ಕಾಳಗಿ: ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿ ಎಂದರೆ ಬಿಜೆಪಿ ಸರ್ಕಾರಕ್ಕೆ ಅಲರ್ಜಿ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಬಹಿರಂಗ ಚರ್ಚೆಗೆ ಬಂದರೆ ನಾನು ಮಾತನಾಡಲು ಸಿದ್ಧ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಸಂಸದರು ಹಾಗೂ ಶಾಸಕರಿಗೆ ಪಂತಾಹ್ವಾನ ನೀಡಿದರು.
ತಾಲೂಕಿನ ಕಣಸೂರ ಗ್ರಾಮದಲ್ಲಿ ಕೆಕೆಆರ್ ಡಿಬಿ ಯೋಜನೆ ಅಡಿಯಲ್ಲಿ 40ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರು ಕೋಣೆಗಳ ಕಟ್ಟಡ, ಕಲಗುರ್ತಿ ಗ್ರಾಮದಲ್ಲಿ 82.24ಲಕ್ಷ ರೂ. ವೆಚ್ಚದ ಜಲಜೀವನ ಯೋಜನೆ ಅಡಿಯಲ್ಲಿ ಮನೆಮನೆಗೆ ನಳದ ಮೂಲಕ ನೀರು ಒದಗಿಸುವ ಯೋಜನೆ ಕಾಮಗಾರಿ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯವು ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಅದರಲ್ಲೂ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಮೋಸಕ್ಕೆ ಒಳಗಾಗಿರುವುದು ಕಲಬುರಗಿ ಜಿಲ್ಲೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲೆಗೆ ಮಂಜೂರಾಗಿದ್ದ ಅನೇಕ ಯೋಜನೆಗಳನ್ನು ಕಿತ್ತುಕೊಂಡಿವೆ. ಆದರೆ ಇದನ್ನು ಪ್ರಶ್ನಿಸಬೇಕಾಗಿರುವ ಕಲಬುರಗಿ ಸಂಸದರು ಹಾಗೂ ಬಿಜೆಪಿ ಶಾಸಕರು ಮೌನವಾಗಿದ್ದಾರೆ ಎಂದು ಟೀಕಿಸಿದರು.
ಜಾತಿ, ಧರ್ಮಗಳ ಮಧ್ಯೆ ಜಗಳ ಹಚ್ಚುವುದು, ಧಾರ್ಮಿಕ ಭಾವನೆ ಕೆರಳಿಸುವ ಮೂಲಕ ಅಧಿಕಾರಕ್ಕೆ ಬರುವುದೇ ಬಿಜೆಪಿ ಅಜೆಂಡಾ. ಕೇಂದ್ರದಲ್ಲಿ ಬಿಜೆಪಿ ಇದೇ ಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ, ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿದೆ. ಎರಡೂವರೆ ವರ್ಷದ ಅಧಿಕಾರಾವಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ್ದೇ ಬಿಜೆಪಿ ಸಾಧನೆಯಾಗಿದೆ ಎಂದರು.
ಕಳೆದ ಐದು ವರ್ಷಗಳ ಹಿಂದೆ ನ.8ರಂದು ನೋಟ್ ಬ್ಯಾನ್ ಮಾಡಿದ ಮೋದಿ ಸರ್ಕಾರ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ನೋಟು ಅಮಾನ್ಯಿàಕರಣದಿಂದ ದೇಶದಲ್ಲಿ 45ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದೆ. ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿಸುವ ವಾಗ್ಧಾನ ನೀಡಿದ್ದ ಮೋದಿ ಸರ್ಕಾರ ತನ್ನ ಮಾತು ತಪ್ಪಿದೆ ಎಂದು ಆರೋಪಿಸಿದರು.
ನಾನು ಮೊದಲ ಬಾರಿ ಶಾಸಕನಾದಾಗ ಚಿತ್ತಾಪುರ ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಎಂದು ಆಗ ಹೈಕೋರ್ಟ್ ಹೇಳಿತ್ತು. ಅಂದಿನ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಶಾಲೆಬಿಟ್ಟ ಮಕ್ಕಳನ್ನ ಮತ್ತೆ ಶಾಲೆಗೆ ಕರೆತರಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಈಗ ಆ ಸಂಖ್ಯೆ ಗಣನೀಯವಾಗಿ ಇಳಿದಿದೆ ಎಂದರು.
ಮುಖಂಡರಾದ ಭೀಮಣ್ಣ ಸಾಲಿ, ಶಾಮರಾವ ಸಜ್ಜನ ಮಾತನಾಡಿದರು. ರಮೇಶ ಮರಗೊಳ, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಹಡಪದ, ಗ್ರಾಪಂ ಅಧ್ಯಕ್ಷೆ ಕಮಲಾಬಾಯಿ ಕಾಂತು ರಾಠೊಡ, ಸುನೀಲ ದೊಡ್ಡಮನಿ, ಶಿವರುದ್ರ ಭೀಣಿ, ಮನ್ಸೂರ ಪಟೇಲ್, ನಾಗರಾಜ ಸಜ್ಜನ, ಪ್ರವಿಣ ನಾಮದಾರ, ಚಂದ್ರಶೇಖರ ಕುಂಬಾರ, ನಾಗಣ್ಣ ಕಲಬುರಗಿ ಇನ್ನಿತರರು ಇದ್ದರು.