Advertisement

ಅಯೋಧ್ಯೆ ವೈದಿಕ ಪರಂಪರೆಯ ಪ್ರತೀಕವಾಗಲಿ

10:14 AM Nov 17, 2019 | mahesh |

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೇಜಾವರ ಶ್ರೀಗಳಂತಹ ಹಿರಿಯರ ಕನಸು. ಅಯೋಧ್ಯೆ ಎಂದರೆ ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆಯ ಪ್ರತೀಕವಾಗಲಿ ಎಂದು ಯೋಗಗುರು ಬಾಬಾ ರಾಮದೇವ್‌ ತಿಳಿಸಿದರು. ಉಡುಪಿಗೆ ಆಗಮಿಸಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಪಡೆದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಟಿಕನ್‌, ಮೆಕ್ಕಾದ ರೀತಿಯಲ್ಲಿ ರಾಮಮಂದಿರ ರೂಪುಗೊಳ್ಳಬೇಕು. ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ ಎಂಬುದು ನನ್ನ ಬಯಕೆ. ಅಯೋಧ್ಯೆ ಜ್ಞಾನ ತೀರ್ಥವಾಗಲಿ, ವಿದ್ಯಾಪರಂಪರೆಯ ಪ್ರತೀಕವಾಗಲಿ ಎಂದರು. ದೇಶದ ಅನೇಕ ಮಹಾಪುರುಷರ ಆಂದೋ ಲನದ ಫ‌ಲವಾಗಿ ಅಯೋಧ್ಯೆಯಲ್ಲಿ ಈ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲಾ ಮಹಾನುಭಾವರ ಒಳಗೊಳ್ಳುವಿಕೆಯಿಂದ ಟ್ರಸ್ಟ್‌ ನಿರ್ಮಾಣವಾಗಲಿ ಎಂದು ಅವರು ಹಾರೈಸಿದರು.

Advertisement

ಪ್ರಧಾನಿಯಿಂದ ಶಿಲಾನ್ಯಾಸವಾಗಲಿ
ರಾಮನವಮಿ ದಿನವೇ ರಾಮ ಮಂದಿರಕ್ಕೆ ಶಿಲಾನ್ಯಾಸವಾಗಲಿ. ಪ್ರಧಾನಿಯವರೇ ಶಿಲಾನ್ಯಾಸ ಮಾಡಲಿ. ಸರಕಾರವೇ ನೇರವಾಗಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ, ಆದರೆ ಪ್ರಧಾನಿ ಶಿಲಾನ್ಯಾಸ ಮಾಡಲು ಅಡ್ಡಿಯಿಲ್ಲ. ಪ್ರಧಾನಿ ಮೋದಿ ಹಿಂದೂ ಪರಂಪರೆಯ ಪ್ರತಿನಿಧಿಯಾಗಿ ಈ ಕೆಲಸ ಮಾಡಲಿ ಎಂದರು. ಮಸೀದಿಯೂ ನಿರ್ಮಾಣವಾಗಲಿ ಮಂದಿರದ 67 ಎಕರೆ ಭೂಮಿ ಹೊರತುಪಡಿಸಿ ಮಸೀದಿ ನಿರ್ಮಾಣವಾಗಲಿ. ಅಯೋಧ್ಯೆಯಲ್ಲಿ ಮಸೀದಿಯೂ ದಿವ್ಯವಾಗಿ ನಿರ್ಮಾಣ ಅಗಲಿ. ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಮರ ಡಿಎನ್‌ಎ ಒಂದೇ ಆಗಿದೆ ಎಂದು ರಾಮದೇವ್‌ ಅವರು ಹೇಳಿದರು.

