Advertisement

ಉಳ್ಳಾಲ ಮೋಗವೀರಪಟ್ಣ ಬೀಚ್ಗೆ ಕೊಳಚೆ ನೀರಿನ ಸ್ವಾಗತ

11:06 PM Jun 28, 2019 | mahesh |

ಉಳ್ಳಾಲ: ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿರುವ ಉಳ್ಳಾಲದ ಮೊಗವೀರಪಟ್ಣ ಬೀಚ್ ಕಳೆದೆರಡು ವರ್ಷ ಗಳಿಂದ ಉಳ್ಳಾಲ ನಗರದ ತ್ಯಾಜ್ಯ ನೀರಿನ ಶೇಖರಣೆ ಕೇಂದ್ರವಾಗಿದ್ದು ಸ್ಥಳೀಯ ನಿವಾಸಿಗಳು, ಬೀಚ್ಗೆ ಆಗಮಿಸುವ ಪ್ರವಾಸಿಗರು ತೊಂದರೆ ಅನುಭವಿಸಿದ್ದರು.

Advertisement

ಕೊಳಚೆ ನೀರು ಮುಖ್ಯರಸ್ತೆಯಲ್ಲೇ ಹರಿದು ಮೊಗವೀರಪಟ್ಣ ಬೀಚ್‌ನ ಪ್ರಮುಖ ದ್ವಾರದ ರಸ್ತೆಯಲ್ಲೇ ಶೇಖರಣೆ ಯಾಗುತ್ತಿದ್ದು ಕೊಳಚೆ ನೀರಿನಿಂದ ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

ಉಳ್ಳಾಲ ಧಾರ್ಮಿಕ ಪ್ರವಾಸೋದ್ಯಮದೊಂದಿಗೆ ಬೀಚ್ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲೂ ಈ ವ್ಯಾಪ್ತಿಯ ಧಾರ್ಮಿಕ ಕೇಂದ್ರಗಳಿಗೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರೂ ಉಳ್ಳಾಲದ ಮೊಗವೀರಪಟ್ಣ ಬೀಚ್ಗೆ ಭೇಟಿ ನೀಡುತ್ತಾರೆ. ಆದರೆ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ನೆನೆಗುದಿಗೆ ಬಿದ್ದಿದ್ದರೆ, ಇನ್ನೊಂದೆಡೆ ಬೀಚ್ ಸೌಂದರ್ಯ ಕೆಡಿಸುವ ತ್ಯಾಜ್ಯ ವಿಲೇವಾರಿ, ತ್ಯಾಜ್ಯ ನೀರಿನ ಶೇಖರಣೆಗೆ ಟ್ಯಾಂಕ್‌ ನಿರ್ಮಿಸಿ ಬೀಚ್ ಬದಿಯಲ್ಲೇ ಕೊಳಚೆ ನೀರಿನ ಸಂಗ್ರಹಣೆ ಕೇಂದ್ರ ಮಾಡಲಾಗಿತ್ತು. ಈ ಬಾರಿ ಕೊಳಚೆ ನೀರು ಟ್ಯಾಂಕ್‌ಗೆ ಹರಿಯುತ್ತಿದ್ದ ಚರಂಡಿಯಲ್ಲಿ ಮಣ್ಣು ತುಂಬಿದ್ದರಿಂದ ಮುಖ್ಯರಸ್ತೆ, ಮೊಗವೀರಪಟ್ಣ ಬೀಚ್ ಸಂಪರ್ಕಿಸುವ ಮುಖ್ಯದ್ವಾರದಲ್ಲೇ ಶೇಖರಣೆಗೊಂಡು ಜನರು ಕೊಳಚೆ ನೀರಿನಲ್ಲೇ ನಡೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೊಳಚೆ ನೀರಿನ ಅರಿವು ಪ್ರವಾಸಿಗರಿಗಿಲ್ಲ
ಹೆಚ್ಚಾಗಿ ಬೀಚ್ಗೆ ಬರುವ ಪ್ರವಾಸಿರಿಗೆ ರಸ್ತೆಯ ಕೊಳಚೆ ನೀರಿನ ಬಗ್ಗೆ ಮಾಹಿತಿ ಇಲ್ಲ. ಮಳೆ ನೀರೆಂದು ಪ್ರವಾಸಿಗರು ತಿಳಿದಿದ್ದು ಇನ್ನು ಮಕ್ಕಳು ಆ ಕೊಳಚೆ ನೀರಲ್ಲಿ ಆಟವಾಡುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಹಲವಾರು ವರ್ಷಗಳಿಂದ ಸಂಜೆಯ ವೇಳೆಗೆ ಬೀಚ್ಗೆ ಬರುವುದು ಸಾಮಾನ್ಯ. ಆದರೆ ಕೊಳಚೆ ನೀರಿನಿಂದ ಸುತ್ತು ಬಳಸಿ ಪೊದೆ ದಾಟಿ ಬರುವಾಗ ಎರಡು ಬಾರಿ ಬಿದ್ದು ಗಾಯಗೊಂಡಿದ್ದೇನೆ ಎನ್ನುತ್ತಾರೆ ಮೊಗವೀರಪಟ್ಣದ ಹಿರಿಯರಾದ ವಿಟ್ಟಲ್ ಅವರು.

