ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ನಿವಾರಣೆ, ಮಕ್ಕಳಿಗೆ ಶಿಕ್ಷಣ ನೀಡಲು ಸೌಲಭ್ಯ ಕಲ್ಪಿಸುವುದು, ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಮೂರು ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆದ ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆ ಹಾಗೂ ಒಂದು ಸಾವಿರ ಕೋಟಿ ರೂ. ಅಧಿಕ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ಕಲ್ಪಿಸಿ ಅಪೌಷ್ಟಿಕತೆ ನಿವಾರಣೆಗೆ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆ ಜತೆಗೆ ಪ್ರತಿಯೊಬ್ಬರೂ ಆರೋಗ್ಯವಂತರು ಆಗಿರುವಂತೆ ನೋಡಿಕೊಳ್ಳುವುದು ಸರಕಾರದ ಗುರಿ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಮುಂದಾಗಿದೆ. ಈ ಹಿಂದಿನ ಸರಕಾರಗಳು ಕೇವಲ 1,000 ಕೋಟಿ ರೂ. ಮೀಸಲಿಟ್ಟು, 500 ಕೋಟಿ ರೂ. ಖರ್ಚು ಮಾಡುತ್ತಿದ್ದರು. ಬಜೆಟ್‌ನಲ್ಲಿ ಈ ಬಾರಿ ಮೂರು ಸಾವಿರ ಕೋಟಿ ರೂ. ಇಡಲಾಗಿದೆ. ಕಳೆದ ಜನವರಿ ತಿಂಗಳಲ್ಲಿ ಸಂಪೂರ್ಣ ಅನುದಾನ ಬಿಡುಗಡೆ ಮಾಡಲಾಗಿದೆ. ಇದೇ ವರ್ಷ ಸಮಗ್ರ ಅನುದಾನ ಖರ್ಚು ಮಾಡಬೇಕಿದೆ. ಇನ್ನು ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಸಂಪೂರ್ಣವಾಗಿ ಕಲ್ಯಾಣ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದರು. ನಮ್ಮದು ರೈತ ಪರ ಸರಕಾರವಾಗಿದೆ. 33 ಲಕ್ಷ ರೈತರಿಗೆ ಸಾಲ ಕೊಡುವಂತಹ ವ್ಯವಸ್ಥೆ ಮಾಡಲಾಗಿದೆ. ರೈತ ಶಕ್ತಿ ಎಂದರು.
ನಂ-1ಸ್ಥಾನದ ಶಪಥ :
ದೇಶದಲ್ಲೇ ಕರ್ನಾಟಕವನ್ನು ನಂ-1ಸ್ಥಾನಕ್ಕೆ ಕೊಂಡೊಯ್ಯ ಲಾಗುವುದು. ಮುಂದಿನ ದಿನಗಳಲ್ಲಿ ದೇಶವೇ ಕರ್ನಾಟಕದತ್ತ ತಿರುಗಿ ನೋಡಬೇಕು. ಆ ರೀತಿ ರಾಜ್ಯವನ್ನು ಅಭಿವೃದ್ಧಿ ಗೊಳಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ನೆರವಿನಿಂದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ. ಬಡವರ ಜೀವನ ಮಟ್ಟ ಹೆಚ್ಚಾಗಬೇಕು. ಬಡವರ ಆದಾಯ ಹೆಚ್ಚಾಗಬೇಕು. ಆಗ ಮಾತ್ರ ರಾಜ್ಯ ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು