Advertisement
ಕನ್ನಡದ ಸಂಗೀತ ನಿರ್ದೇಶಕರು, ಗೀತರಚನೆಕಾರರು, ಗಾಯಕರು ಆಡಿಯೋ ಕಂಪೆನಿಗಳನ್ನು ಶುರು ಮಾಡುತ್ತಿರುವುದು ಬಹಳ ಸಂತೋಷದ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲೋ ಒಂದು ಕಡೆ ಇದು ಈಗಿರುವ ಆಡಿಯೋ ಕಂಪೆನಿಗಳನ್ನು ಬಗ್ಗು ಬಡಿಯುವುದಕ್ಕೆ ಹೀಗೆಲ್ಲಾ ಮಾಡಲಾಗುತ್ತಿದೆಯಾ ಎಂಬ ಸಂಶಯ ಬರುವುದು ಸಹಜ.
Related Articles
Advertisement
ಇನ್ನು ಅಗ್ರೀಮೆಂಟ್ ಮೂಲಕ ಒಂದು ಚಿತ್ರದ ಸಂಗೀತದ ಹಕ್ಕುಗಳನ್ನು ಆಡಿಯೋ ಸಂಸ್ಥೆಗಳು ಬರೆಸಿಕೊಳ್ಳುತ್ತಿರುವುದರಿಂದ, ತಂತ್ರಜ್ಞರು ಆಡಿಯೋ ಕಂಪೆನಿಗಳನ್ನು ಶುರು ಮಾಡುತ್ತಿದ್ದಾರೆ ಎಂಬ ವಿಷಯವನ್ನು ಅವರು ಒಪ್ಪುತ್ತಿಲ್ಲ. “ಇಲ್ಲೊಂದು ದೊಡ್ಡ ತಪ್ಪು ತಿಳವಳಿಕೆ ಇದೆ. ಅಗ್ರೀಮೆಂಟ್ ಮಾಡಿಸಿಕೊಳ್ಳುತ್ತಿರುವುದು ನಮ್ಮ ಸಂತೋಷಕ್ಕಲ್ಲ ಅಥವಾ ಹಣ ಮಾಡುವ ಉದ್ದೇಶದಿಂದಲೂ ಅಲ್ಲ. 1958ರ ಕಾಯ್ದೆಯ ಪ್ರಕಾರ ನಿರ್ಮಾಪಕರು ಮತ್ತು ಆಡಿಯೋ ಕಂಪೆನಿಗಳ ನಡುವೆ ಒಂದು ಅಗ್ರೀಮೆಂಟ್ ನಡೆಯುತಿತ್ತು.
ಈಗ 2012ರ ಕಾಯ್ದೆಯ ಪ್ರಕಾರ ನಿರ್ಮಾಪಕರು ಮೊದಲಿಗೆ ತಂತ್ರಜ್ಞರ ಹತ್ತಿರ, ಈ ಹಾಡನ್ನು ಈ ಚಿತ್ರಕ್ಕಾಗಿ ಬರೆದಿದ್ದೀನಿ, ಈ ಹಾಡನ್ನು ಈ ಚಿತ್ರಕ್ಕಾಗಿ ಸಂಯೋಜಿಸುತ್ತಿದ್ದೀನಿ ಎಂದು ಬರೆಸಿಕೊಂಡು ನಮಗೆ ಕೊಡಬೇಕು. ತಂತ್ರಜ್ಞರು ಬರೆದುಕೊಡುವುದಿಲ್ಲ ಎಂದರೆ ನಾವು ಆ ಚಿತ್ರದ ಹಕ್ಕುಗಳನ್ನು ಬಿಟ್ಟುಬಿಡುತ್ತೀವಿ. ಏಕೆಂದರೆ, ಇದು ಕಾನೂನು. ಕಾನೂನಿಗೆ ಎಲ್ಲರೂ ತಲೆಬಾಗಬೇಕು. ಹಾಗೆ ಬರೆದುಕೊಟ್ಟರೂ ಅದರಿಂದ ಯಾವುದೇ ಸಮಸ್ಯೆ ಇಲ್ಲ. ಅದಕ್ಕೂ ರಾಯಲ್ಟಿಗೂ ಯಾವುದೇ ಸಂಬಂಧವಿಲ್ಲ. ಅವರು ಬರೆದುಕೊಡಲಿ, ಬಿಡಲಿ … ರಾಯಲ್ಟಿ ಬರುತ್ತಲೇ ಇರುತ್ತದೆ. ಹಾಗಾಗಿ ರಾಯಲ್ಟಿಗೂ ಇದಕ್ಕೂ ಸಂಬಂಧವಿಲ್ಲ. ಇನ್ನು ಈ ತರಹ ಬರೆದುಕೊಡುವುದರಿಂದ ಏನೋ ಆಗುತ್ತದೆ ಎನ್ನುವುದು ತಪ್ಪು. ತಮಿಳುನಾಡಿನಲ್ಲಿ ತಂತ್ರಜ್ಞರು ಬರೆದುಕೊಡುತ್ತಿದ್ದಾರೆ, ಆಂಧ್ರದಲ್ಲಿ ಬರೆದುಕೊಡಲಾಗುತ್ತಿದೆ. ಅಷ್ಟೇ ಅಲ್ಲ, ಕನ್ನಡದಲ್ಲೇ ರವಿಚಂದ್ರನ್ ಬರೆದು ಕೊಟ್ಟಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲವೇ?’ ಎಂದು ಪ್ರಶ್ನಿಸುತ್ತಾರೆ ಅವರು.
ಆಡಿಯೋ ಕಂಪೆನಿಗಳು ಸರಿಯಾಗಿ ಲೆಕ್ಕ ಕೊಡುತ್ತಿಲ್ಲ ಮತ್ತು ಕಾಲರ್ ಟ್ಯೂನ್‌ಗಳು ಹಾಗೂ ಡೌನ್‌ಲೋಡ್‌ಗಳಿಂದ ಸಾಕಷ್ಟು ಹಣ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ ಮಾತನಾಡುವ ಅವರು, “ಡಿಜಿಟಲ್‌ನಿಂದ ತುಂಬಾ ದುಡ್ಡು ಬರುತ್ತಿದೆ ಎಂಬುದೆಲ್ಲಾ ಸುಳ್ಳು. ಹಾಗಾದರೆ, ಎಷ್ಟು ದುಡ್ಡು ಮಾಡಿದ್ದೀವಿ ಎಂದು ಯಾರಾದರೂ ತೋರಿಸಲಿ. ಹೋಗಲಿ, ನಿರ್ಮಾಪಕರಿಗೆ ನಷ್ಟವಾದಾಗ ಎಷ್ಟು ತಂತ್ರಜ್ಞರು ಅವರ ಜೊತೆಗೆ ನಿಲ್ಲುತ್ತಾರೆ? ತಂತ್ರಜ್ಞರು ತಮ್ಮ ಕೆಲಸಕ್ಕೆ ಸಂಭಾವನೆ ಪಡೆಯುತ್ತಾರೆ. ಯಾರೂ ಸಹ ಫ್ರೀಯಾಗಿ ಬರೆಯುವುದಿಲ್ಲ ಅಥವಾ ಸಂಗೀತ ಸಂಯೋಜಿಸುವುದಿಲ್ಲ. ಆದರೆ, ರಿಸ್ಕ್ನಲ್ಲಿರುವುದು ನಿರ್ಮಾಪಕರು ಮತ್ತು ಆಡಿಯೋ ಕಂಪೆನಿಗಳು ಮಾತ್ರ. ಆಡಿಯೋ ಹಕ್ಕುಗಳನ್ನು ಪಡೆದ ಚಿತ್ರಗಳೆಲ್ಲಾ ದುಡ್ಡು ಮಾಡುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ. ಲಾಸ್ ಆದಾಗ ಯಾರು ಕಟ್ಟಿಕೊಡುತ್ತಾರೆ? ಸಮಸ್ಯೆ ಎದುರಾಗುವುದು ನಿರ್ಮಾಪಕರು ಮತ್ತು ಆಡಿಯೋ ಕಂಪೆನಿಯವರಿಗೆ ಮಾತ್ರ.
ಇನ್ನು ಎಲ್ಲಾ ಗಾಯಕರು ಮತ್ತು ಸಂಗೀತ ನಿರ್ದೇಶಕರು ಕಾರ್ಯಕ್ರಮಗಳನ್ನು ಕೊಡುತ್ತಲೇ ಇರುತ್ತಾರೆ. ಅದಕ್ಕೆ ಆಡಿಯೋ ಕಂಪೆನಿಗಳಿಂದ ಅನುಮತಿ ಕೇಳಿರುತ್ತಾರಾ? ಹೋಗಲಿ ಅದರಿಂದ ಬಂದ ಲಾಭವನ್ನು ಕೊಡುತ್ತಾರಾ? ಆಡಿಯೋ ಸಂಸ್ಥೆಗಳು ಮಾತ್ರ ಬರುವ ಲಾಭದಲ್ಲಿ ಪಾಲು ಕೊಡಬೇಕು ಎಂದು ಬಯಸುವವರು, ನಿರ್ಮಾಪಕರು ಮತ್ತು ಆಡಿಯೋ ಕಂಪೆನಿಗಳ ನಷ್ಟದಲ್ಲೂ ಕೈಜೋಡಿಸಿದರೆ ಚೆನ್ನಾಗಿರುತ್ತದೆ. ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಆಡಿಯೋ ಕಂಪೆನಿಗಳು ಮುಚ್ಚಿಹೋಗಿವೆ. ಯಾಕೆ ಹಾಗಾಯ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಡಿಯೋ ಕಂಪೆನಿಗಳು ಮೋಸ ಮಾಡುತ್ತಿವೆ ಎಂದು ಜನರನ್ನು ಮೀಸ್‌ಲೀಡ್ ಮಾಡುವುದನ್ನು ನಿಲ್ಲಿಸಬೇಕು. ಈಗ ಹಲವರು ಆಡಿಯೋ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮುಂದೆ ಇಲ್ಲಿ ಎಷ್ಟು ಕಷ್ಟ ಎಂದು ಅವರಿಗೇ ಗೊತ್ತಾಗುತ್ತದೆ. ಮನೆಯಲ್ಲಿ ಅಡುಗೆ ಚೆನ್ನಾಗಿಲ್ಲ ಅಂತ ದೂರುತ್ತಲೇ ಇರುತ್ತಿರುತ್ತೀವಿ. ಒಮ್ಮೆ ನಾವೇ ಅಡುಗೆ ಮಾಡಿಕೊಂಡರೆ, ಅದರ ಕಷ್ಟ ಎಷ್ಟು ಎಂದು ಗೊತ್ತಾಗುತ್ತದೆ. ಅದಕ್ಕೇ ಹೇಳಿದ್ದು ಘೋಡಾ ಹೈ, ಮೈದಾನ್ ಹೈ ಅಂತ. ಇಲ್ಲಿಗೆ ಯಾರು ಬೇಕಾದರೂ ಬರಬಹುದು. ಬರುವವರಿಗೆ ಸ್ವಾಗತ, ಹೋಗುವವರಿಗೆ ನಮಸ್ಕಾರ’ ಎಂದು ಮಾತು ಮುಗಿಸುತ್ತಾರೆ ಅವರು.
– ಚೇತನ್ ನಾಡಿಗೇರ್