ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ಎರಡು ವರ್ಷಗಳ ಬಳಿಕ ರಾಜ್ಯ ವಿಧಾನಮಂಡಲ ಅಧಿವೇಶನ ಸೋಮವಾರ ಆರಂಭ ವಾಗಲಿದ್ದು ಆಡಳಿತ ಹಾಗೂ ವಿಪಕ್ಷ ಪ್ರತಿಷ್ಠೆಗೆ ಬೀಳದೆ ಕಲಾಪ ಅರ್ಥಪೂರ್ಣ ವಾಗಿಸಬೇಕಾಗಿದೆ. ಉತ್ತರ ಕರ್ನಾಟಕ ಭಾಗದ ಜನ ರೊಂದಿಗೆ ಸರಕಾರ ಇದೆ ಎಂಬ ವಿಶ್ವಾಸ ಮೂಡಿಸುವುದು. ಬೆಳಗಾವಿ ಗಡಿ ವಿಚಾರದಲ್ಲಿ ಆಗಾಗ್ಗೆ ಚಕಾರ, ಖ್ಯಾತೆ ತೆಗೆಯುವ ಎಂಇಎಸ್‌ಗೆ ಬೆಳಗಾವಿ ಅಖಂಡ ಕರ್ನಾಟಕದ್ದು ಎಂಬ ಸಂದೇಶ ರವಾನಿಸುವ ಸಲುವಾಗಿ ಉತ್ತರ ಕರ್ನಾಟಕ ಭಾಗದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ಅಧಿವೇಶನ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿತ್ತು.
ಕಳೆದ ಹದಿನೈದು ವರ್ಷಗಳಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸು ವುದರಿಂದ ಆ ಭಾಗದ ಜನರಿಗೆ ಸ್ವಲ್ಪ ಮಟ್ಟಿನ ಆಶಾಭಾವನೆ ಇದೆ ಯಾದರೂ ಒಂಬತ್ತು ಅಧಿವೇಶನ ನಡೆದರೂ ಬೇಡಿಕೆಗಳು ಹಾಗೆಯೇ ಉಳಿದಿವೆ ಎಂಬ ಅಸಮಾಧಾನವೂ ಇದೆ.
ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷ ಣೆ ಯಾಗಬೇಕು ಅದಕ್ಕಾಗಿ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕಳಸಾ ಬಂಡೂರಿ ನಾಲಾ ಕಾಮಗಾರಿ ಆರಂಭವಾಗಬೇಕು. ಡಾ| ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕು. ಒಟ್ಟಾರೆ ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಬೇಕು ಎಂಬುದು ಜನರ ಬೇಡಿಕೆ. ಈ ನಿಟ್ಟಿನಲ್ಲಿ ಹದಿನೈದು ವರ್ಷಗಳಲ್ಲಿ ಆಡಳಿತ ನಡೆಸಿದ ಪಕ್ಷಗಳು ಕಾರ್ಯೋನ್ಮುಖವಾಗಬೇಕಿತ್ತು. ಸುವರ್ಣಸೌಧದ ಅಧಿವೇಶನದಲ್ಲಿ ಆ ಬಗ್ಗೆ ಅರ್ಥಪೂರ್ಣ ಚರ್ಚೆ, ಸಮಸ್ಯೆಗಳಿಗೆ ತಾರ್ಕಿಕ ಅಂತ್ಯಕಾಣಿಸುವ ಕೆಲಸ ಆಗಬೇಕಿತ್ತು. ಆದರೆ ಅದು ಆಗಲಿಲ್ಲ. ಇದರಲ್ಲಿ ಆಡಳಿತ ಹಾಗೂ ವಿಪಕ್ಷಗಳ ಹೊಣೆಗಾರಿಕೆಯೂ ಇತ್ತು.
ಹೈದರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕವಾಯಿತು, ಮುಂಬಯಿ ಕರ್ನಾಟಕ ಕಿತ್ತೂರು ಕರ್ನಾಟಕ ವಾಯಿತು. ಆದರೆ ಅನುದಾನ ಮಾತ್ರ ಬರಲಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೊಸ ಅಧ್ಯಕ್ಷರು ಹಾಗೂ ಸಮಿತಿ ನೇಮಕಗೊಂಡಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಮೀಸಲಿ ಟ್ಟಿರುವ 1,500 ಕೋಟಿ ರೂ. ಹಣದಲ್ಲಿ ಇದುವರೆಗೂ 100 ಕೋಟಿ ರೂ. ಮಾತ್ರ ವೆಚ್ಚವಾಗಿದೆ. ಅದೂ ಮುಂದು ವರಿದ ಕಾಮಗಾರಿಗಳಿಗಾಗಿ ಮಾತ್ರ, ಉಳಿದ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕ್ರಿಯಾ ಯೋಜನೆಯೂ ತಯಾರಾಗಿಲ್ಲ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಇದೆ.
ಇದನ್ನೂ ಓದಿ:ಇಂಗ್ಲಿಷ್‌ನ ಪ್ರಸಿದ್ಧ ಪುಸ್ತಕವಾಗಿರುವ ಹ್ಯಾರಿ ಪಾಟರ್ ಪುಸ್ತಕಕ್ಕೆ 3.5 ಕೋಟಿ ರೂ!
ಹೀಗಾಗಿ ರಾಜ್ಯ ಸರಕಾರ ಕೇವಲ ಅಧಿವೇಶನ ನಡೆಸುವುದಷ್ಟೇ ಅಲ್ಲ. ಆ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕು. ಕೈಗೊಂಡ ನಿರ್ಧಾರಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಬದ್ಧತೆ ಮತ್ತು ಇಚ್ಚಾಶಕ್ತಿ ತೋರಬೇಕಾಗಿದೆ.
ಹತ್ತು ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸಗಳು ಆಗಲಿ. ಆಡಳಿತ ಹಾಗೂ ವಿಪಕ್ಷಗಳು ಪ್ರತಿಷ್ಠೆಗೆ ಬೀಳದೆ ಉತ್ತರ ಕರ್ನಾಟಕ ಭಾಗದಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಿದ ಉದ್ದೇಶ ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ. ಪ್ರತಿಭಟನೆ, ಧರಣಿಗೆ ಕಲಾಪ ಮೊಟಕಾಗುವ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಲಿ.