Advertisement

ಬೇಸಗೆ ಕಾಲ ಬಾವಿ ನಿರ್ಮಿಸುವವರಿಗೆ ಸಕಾಲ

04:08 PM Apr 13, 2017 | |

ಉಡುಪಿ: ಬೇಸಗೆ ಕಾಲ ಬಾವಿ ನಿರ್ಮಿಸುವವರಿಗೆ ಸಕಾಲ. ಈಗ ಎಲ್ಲವೂ ದಿಢೀರ್‌ ಆಗಬೇಕೆಂಬ ಇಚ್ಛೆ  ಇರುವುದರಿಂದ ಬಾವಿಗೂ ಇದನ್ನೇ ಅನ್ವಯಿಸುತ್ತೇವೆ. ಇಂತಹ ಬಯಕೆ ಬಂದಾಕ್ಷಣ ಬೇರೆ ಬೇರೆ ಪರ್ಯಾಯ ಮಾರ್ಗಗಳೂ ಸಿದ್ಧಗೊಳ್ಳುತ್ತವೆ. ಇದರಲ್ಲಿ ಒಂದು ಸಿಮೆಂಟ್‌ ರಿಂಗ್‌ನ ಬಾವಿ. 
ಶಿಲೆ ಕಲ್ಲಿನ ಬಾವಿ ನಿರ್ಮಿಸಬೇಕಾದರೆ ಖರ್ಚು ಹೆಚ್ಚಾಗುತ್ತದೆ, ಹೆಚ್ಚು ಸಮಯ ತಗಲುತ್ತದೆ. ಸಿಮೆಂಟ್‌ ರಿಂಗ್‌ ಬಾವಿ ಖರ್ಚು ಕಡಿಮೆ ಆಗುತ್ತದೆ, ಸಮಯ ಕಡಿಮೆ ಸಾಕಾಗುತ್ತದೆ. ಆದರೆ ದೀರ್ಘ‌ಕಾಲದ ಪರಿಣಾಮ…?

Advertisement

ಅಡ್ಡಪರಿಣಾಮ
“ಕಲ್ಲು ನೈಸರ್ಗಿಕವಾದ ಕಾರಣ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಸಿಮೆಂಟ್‌ ರಿಂಗ್‌ನಲ್ಲಿ ಸ್ಟೀಲ್‌ ಮತ್ತು ಸಿಮೆಂಟ್‌ ಇರುವುದರಿಂದ ಕೆಲವು ಬಾರಿ ನೀರು ಕೆಂಬಣ್ಣಕ್ಕೆ ತಿರುವುದಿದೆ. ಸಿಮೆಂಟ್‌, ಸ್ಟೀಲ್‌ ಪರಿಣಾಮ ನೀರಿನ ಮೇಲೂ ಆಗುತ್ತದೆ. ನೀರಿನ ಉಜೆ (ಒರತೆ) ಕಲ್ಲು ಕಟ್ಟಿದ ಬಾವಿಯಲ್ಲಿ ಹೆಚ್ಚಿಗೆ ಇದ್ದರೆ ರಿಂಗ್‌ ಬಾವಿಯಲ್ಲಿ ಒರತೆ ಕಡಿಮೆ ಇರುತ್ತದೆ. ಸ್ಟೀಲ್‌ಗೆ ತುಕ್ಕು ಹಿಡಿದು ಅದರ ಪರಿಣಾಮ ನೀರಿನ ಮೇಲೆ ಆಗುವುದೂ ಇದೆ. ಒಟ್ಟಿನಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಕಲ್ಲು ಕಟ್ಟಿದ ಬಾವಿ ಸೂಕ್ತ’ ಎಂಬ ಅಭಿಪ್ರಾಯ ಉಡುಪಿಯ ಅಸೋಸಿಯೇಶನ್‌ ಆಫ್ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ ಆ್ಯಂಡ್‌ ಆರ್ಕಿಟೆಕ್ಟ್ ಕಾರ್ಯದರ್ಶಿ ಗೋಪಾಲ ಭಟ್‌ ಅವರದು. 

