Advertisement

ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಕಲ್ಯಾಣ ಕರ್ನಾಟಕ: ಶಂಕರದೇವರು

06:23 PM Dec 26, 2023 | Team Udayavani |

ಕಾರಟಗಿ: ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಗತಿಸುತ್ತಿವೆ. ಆದರೆ ಇಲ್ಲಿ ಹೇಳಿಕೊಳ್ಳುವಂತ ಬದಲಾವಣೆ ಆಗಿಲ್ಲ. ರಾಜ್ಯದ ದಕ್ಷಿಣ ಕರ್ನಾಟಕ, ಮುಂಬೈ ಕರ್ನಾಟಕಕ್ಕೆ ಹೋಲಿಸಿದಾಗ ಈ ಭಾಗ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಇನ್ನು ಹಿಂದುಳಿದಿದೆ. ಸದ್ಯ ಕಲ್ಯಾಣ ಕರ್ನಾಟಕವೆಂದು ಹೆಸರು ಮಾತ್ರ ಬದಲಾಗಿದ್ದು ಹೊರತುಪಡಿಸಿದರೆ ಅಭಿವೃದ್ಧಿಯಲ್ಲಿ ಮಾತ್ರ ಕಲ್ಯಾಣ ಆಗುತ್ತಿಲ್ಲ ಎಂದು ಸಿಂಧನೂರಿನ ಸಾಹಿತಿ ಶಂಕರದೇವರು ಹಿರೇಮಠ ಹೇಳಿದರು.

Advertisement

ಪಟ್ಟಣದ ಸಿದ್ದಲಿಂಗನಗರದ ಸಿ.ಮಲ್ಲಿಕಾರ್ಜುನ ನಾಗಪ್ಪ ಪದವಿ ಮಹಾವಿದ್ಯಾಲಯದಲ್ಲಿ ಕಸಾಪ ತಾಲೂಕು ಘಟಕ ಕನ್ನಡ ಕಾರ್ತಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ “ಕಲ್ಯಾಣ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದು ಬಂದ ಹಾದಿ’ಎನ್ನುವ ವಿಷಯವನ್ನುದ್ದೇಶಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು 371ಜೆ ಕಲಂ ಜಾರಿಯಾಗಿದ್ದು, ಉದ್ಯೋಗ, ಅಭಿವೃದ್ಧಿಗೆ ವಿಶೇಷ ಅನುದಾನ ಸಿಕ್ಕರೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ಭಾಗದ ಸಚಿವರು, ಶಾಸಕರಾದಿಯಾಗಿ ಜನಪ್ರತಿನಿಧಿಗಳು, ಅದರಲ್ಲೂ ಯುವಕರು ಈ ಭಾಗದ ವಿಮೋಚನೆಗಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನವನ್ನು ಮರೆಯದೇ ಈ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ.

ದೇಶಕ್ಕೆ 1947ರಲ್ಲಿ ಕೊನೆ ಕೊನೆಗೆ ಅನಾಯಾಸವಾಗಿ ಸ್ವಾತಂತ್ರ್ಯ ಸಿಕ್ಕರೂ ಹೈದ್ರಾಬಾದ್‌ ಸಂಸ್ಥಾನಕ್ಕೆ ಮಾತ್ರ
ಸುಲಭವಾಗಿರಲಿಲ್ಲ. ನಿಜಾಮ್‌ ಕಪಿಮುಷ್ಠಿಯಿಂದ ವಿಮೋಚನೆಗೊಳ್ಳಲು ನಾವು ನಮ್ಮ ಆಸ್ತಿ, ಅಂತಸ್ತು ಕೊನೆಗೆ ನೂರಾರು, ಸಾವಿರಾರು ಹೋರಾಟಗಾರರು ಪ್ರಾಣಾರ್ಪಣೆಗೈಯಬೇಕಾಯಿತು. ಇದಕ್ಕೆ ಬೀದರ್‌ನ ಕುಗ್ರಾಮ ಗೋರ್ಟಾದಲ್ಲಿ ನಡೆದ ಸಾಮೂಹಿಕ ನರಮೇಧವೇ ನಮ್ಮ ರಕ್ತಸಿಕ್ತ ಹೋರಾಟಕ್ಕೆ ಅದ್ಭುತ ಸಾಕ್ಷಿಯಾಗಿದೆ.

