Advertisement

ನಿವೃತ್ತ ಪೊಲೀಸರ ಕಲ್ಯಾಣ: 25 ಲ.ರೂ. ಬೇಡಿಕೆ ಸಲ್ಲಿಕೆ

09:15 PM Apr 02, 2019 | sudhir |

ಉಡುಪಿ: ಜಿಲ್ಲೆಯ ನಿವೃತ್ತ ಪೊಲೀಸ್‌ ಅಧಿಕಾರಿ/ಸಿಬಂದಿಯ ಕಲ್ಯಾಣ ಕಾರ್ಯಕ್ರಮಗಳಿಗಾಗಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ 25 ಲ.ರೂ. ಅನುದಾನ ನೀಡುವಂತೆ ಈಗಾಗಲೇ ಪೊಲೀಸ್‌ ಇಲಾಖೆಯ ಪ್ರಧಾನ ಕಚೇರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಎಸ್‌ಪಿ ನಿಶಾ ಜೇಮ್ಸ್‌ ತಿಳಿಸಿದ್ದಾರೆ.

Advertisement

ಉಡುಪಿ ಚಂದು ಮೈದಾನದ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ಜರಗಿದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನಿವೃತ್ತ ಪೊಲೀಸರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ. ದಿನಬಳಕೆಯ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುವ ಪೊಲೀಸ್‌ ಕ್ಯಾಂಟೀನ್‌ಗಳ ಸೌಲಭ್ಯ ನಿವೃತ್ತ ಪೊಲೀಸರಿಗೂ ದೊರೆಯುವಂತೆ ಮಾಡಲಾಗುವುದು. ನಿವೃತ್ತ ಪೊಲೀಸರಿಗೆ ಆರೋಗ್ಯ ತಪಾಸಣೆ, ಒತ್ತಡ ನಿವಾರಣಾ ಶಿಬಿರ ಆಯೋಜಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದರು.

ಎಲ್ಲ ಸೇವೆಗಳಿಗಿಂತ ಮಿಗಿಲು
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಉಪನಿರೀಕ್ಷಕ ಗೋಪಾಲಕೃಷ್ಣ ಗಾಣಿಗ ಅವರು ಮಾತನಾಡಿ, “ಪೊಲೀಸ್‌ ಸೇವೆ ಎಲ್ಲ ಸೇವೆಗಳಿಗಿಂತ ಮಿಗಿಲಾದುದು. ಪೊಲೀಸ್‌ ಇಲಾಖೆ ಯಲ್ಲಿ ಸೇವೆ ಸಲ್ಲಿಸಲು ಸಿಕ್ಕಿರುವ ಅವಕಾಶ ನಮ್ಮ ಪುಣ್ಯ. ಸಾರ್ವಜನಿಕರು ಠಾಣೆಗೆ ಬಂದಾಗ ಅವರ ದೂರುಗಳನ್ನು ಸಮಾಧಾನದಿಂದ ಆಲಿಸಿ ಕಾನೂನಾತ್ಮಕ ಸಹಾಯದ ಜತೆಗೆ ಮಾನವೀಯತೆಯ ಸೇವೆ ನೀಡುವುದು ನಮ್ಮ ಜವಾಬ್ದಾರಿ. ಗಡಿಯಲ್ಲಿ ಸೈನಿಕರು ಶತ್ರುಗಳಿಂದ ದೇಶ ರಕ್ಷಿಸಿದರೆ ದೇಶದೊಳಗಿನ ಶತ್ರುಗಳನ್ನು ನಿಭಾಯಿಸುವ ಜವಾಬ್ದಾರಿ ಪೊಲೀಸರದ್ದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ನಿವೃತ್ತ ಪೊಲೀಸರಿಗೆ ಆರೋಗ್ಯ ಯೋಜನೆಯಡಿ ನೀಡುವ ವೈದ್ಯಕೀಯ ಮೊತ್ತವನ್ನು ಈಗ ಇರುವ ಶೇ.12ರಿಂದ ಶೇ.50 ಕ್ಕಿಂತ ಹೆಚ್ಚು ಮಾಡಬೇಕು’ ಎಂದು ಹೇಳಿದರು.

ಎಎಸ್‌ಪಿ ಕೃಷ್ಣಕಾಂತ್‌ ಉಪಸ್ಥಿತ ರಿದ್ದರು. ಎಸ್‌ಪಿ ಕುಮಾರಚಂದ್ರ ವಂದಿಸಿದರು.

Advertisement

ಉಡುಪಿ ಸಿಎಸ್‌ಪಿ ಪೊಲೀಸ್‌ ಕಂಟ್ರೋಲ್‌ ರೂಂನ ಪಿಎಸ್‌ಐ ಬಿ.ಮನಮೋಹನ ರಾವ್‌ ಕಾರ್ಯಕ್ರಮ ನಿರ್ವಹಿಸಿದರು. ಡಿಎಆರ್‌ ಆರ್‌ಪಿಐ ಜಿ.ಆನಂದ ಕುಮಾರ್‌ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ನಿವೃತ್ತ ಪೊಲೀಸ್‌ ಉಪನಿರೀಕ್ಷಕ ಗೋಪಾಲಕೃಷ್ಣ ಅವರು ಪೊಲೀಸ್‌ ಧ್ವಜ ಅನಾವರಣಗೊಳಿಸಿದರು.

ಸಮರ್ಪಣಾ ಭಾವದ ಸೇವೆ
ಪೊಲೀಸ್‌ ಇಲಾಖೆ ಆಡಳಿತದ ಪ್ರಮುಖ ಯಂತ್ರ. ಶಾಂತಿಯು ಸಮಾಜ ನಿರ್ಮಾಣ ನಮ್ಮ ಪ್ರಮುಖ ಜವಾಬ್ದಾರಿ. ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರು ನೀಡುವ ಸಹಕಾರ ಕೂಡ ಮಹತ್ವದ್ದಾಗಿರುತ್ತದೆ. ಎಲ್ಲರೂ ಸಮರ್ಪಣಾ ಭಾವದಿಂದ ಕರ್ತವ್ಯ ನಿರ್ವಹಿಸಿ ಆರೋಗ್ಯವಂತ ಸಮಾಜಕ್ಕಾಗಿ ಶ್ರಮಿಸಬೇಕು.
-ನಿಶಾ ಜೇಮ್ಸ್‌ , ಉಡುಪಿ ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next