Advertisement

ಮನಸ್ಸು ಕಟ್ಟಿದರೆ ಮತ್ತೆ ಕಲ್ಯಾಣ: ಪಂಡಿತಾರಾಧ್ಯ ಶ್ರೀ

10:12 AM Aug 28, 2019 | Suhan S |

ಧಾರವಾಡ: ಮತ್ತೆ ಕಲ್ಯಾಣ ಅಂದರೆ ಬಸವ ಕಲ್ಯಾಣಕ್ಕೆ ಹೋಗುವುದಲ್ಲ. ನಮ್ಮ ಅಂತರಂಗದಲ್ಲಿ ಕಲ್ಯಾಣ ಕಾಣಬೇಕು. ಬಹಿರಂಗದಲ್ಲಿ ಕಲ್ಯಾಣವನ್ನು ಸೃಷ್ಟಿ ಮಾಡಬೇಕು ಎಂದು ಸಾಣೇಹಳ್ಳಿ ಶ್ರೀಮಠದ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

Advertisement

ಕವಿಸಂನಲ್ಲಿ ಸಹಮತ ವೇದಿಕೆಯಿಂದ ನಡೆದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಬಹಿರಂಗ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾನು ಮತ್ತು ನೀವು ಚೆನ್ನಾಗಿರಬೇಕು. ಇಬ್ಬರೂ ಚೆನ್ನಾಗಿದ್ದು ಬದುಕು ಹಸನು ಮಾಡಬೇಕು ಎಂದರು.

ಗುಡಿ-ಗುಂಡಾರ, ಚರ್ಚ್‌, ಮಸೀದಿಗಳನ್ನು ಕಟ್ಟುವ ಬದಲು ಮನುಷ್ಯರ ಮನಸ್ಸುಗಳನ್ನು ಕಟ್ಟಬೇಕಿದೆ. ಎಲ್ಲಿಯವರೆಗೂ ಮನಸ್ಸುಗಳನ್ನು ಕಟ್ಟುವ ಕಾರ್ಯದಲ್ಲಿ ನಾವು ಮುಂದಾಗುವುದಿಲ್ಲವೋ ಅಲ್ಲಿಯ ವರೆಗೆ ನಮ್ಮ ಕಲ್ಯಾಣವೂ ಆಗೋದಿಲ್ಲ, ಲೋಕ ಕಲ್ಯಾಣವು ಆಗೋದಿಲ್ಲ ಎಂದು ಹೇಳಿದರು.

ಶರಣರು ಯಾವ ಮಠ-ಮಂದಿರ ಕಟ್ಟದೇ ಜನರ ಮನಸ್ಸುಗಳನ್ನು ಹಾಗೂ ಹೃದಯಗಳನ್ನು ಕಟ್ಟಿದರು. ಇವತ್ತು ಕೂಡಾ ಆ ಕೆಲಸವನ್ನು ಒಬ್ಬರು ಮಾಡಿದರೆ ಸಾಲದು. ಎಲ್ಲರೂ ಮಾಡಬೇಕಿದೆ. ಈ ಮೂಲಕ ಅಂತರಂಗದ ಅವಲೋಕನ ಉಂಟಾಗಿ ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಕಲ್ಯಾಣ ಕಾಣಬೇಕಿದೆ ಎಂದರು.

ಕವಿವಿ ಬಸವ ಪೀಠದ ಸಂಯೋಜಕ ಡಾ| ಸಿ.ಎಂ. ಕುಂದಗೋಳ, ಕಲಬುರಗಿಯ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಡಾ| ಶಿವಗಂಗಾ ರುಮ್ಯ ಉಪನ್ಯಾಸ ನೀಡಿದರು. ರೆ.ಎಸ್‌.ಎಸ್‌. ಸಕ್ರಿ ಮಾತನಾಡಿದರು. ರಂಜಾನ್‌ ದರ್ಗಾ ಇದ್ದರು. ವಿ.ಎನ್‌. ಕೀರ್ತಿವತಿ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಬಸವರಾಜ ಮ್ಯಾಗೇರಿ ವಂದಿಸಿದರು. ನಂತರ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಂಡಿತು. ಇದಕ್ಕೂ ಮುನ್ನ ಕಲಾಭವನದಿಂದ ಸಾಮರಸ್ಯ ನಡಿಗೆ ಜರುಗಿತು.

