯಂಬುಲೆನ್ಸ್‌ ಚಾಲಕ ತನ್ನ ಮೈಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ದೂರು ನೀಡಲು ಮುಂದಾಗಿರುವ ಘಟನೆಯೂ ಠಾಣೆಯಲ್ಲಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next