ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನ ಮುಂದೂಡಿರುವ ಚುನಾವಣಾ ಆಯೋಗದ ಕ್ರಮವನ್ನು ಬಿಜೆಪಿ ಸ್ವಾಗತಿಸಿದೆ. ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಚುನಾವಣಾ ಆಯೋಗವು ಉತ್ತಮ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಶಾಸಕರೇ ಹಗರಣದ ಸೂತ್ರಧಾರರಾಗಿದ್ದು, ಅವರ ಕೈವಾಡವಿದೆ. ಜಾಲಹಳ್ಳಿಯ ಫ್ಲ್ಯಾಟ್‌ನಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದು, ಕಾಂಗ್ರೆಸ್ ಅಕ್ರಮದಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ಹೇಳಿದರು.
ಹಣ, ಉಡುಗೊರೆಗಾಗಿ ತಂದಿದ್ದ ಸಾಕಷ್ಟು ವಸ್ತುಗಳು ಜಪ್ತಿಯಾಗಿವೆ. ಮತದಾರರ ಪಟ್ಟಿಗೆ ಹೆಚ್ಚುವರಿಯಾಗಿ ಸೇರ್ಪಡೆ ಬಗ್ಗೆ ತನಿಖೆ ನಡೆಸಬೇಕು. ರಾಜರಾಜೇಶ್ವರಿನಗರ ಮಾತ್ರವಲ್ಲದೇ ಎಲ್ಲೆಡೆ ಈ ರೀತಿ ನಡೆದಿರುವ ಸಾಧ್ಯತೆ
ಇದ್ದು, ಆಯೋಗ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪ್ರಜಾತಂತ್ರ ಉಳಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಿದೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಮತಪಟ್ಟಿಯನ್ನು ಮರು ಪರಿಶೀಲಿಸಬೇಕು. ಜೊತೆಗೆ ಹೆಚ್ಚುವರಿ ಮತದಾರರ ಪಟ್ಟಿ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಅಪರಾಧಿಗಳು ರಸ್ತೆಗಳಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಶಾಸಕ ಮುನಿರತ್ನ ಅವರನ್ನು ಬಂಧಿಸಬೇಕು. ಮತದಾರರ ಗುರುತಿನ ಚೀಟಿ ಪತ್ತೆಯಾದ ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಪತ್ರಿಕಾಗೋಷ್ಠಿ ನಡೆಸಿದ್ದರು ಎಂದರು.
ರಾಹುಲ್ ಗಾಂಧಿಯವರೇ ಮತದಾರರ ಗುರುತಿನ ಚೀಟಿ ತಯಾರಿಸುವ ಕಾರ್ಖಾನೆ ಹೊಂದಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಅಭ್ಯರ್ಥಿಯನ್ನು ನಿರಾಕರಿಸುವ ಮೂಲಕ ತಾವು ಪ್ರಾಮಾಣಿಕರೆಂದು ಗುರುತಿಸಿಕೊಳ್ಳುವಿರಾ. ಒಂದೊಮ್ಮೆ ನೀವು ಮುನಿರತ್ನ ಅವರನ್ನು ನಿರಾಕರಿಸಿದರೆ ನೀವು ಭಾರತೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ನಾವು ಒಪ್ಪಿಕೊಳ್ಳುತ್ತೇವೆ.
ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