ಹೈದ್ರಾಬಾದ್‌ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಲಿಕ್ಕಾಗಿ ನಮ್ಮವರುಗೈದ ತ್ಯಾಗ, ಬಲಿದಾನಕ್ಕೆ ಮಿತಿಯೇ ಇಲ್ಲ. ಇದಕ್ಕೆ ಅದ್ಭುತ ಸಾಕ್ಷಿ ಬೀದರ್‌ ಜಿಲ್ಲೆ ಗೋರ್ಟಾ ಗ್ರಾಮದಲ್ಲಿನ 200ಕ್ಕೂ ಹೆಚ್ಚು ಹೋರಾಟಗಾರರ ಮೇಲೆ ನಡೆದ ಸಾಮೂಹಿಕ ಹತ್ಯಾಕಾಂಡ ಮಾತ್ರ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೆಂದೂ ಮರೆಯಲಾಗದ್ದು. ಇದು ಕರ್ನಾಟಕದ ಜಲಿಯನ್‌ವಾಲಾಬಾಗ್‌ ಎಂದೇ ಇತಿಹಾಸದಲ್ಲಿ ದಾಖಲಾಗಿದೆ. ಈ ಹತ್ಯಾಕಾಂಡ ಸಹಿಸದ ಅಂದಿನ ಭಾರತ ಸರ್ಕಾರದ ಗೃಹ ಮಂತ್ರಿ ಸರ್ದಾರ ವಲ್ಲಭಬಾಯಿ ಪಟೇಲ್‌ರ ದಿಟ್ಟ ಹೋರಾಟ, ನಡೆಯಿಂದಾಗಿ ಮತ್ತು ಅವರು ನಡೆಸಿದ ಆಪರೇಶನ್‌ ಪೋಲೋ ಎನ್ನುವ ಪೊಲೀಸ್‌ ಕಾರ್ಯಾಚರಣೆ ಕಾರಣಕ್ಕೆ ಕೊನೆಗೂ ಈ ಭಾಗ ಭಾರತ ಒಕ್ಕೂಟ ಸೇರಿ ನಿಜಾಮ್‌ನಿಂದ ವಿಮೋಚನೆಗೊಂಡಿತು ಎಂದರು.

ನಂತರ ಕಸಾಪ ಕನಕಗಿರಿ ವಿಧಾನಸಭಾ ಘಟಕದ ಮಾಜಿ ಅಧ್ಯಕ್ಷ ಬಸವರಾಜ ರ್ಯಾವಳದ್‌, ಖಜಾನೆ ಇಲಾಖೆ ಪ್ರಭಾರಿ ಅಧಿಕಾರಿ ಹನುಮಂತಪ್ಪ ನಾಯಕ ತೊಂಡಿಹಾಳ, ಕೆಪಿ ಪೂರ್ಣಚಂದ್ರ ತೇಜಸ್ವಿ, ಸಾಹಿತ್ಯ ವೇದಿಕೆ ಅಧ್ಯಕ್ಷ ಶ್ರೀನಿವಾಸ ಕಟ್ಟಿಮನಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾರಾಯಣ ವೈದ್ಯ ಅಧ್ಯಕ್ಷೀಯ ಭಾಷಣ ಮಾಡಿದರು. ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಈಶ್ವರ ಹಲಗಿ, ಕಸಾಪ ಪ್ರಧಾನ ಕಾರ್ಯದರ್ಶಿ ಮಂಜುನಾಥ ಚಿಕೇನಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.

Advertisement

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಜಗದೀಶಪ್ಪ ಅವರಾದಿ, ಉಪನ್ಯಾಸಕರಾದ ಆರ್‌. ಮೃತ್ಯುಂಜಯ, ರುದ್ರೇಶ್‌ ಬೆಟಗೇರಿ, ನಾಗರಾಜ್‌ ಹುಡೇದ್‌, ಡಾ| ಉಮೇಶ್‌ ಗುರಿಕಾರ್‌, ವಿರುಪಾಕ್ಷೇಶ್ವರಸ್ವಾಮಿ, ಶಶಿಧರ ಪಟ್ಟಣಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next