ಅವೈಜ್ಞಾನಿಕ ತ್ಯಾಜ್ಯ ಸಂಗ್ರಹಣೆ ಟ್ಯಾಂಕ್‌
ಲಕ್ಷಾಂತರ ರೂ. ಖರ್ಚು ಮಾಡಿ ಉಳ್ಳಾಲ ನಗರಸಭೆ ನಿರ್ಮಿಸಿರುವ ಕಾಂಕ್ರೀಟ್ ಟ್ಯಾಂಕ್‌ ತ್ಯಾಜ್ಯ ನೀರಿನಲ್ಲಿ ಈ ಹಿಂದೆಯೇ ಸಂಪೂರ್ಣ ಮುಳುಗಿದೆ.

Advertisement

ಟ್ಯಾಂಕ್‌ ನಿರ್ಮಾಣದ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಭೂಮಿಯೊಳಗಡೆ ಸೇರದೆ ಕಾಂಕ್ರಿಟ್‌ನಲ್ಲಿ ಶೇಖರಣೆಯಾಗಿದ್ದು, ನೀರು ಹೆಚ್ಚಾಗಿ ಟ್ಯಾಂಕ್‌ ಮುಳುಗಡೆಯಾಗಿದೆ. ಇದೀಗ ಟ್ಯಾಂಕ್‌ಗೂ ಹರಿಯದೇ ರಸ್ತೆಯೇ ತ್ಯಾಜ್ಯಗುಂಡಿಯಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದೆ. ಇನ್ನೊಂದೆಡೆ ಮಳೆ ನೀರಿನೊಂದಿಗೆ ತ್ಯಾಜ್ಯ ನೀರು ಸಮುದ್ರ ಸೇರುತ್ತಿದೆ. ಒಂದೆಡೆ ಸೊಳ್ಳೆ ಭೀತಿ, ಇನ್ನೊಂದೆಡೆ ತ್ಯಾಜ್ಯ ನೀರು ಸ್ಥಳೀಯ ಮನೆಗಳಿಗೆ ಮತ್ತು ಸಂಘದ ಕಟ್ಟಡಕ್ಕೆ ನುಗ್ಗುವ ಭೀತಿಯಲ್ಲಿದೆ.