ಸ್ವಚ್ಛ ಭಾರತ- ಸ್ವಚ್ಛ ವಿಶ್ವ
ಹತ್ತು ವರ್ಷಗಳ ಬಳಿಕ ದೇಶದಲ್ಲಿ ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಐದು ದಿನಗಳ ಯೋಗ ಶಿಬಿರವನ್ನು ನಡೆಸುತ್ತಿದ್ದೇನೆ. ನಾನು ನೇರವಾಗಿ ಹತ್ತು ಕೋಟಿ ಜನರಿಗೆ ಯೋಗವನ್ನು ತಲುಪಿಸಿದ್ದು, ನಮ್ಮ ಕಾರ್ಯಕರ್ತರು 20 ಕೋಟಿ ಜನರಿಗೆ ಯೋಗದ ಪರಿಚಯ ಮಾಡಿದ್ದಾರೆ. ಯೋಗದ ಮೂಲಕ ಸ್ವಚ್ಛ ಭಾರತ- ಸ್ವಚ್ಛ ವಿಶ್ವ ಗುರಿ ಇರಿಸಿಕೊಳ್ಳಲಾಗಿದೆ. ಯೋಗದಿಂದ ಇಡೀ ಜಗತ್ತನ್ನು ರೋಗಮುಕ್ತ, ಒತ್ತಡ ಮುಕ್ತ, ಹಿಂಸಾಮುಕ್ತ ಮಾಡುವುದು ಸಾಧ್ಯ. ವೈರಭಾವ ನಿರ್ಮೂಲನ ಮಾಡುವ ಯೋಗ ಭಯೋ ತ್ಪಾದನೆಗೂ ಪರಿಹಾರವಾಗಿದೆ ಎಂದರು.

ದಿನಕ್ಕೊಂದು ಕೆ.ಜಿ. ಇಳಿಕೆ ಸಾಧ್ಯ
ಐದು ದಿನಗಳ ಶಿಬಿರದಿಂದ 3ರಿಂದ 5 ಕೆ.ಜಿ. ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹೈಪರ್‌ಟೆನ್ಶನ್‌, ಬಿಪಿ, ಮಧುಮೇಹ, ಥೈರಾಯ್ಡ, ಡಿಪ್ರಶನ್‌ಗೆ ಇದು ರಾಮಬಾಣ. ಅಸಾಂಕ್ರಾಮಿಕ ರೋಗಗಳಿಗೆ ಅತಿ ಸೂಕ್ತವಾದ ಚಿಕಿತ್ಸೆಯಾಗಿದೆ. ವಿದ್ಯಾರ್ಥಿಗಳಿಗೆ ಫಿಟ್‌ನೆಸ್‌, ಮಿದುಳಿನ ಚುರುಕುತನ, ದುಶ್ಚಟ ನಿವಾರಣೆಗೂ ಪರಿಣಾಮಕಾರಿ. ಯೋಗಾಸನವೆಂದರೆ ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಜೀವನ ಪದ್ಧತಿ, ನಾಗರಿಕತೆಯಾಗಿದೆ ಎಂದು ರಾಮದೇವ್‌ ಹೇಳಿದರು.

ಪತಂಜಲಿ ಸಮಿತಿ ಪದಾಧಿಕಾರಿ ಗಳಾದ ಭವರ್‌ಲಾಲ್‌ ಆರ್ಯ, ಕರಂಬಳ್ಳಿ ಶಿವರಾಮ ಶೆಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ, ಸುಜಾತಾ ಮಾರ್ಲ, ಶ್ರೀಕೃಷ್ಣಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್‌ ಉಪಸ್ಥಿತರಿದ್ದರು.

Advertisement

ಇನ್ನೈದು ದಿನ ಉಡುಪಿಯಲ್ಲಿ ರಾಮದೇವ್‌ ಕೇಂದ್ರ ಕಚೇರಿ
ಸಾವಿರಾರು ಕೋಟಿ ರೂ. ವ್ಯವಹಾರ (ಹೋದ ವರ್ಷ 8,000 ಕೋ.ರೂ.) ನಡೆಸುವ ಹಿಂದಿನ ಚಾಲಕ ಶಕ್ತಿ ಯೋಗ ಗುರು ಬಾಬಾ ರಾಮದೇವ್‌ ಎಲ್ಲೆಲ್ಲಿ ಯೋಗ ಶಿಬಿರಗಳನ್ನು ನಡೆಸುತ್ತಾರೋ ಅಲ್ಲಿಗೆ ಅವರ ಕೇಂದ್ರ ಕಚೇರಿ ಸ್ಥಳಾಂತರಗೊಳ್ಳುತ್ತದೆ. ಇದರ ಜತೆಗೆ ಲಾಭದಾಯಕವಲ್ಲದೆ ನಡೆಸುವ ಟ್ರಸ್ಟ್‌ ಕಚೇರಿಯೂ ವರ್ಗಾವಣೆಗೊಳ್ಳುತ್ತದೆ. ನ. 16ರಿಂದ 20ರ ವರೆಗೆ ಉಡುಪಿಯಲ್ಲಿ ಯೋಗ ಶಿಬಿರ ನಡೆಯಲಿದ್ದು ಈ ಎಲ್ಲ ದಿನಗಳಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಸುವ ಕೇಂದ್ರ ಕಚೇರಿ ಇಲ್ಲಿಗೆ ವರ್ಗವಾಗುತ್ತದೆ. ಈ ಹಣಕಾಸು ವ್ಯವಹಾರ ನಡೆಸುವ ಕಂಪೆನಿಯಲ್ಲಿ ರಾಮದೇವ್‌ ಪದಾಧಿಕಾರಿಯಲ್ಲ, ಟ್ರಸ್ಟ್‌ನಲ್ಲಿ ಮಾತ್ರ ಪದಾಧಿಕಾರಿ ಎನ್ನುವುದೂ ಸತ್ಯ.