Advertisement

12ನೇ ಶತಮಾನದಲ್ಲಿ ಧರ್ಮ-ಧರ್ಮ, ಜಾತಿ-ಜಾತಿ, ನಗರ-ಗ್ರಾಮೀಣ, ಗಂಡು-ಹೆಣ್ಣು, ದೇಶ-ದೇಶಗಳ ಮಧ್ಯೆ ಸಂಘರ್ಷವಿತ್ತು. ಆರ್ಥಿಕವಾಗಿಯೂ ಸಂಕಷ್ಟದ ಕಾಲವಿತ್ತು. ಅದೇ ಮಾದರಿಯಲ್ಲೂ ಈಗ ಸಮಾಜದಲ್ಲಿ ಸಂಘರ್ಷ ಶುರುವಾಗಿವೆ. ಕೆಲವು ಮಠಗಳು-ಧಾರ್ಮಿಕ ಕೇಂದ್ರಗಳು ದೇವರ ಹೆಸರಿನಲ್ಲಿ ಲೂಟಿ ಮಾಡುತ್ತಿವೆ. ದೇವರ ದುರ್ಬಳಕೆಯಾದ ಸಂದರ್ಭದಲ್ಲಿಯೇ ವಚನಕಾರರು ಹುಟ್ಟಿಕೊಂಡಿದ್ದು. ಇವತ್ತೂ ಮತ್ತೆ ಕಲ್ಯಾಣದ ಹೆಸರಿನಲ್ಲಿ ಧರ್ಮದ ಪರವಾಗಿ ಧ್ವನಿ ಎತ್ತುತ್ತಿದ್ದಾರೆ.•ಸಿದ್ದನಗೌಡ ಪಾಟೀಲ, ಚಿಂತಕ

12ನೇ ಶತಮಾನದ ಶರಣರ ಹಾಗೂ ಅವರ ಸಾಹಿತ್ಯವನ್ನು ಮತ್ತೆ ನೆನಪಿಗೆ ತರುವ ಉದ್ದೇಶದಿಂದ ಒಂದು ತಿಂಗಳು ಕಾಲ ಮತ್ತೆ ಕಲ್ಯಾಣದ ಹೆಸರಿನಲ್ಲಿ ಸಾಣೇಹಳ್ಳಿ ಸ್ವಾಮೀಜಿ ತಿರುಗಾಟ ನಡೆಸಿದ್ದು ಸಾಮಾನ್ಯವಲ್ಲ. ಈ ಮೂಲಕ ಜನರ ಬಳಿ ಬಂದು ಕಲುಷಿತ ಸಮಾಜವನ್ನು ತಿದ್ದಲು ಪ್ರಯತ್ನಿಸುತ್ತಿರುವುದು ಉಳಿದ ಮಠಾಧೀಶರಿಗೆ ಮಾದರಿ.•ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘಾ ಮಠ

ದಿನದಿಂದ ದಿನಕ್ಕೆ ಮಠ-ಮಂದಿರ, ಚರ್ಚ್‌ ಸೇರಿದಂತೆ ಮಸೀದಿಗಳು ನಿರ್ಮಾಣವಾಗುತ್ತಿವೆ. ಇಷ್ಟಾಗಿಯೂ ಧರ್ಮ-ಜಾತಿಗಳ ಮಧ್ಯೆ ಸಂಘರ್ಷ ಉಂಟಾಗುತ್ತಿದೆ. ಜಾತಿ ನೋಡಿ ಸೂರ್ಯ ಬೆಳಕು ನೀಡುವುದಿಲ್ಲ. ಧರ್ಮ ನೋಡಿ ಗಾಳಿ ಬೀಸುವುದಿಲ್ಲ. ಆದ್ದರಿಂದ ನಾವೇಕೆ ಜಾತಿ-ಧರ್ಮದ ಹೆಸರಿನಲ್ಲಿ ಬದುಕಬೇಕು?•ಎಸ್‌.ಎಸ್‌. ಪೀರಜಾದೆ, ಮುಸ್ಲಿಂ ಸಮುದಾಯದ ಮುಖಂಡ

ಲಿಂಗಾಯತ ಧರ್ಮದಲ್ಲಿ ವೇದಸಂಸ್ಕೃತಿ ಇಲ್ಲ. ಬಸವಣ್ಣನವರು ಮೃದು ಸ್ವಭಾವದವರು. ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನಮಾನ ನೀಡಿದವರು. ಅಂಥವರ ಬಾಯಿಂದ ‘ಚಾಂಡಲಗಿತ್ತಿ’ ಎನ್ನುವ ಶಬ್ದ ಬರಲಿಕ್ಕಿಲ್ಲ. ಇದು ಪ್ರಕ್ಷುಬ್ಧ ವಚನ. ಬಸವಣ್ಣನವರ ವಚನಗಳು ನೆಲ ಮೂಲದಿಂದ ಅರಳಿದಂಥವು. ಸಾಮಾನ್ಯರಿಗೂ ಅರ್ಥವಾಗುವಂತೆ ಇವೆ.•ಡಾ| ವೀರಣ್ಣ ರಾಜೂರು

Advertisement

Udayavani is now on Telegram. Click here to join our channel and stay updated with the latest news.

Next