ಶೌಚಾಲಯಗಳ ತ್ಯಾಜ್ಯವೂ ಚರಂಡಿಗೆ
ಮೊಗವೀರಪಟ್ಣಕ್ಕೆ ಹರಿಯುವ ತ್ಯಾಜ್ಯ ಮತ್ತು ಕೊಳಚೆ ನೀರಿನೊಂದಿಗೆ ಸ್ಥಳೀಯವಾಗಿ ಕಟ್ಟಡಗಳ ಶೌಚಾಲಯದ ಗುಂಡಿಗಳ ತ್ಯಾಜ್ಯವನ್ನು ಬಿಡಲಾಗುತ್ತಿದೆ. ನೀರಿನೊಂದಿಗೆ ತ್ಯಾಜ್ಯ ಈ ಪ್ರದೇಶದಲ್ಲಿ ಹರಿಯುತ್ತಿದ್ದು ಮಳೆಗಾಲದಲ್ಲಿ ಶೌಚಾಲಯದ ತ್ಯಾಜ್ಯಗಳನ್ನು ದೊಡ್ಡ ದೊಡ್ಡ ಕಟ್ಟಡಗಳು ಮತ್ತು ಮನೆಗಳಿಂದ ಚರಂಡಿಗಳಿಗೆ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜಂಕ್ಷನ್‌ನ ತ್ಯಾಜ್ಯ ನೀರು ಮೊಗವೀರಪಟ್ಣಕ್ಕೆ
ಉಳ್ಳಾಲ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದರೂ ಈವರೆಗೆ ಸಮರ್ಪಕ ಒಳಚರಂಡಿ ಯೋಜನೆ ಅಭಿವೃದ್ಧಿಗೊಂಡಿಲ್ಲ. ಹೆಚ್ಚುತ್ತಿರುವ ವಸತಿ ಸಂಕೀರ್ಣ, ಅಂಗಡಿ ಮುಗ್ಗಟ್ಟುಗಳು ಹೋಟೆಲ್ನ ತ್ಯಾಜ್ಯ ನೀರು ನೇರವಾಗಿ ಮೊಗವೀರಪಟ್ಣ ಬಳಿಯ ಬೀಚ್‌ನ ಖಾಲಿ ಪ್ರದೇಶಕ್ಕೆ ಹರಿದು ಶೇಖರಣೆಗೊಂಡಿದೆ. ಈ ಹಿಂದೆ ಸ್ಥಳೀಯ ಜೀವರಕ್ಷಕ ಈಜುಗಾರರ ಸಂಘದ ಹಿಂಬದಿಯಲ್ಲಿ ಕೊಳಚೆ ನೀರು ಶೇಖರಣೆಗೊಂಡರೆ ಈ ಬಾರಿ ಸಂಘದ ಎದುರು ಬದಿಯ ರಸ್ತೆಯೇ ತ್ಯಾಜ್ಯ ನೀರಿನ ಗುಂಡಿಯಾಗಿದೆ.

ಜಿಲ್ಲಾಧಿಕಾರಿಗಳ ಗಮನಕ್ಕೆ

ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲು ಕಾನೂನು ತೊಡಕು ಇರುವುದರಿಂದ ಸ್ಥಳೀಯ ತ್ಯಾಜ್ಯ ನೀರನ್ನು ಹರಿದು ಹೋಗುವ ಚರಂಡಿಗೆ ಬಿಡುತ್ತಿದ್ದಾರೆ. ಈ ಹಿಂದೆ ಇಲ್ಲಿ ಟ್ಯಾಂಕ್‌ ನಿರ್ಮಾಣ ಮಾಡಿ ನೀರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿತ್ತು ಮಳೆಗಾಲ ಆಗಿದ್ದರಿಂದ ಸಮಸ್ಯೆಯಿದೆ. ಈ ನೀರಿಗೆ ಸಂಬಂಧಿಸಿದಂತೆ ಟ್ರೀಟ್ಮೆಂಟ್ ಪ್ಲ್ಯಾಂಟ್ ಯೋಜನೆ ರೂಪಿಸಿದ್ದು ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು.
– ವಾಣಿ ವಿ.ಆಳ್ವ, ಮುಖ್ಯಾಧಿಕಾರಿ, ಉಳ್ಳಾಲ ನಗರ ಸಭೆ
ವಸಂತ ಕೊಣಾಜೆ
Advertisement

Udayavani is now on Telegram. Click here to join our channel and stay updated with the latest news.

Next