ನಿತ್ಯ ಬರವಣಿಗೆ
ಬೆಳಗ್ಗೆ ಬೇಗ 5 ಗಂಟೆಯಿಂದ 7.30ರ ವರೆಗೆ ಯೋಗ ತರಬೇತಿ ಶಿಬಿರ ನಡೆಸುವ ರಾಮ್‌ದೇವ್‌ ಇನ್ನುಳಿದ ಸಮಯದಲ್ಲಿ ಏನು ಮಾಡುತ್ತಾರೆಂಬ ಪ್ರಶ್ನೆ ಸಹಜವಾಗಿ ಕೆಲವರಿಗೆ ಮೂಡುತ್ತದೆ. ಎರಡು ದಿನ ಸಂಜೆಯ ಕಾರ್ಯಕ್ರಮವಿರುತ್ತದೆ. ಉಳಿದಂತೆ ಸುಮಾರು ಒಂದೂವರೆ ಗಂಟೆ ಕಾಲ ಅವರು ಬರೆಯುತ್ತಾರೆ. ಅವರು ಅನೇಕ ಪುಸ್ತಕಗಳನ್ನು ಬರೆದದ್ದು ಹೀಗೆಯೇ…

ಓವೈಸಿ 2ನೆಯ ಜಿನ್ನಾ!
ಅಸಾವುದ್ದೀನ್‌ ಓವೈಸಿ ಹಿಂದೂ ಮುಸ್ಲಿಮರಲ್ಲಿ ಸಂಘರ್ಷ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾನೆ. ಆಗಿಹೋದ ಸಂಘರ್ಷಗಳ ಬಗ್ಗೆ ಚಿಂತಿಸಿ ಫ‌ಲವಿಲ್ಲ, ಸೌಹಾರ್ದ ಮತ್ತು ಸಮಾನತೆ ನಮ್ಮ ಆದ್ಯತೆಯಾಗಲಿ. ಒವೈಸಿ ಎರಡನೇ ಜಿನ್ನಾ ಆಗಲು ಪ್ರಯತ್ನಿಸುತ್ತಿದ್ದಾನೆ. ಈ ಕಾರ್ಯದಲ್ಲಿ
ಯಶಸ್ವಿಯಾಗುವುದಿಲ್ಲ.
– ರಾಮದೇವ್‌

ಅಂ.ರಾ. ಯೋಗಾಸನ ಕ್ರೀಡಾ ಒಕ್ಕೂಟದ ಅಧ್ಯಕ್ಷರಾಗಿ ರಾಮದೇವ್‌
ಭಾರತ ಸರಕಾರ ಅಂತಾರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟವನ್ನು ಸ್ಥಾಪಿಸಿದ್ದು ಇದರ ಪ್ರಥಮ ಅಧ್ಯಕ್ಷರಾಗಿ ಬಾಬಾ ರಾಮ ದೇವ್‌ ಅವರನ್ನು ನೇಮಿಸಿದೆ. ಯೋಗವನ್ನು ಒಲಿಂಪಿಕ್‌ ಕ್ರೀಡೆ, ಕಾಮನ್‌ವೆಲ್ತ್‌ ಗೇಮ್ಸ್‌ಗಳವರೆಗೆ ಕೊಂಡೊಯ್ಯಲು ಪ್ರಯತ್ನಿಸಲಾಗುವುದು ಎಂದು ರಾಮದೇವ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next