ಕಾರ್ಮಿಕರ ಸಮಸ್ಯೆ, ವೆಚ್ಚದಾಯಕ, ಸಮಯ ಉಳಿತಾಯ ಎಂಬ ಕಾರಣಕ್ಕೆ ಸಿಮೆಂಟ್‌ ರಿಂಗ್‌ ಚಾಲ್ತಿಗೆ ಬಂದಿದೆ. ಆದರೆ ದೀರ್ಘ‌ ಕಾಲೀನ ದೃಷ್ಟಿಯಲ್ಲಿ ನೋಡುವುದಾದರೆ ಖರ್ಚು ಹೆಚ್ಚಾದರೂ ಕಲ್ಲಿನ ಬಾವಿ ನಿರ್ಮಿಸುವುದು ಸುರಕ್ಷಿತ. ನಗರದಲ್ಲಿ ಹತ್ತಿರ ಹತ್ತಿರ ಮನೆ, ಶೌಚಾಲಯ ಹತ್ತಿರ ಇರುವುದು (ಬಾವಿಗೂ ಶೌಚಾಲಯಕ್ಕೂ ಕನಿಷ್ಠ 30 ಅಡಿ ಅಂತರವಿರಬೇಕೆಂಬ ನಿಯಮ ಇರಿಸಿಕೊಂಡಿದ್ದಾರೆ), ತೆರೆದ ಚರಂಡಿಗಳ ನೀರು ಹರಿದು ಬಾವಿ ನೀರು ಹಾಳಾಗುವುದು ಇತ್ಯಾದಿ ಸಮಸ್ಯೆ ಗಳಿರುತ್ತದೆ. ಇಂತಹ ಸಮಸ್ಯೆಗಳು ಗ್ರಾಮಾಂತರ ಪ್ರದೇಶದಲ್ಲಿರುವುದಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕಲ್ಲಿನ ಬಾವಿಯ ನೀರನ್ನು ಬಿಸಿ ಮಾಡದೆ ಹಾಗೆಯೇ ಕುಡಿಯುವಷ್ಟು ಯೋಗ್ಯವಾಗಿರುತ್ತದೆ. ಇದೊಂದು ಸಣ್ಣ ಲಾಭವಲ್ಲ. 

ಶುದ್ಧ ನೀರು
“ಪಾದೆ  ಕಲ್ಲಿನಿಂದ ಕಟ್ಟಿದ ಬಾವಿ ನೀರು ಶುದ್ಧವಾಗಿರುತ್ತದೆ, ತಿಳಿಯಾಗಿರುತ್ತದೆ. ಯಾವುದೇ ಕ್ರಿಮಿಕೀಟಗಳು ಇರುವುದಿಲ್ಲ ಎನ್ನುವುದು ನನ್ನ ಅನುಭವ’ ಎಂದು ಗುತ್ತಿಗೆದಾರರಾದ ಉಡುಪಿ ಬೈಲೂರಿನ ವಾದಿರಾಜ್‌ ಹೇಳುತ್ತಾರೆ. 

ಹಾನಿಯ ಅಧ್ಯಯನ ಅಗತ್ಯ
ಸಿಮೆಂಟ್‌ ರಿಂಗ್‌ ಬಾವಿಯ ನೀರಿನಿಂದ ಆಗುವ ದುಷ್ಪರಿಣಾಮಗಳ ಕುರಿತು ವೈಜ್ಞಾನಿಕ ಅಧ್ಯಯನ ಸರಿಯಾಗಿ ನಡೆದಿಲ್ಲ. ಈಗ ಕಾಣುವ ವಿವಿಧ ಕಾಯಿಲೆಗಳಿಗೂ ಸಿಮೆಂಟ್‌ ರಿಂಗ್‌ ಬಾವಿಯ ನೀರಿನ ಸೇವನೆಗೂ ಸಂಬಂಧವಿದೆಯೆ ಎಂದು ತಜ್ಞರು ಸಂಶೋಧನ ಅಧ್ಯಯನ ನಡೆಸುವುದು ಸೂಕ್ತ. ಇದು ವೈದ್ಯಕೀಯ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಜಂಟಿಯಾಗಿ ನಡೆಸಬೇಕಾದ ಅಧ್ಯಯನ. 

Advertisement

ಮುರಕಲ್ಲು ಇನ್ನೂ ಉತ್ತಮ
ಮುರಕಲ್ಲಿನ (ಕೆಂಪು ಕಲ್ಲು) ಬಾವಿ ಶ್ರೇಷ್ಠ. ಈಗ ಇದು ಕಾಣಸಿಗುವುದು ಬಲು ವಿರಳ. ಇದರ ಲಾಭವೆಂದರೆ ಮುರಕಲ್ಲಿನ ಮೂಲಕವೇ ನೀರು ಹರಿದು ಬರುತ್ತದೆ. ಶಿಲೆಕಲ್ಲಿನಲ್ಲಾದರೆ ಕಲ್ಲಿನ ಬದಿಯಿಂದ ನೀರು ಹರಿದು ಬರಬೇಕು ಎಂಬ ಅಭಿಪ್ರಾಯ ಮಣಿಪಾಲ ಎಂಐಟಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಾ| ನಾರಾಯಣ ಶೆಣೈ ಅವರದು. 

ವೈಜ್ಞಾನಿಕವಾಗಿ ಕೊಳವೆಬಾವಿಯ ನೀರು ಉತ್ತಮ ಎಂಬ ಅಭಿಪ್ರಾಯವಿದೆ. ಕಾರಣವೆಂದರೆ ಇದಕ್ಕೆ ಹೊರಗಿನ ಸಂಪರ್ಕವಿರುವುದಿಲ್ಲ. ಸರಕಾರದ ನಿಯಮದಲ್ಲಿ ಇದು “ಸುರಕ್ಷಿತ ಕುಡಿಯುವ ನೀರು’. ಸಂಪು ತಯಾರಿಸಿ ಮಳೆ ನೀರು ಸಂಗ್ರಹಿಸಿ ಬಳಸುವುದು ಒಂದರ್ಥದಲ್ಲಿ ಇದೇ ಕಲ್ಪನೆ. ತೆರೆದ ಬಾವಿ ಮಳೆ ನೀರಿನಿಂದ ತುಂಬಿಕೊಳ್ಳುತ್ತದೆ ಎನ್ನುವುದಾದರೆ ಕೊಳವೆಬಾವಿಗೆ ನೀರಿನ ಒರೆತ ಹೇಗೆ ಸಾಧ್ಯ ಎಂಬ ಕುತೂಹಲ ಬರುವುದು ಸಹಜ. 

ಕೊಳವೆ ಬಾವಿಯಲ್ಲಿಯೂ ನೀರಿನ ಕೊರತೆ
ಈಗೀಗ ಮನಬಂದಂತೆ ಕೊಳವೆಬಾವಿ ಕೊರೆದ ಕಾರಣ ಕೊಳವೆಬಾವಿಯಲ್ಲಿಯೂ ನೀರಿನ ಕೊರತೆ ಉಂಟಾಗುತ್ತಿದೆ. “ಯಾವುದೇ ಕೊಳವೆ ಬಾವಿಯಾದರೂ ಬಂಡೆಕಲ್ಲು ಕೊರೆಯಲೇಬೇಕು. ಅಲ್ಲಿಂದಲೇ ನೀರು ಬರುತ್ತದೆ. ನದಿಪಾತ್ರಗಳು, ಗುಡ್ಡಬೆಟ್ಟಗಳ ದೊಡ್ಡ ದೊಡ್ಡ ಬಂಡೆಗಳಲ್ಲಿರುವ ಬಿರುಕು, ಚಡಿಗಳಲ್ಲಿ ಮಳೆ ನೀರು ಇಂಗಿ ಭೂಗರ್ಭಕ್ಕೆ ಹೋಗಬೇಕು. ಅಲ್ಲಿಂದ ಕೊಳವೆ ಬಾವಿಗೆ ನೀರು ಪೂರೈಕೆಯಾಗಬೇಕು’ ಎನ್ನುತ್ತಾರೆ ಡಾ| ನಾರಾಯಣ ಶೆಣೈ ಅವರು.

ಬಜೆ ಅಣೆಕಟ್ಟು ನೀರಿನ ಮಟ್ಟ  ಮತ್ತಷ್ಟು ಕುಸಿತ
ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ  ನೀರಿನ ಮಟ್ಟ  ದಿನೇ ದಿನೇ ಕುಸಿಯುತ್ತಿದ್ದು, 11-4-2017ರಂದು 2.86 ಮೀ. ಇತ್ತು. ಕಳೆದ ವರ್ಷ ಇದೇ ದಿನ ಅಂದರೆ 11-4-2016ರಂದು 4.09 ಮೀ. ಇತ್ತು. ಅಂದರೆ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಯಾಗಿದೆ. 

ಸಿಹಿ ನೀರಿನ ಬಾವಿ…!
ತೆರೆದ ಬಾವಿಯ ಪಂಚಾಂಗವನ್ನು ಈಗ ಬಹುತೇಕರು ಸಿಮೆಂಟ್‌ನಿಂದಲೇ ತಯಾರಿಸುತ್ತಾರೆ. ತುಂಬಾ ಹಳೆಯ ಬಾವಿಗಳ ಪಂಚಾಂಗವನ್ನು ನೆಲ್ಲಿ ಮರ, ಹಂಗಾರು ಮರದಿಂದ ತಯಾರಿಸುತ್ತಿದ್ದರು. ಕೆಲವು ಬಾವಿಗಳ ನೀರು ಸಿಹಿ ಎನ್ನುವುದಿದೆ. ನೆಲ್ಲಿ ಮರದ ಪಂಚಾಂಗದ ಬಾವಿಯ ನೀರು ಬಹಳ ಸಿಹಿ. ಆಸಕ್ತರಿದ್ದರೆ ಕಾಸರಗೋಡು ಜಿಲ್ಲೆ ಅಡೂರು ಚರಗಂಡ ಅಮರಗಂಧಭವನದ ಸಂಜೀವ ರಾವ್‌ ಮನೆಯ ಬಾವಿ ನೀರಿನ ರುಚಿ ನೋಡಬಹುದು. ಇದು ಬಹಳ ಹಳೆಯ ಬಾವಿ, ನೆಲ್ಲಿ ಮರದ ಪಂಚಾಂಗದಲ್ಲಿ ಕಟ್ಟಲಾಗಿದೆ. ಸಾಧ್ಯವಾದಲ್ಲಿ ಇಂತಹ ಪ್ರಯೋಗಗಳನ್ನು ಇತರರೂ ಮಾಡಬಹುದು. 

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next