ಪಿರಿಯಾಪಟ್ಟಣ: ಚೀನಿಯರು ನಾವು ಏನೇ ಮಾಡಿದರೂ ತಪ್ಪು ಎನ್ನುತ್ತಾರೆ. ಹೀಗಿರುವಾಗ ತನ್ನ ಆ್ಯಪ್ ನಿಷೇಧಿಸಿರುವುದು ಅತಿಶಯೋಕ್ತಿಯಲ್ಲ ಎಂದು ಟಿಬೇಟಿಯನ್ ಧರ್ಮಗುರು ದಲೈಲಾಮಾ ತಿಳಿಸಿದರು. ತಾಲೂಕಿನ ಬೈಲುಕುಪ್ಪೆ ಟಿಬೇಟಿಯನ್ ನಿರಾಶ್ರಿತರ ಪ್ರದೇಶ ಸೆರಲಾಚಿ ಧರ್ಮಶಾಲೆಗೆ ಭೇಟಿ ನೀಡಿ ಮಾತನಾಡಿದರು.
ಚೀನಾದ ಮಾರುಕಟ್ಟೆಯಲ್ಲಿ ದಲೈಲಾಮಾ ಆ್ಯಪ್ ನಿಷೇಧಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಈ ಹಿಂದಿನಿಂದಲೂ ನಾವು ಏನೇ ಮಾಡಿದರೂ ಚೀನಾ ತಪ್ಪು$ ಎಂದೇ ಬಿಂಬಿಸುತ್ತಿದೆ. ಆ್ಯಪ್ ನಿಷೇಧಿಸಿರುವುದು ಅಂತಹ ವಿಶೇಷ ಎನಿಸುತ್ತಿಲ್ಲ ಬಿಡಿ ಎಂದರು.
ದೇಶದಲ್ಲಿ ಜಾರಿಯಾಗಿರುವ ಜಿಎಸ್‌ಟಿ ಕರ ಪದ್ಧತಿಯಿಂದ ಟಿಬೇಟಿಯನ್ ರ ಪ್ರಮುಖ ವ್ಯಾಪಾರವಾದ ಸ್ಪೆಟರ್ ವ್ಯಾಪಾರಕ್ಕೆ ತೊಂದರೆ ಬಗ್ಗೆ ಕೇಳಿದ ಪ್ರಶ್ನೆಗೆ, ಜಿಎಸ್‌ಟಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ನಿಗಧಿಯಾದ ದಿನಕ್ಕಿಂತ ಒಂದು ದಿನ ತಡವಾಗಿ 2 ವರ್ಷಗಳ ನಂತರ ಬೈಲುಕುಪ್ಪೆಗೆ ಆಗಮಿಸಿದ್ದಾರೆ. ಇಷ್ಟು ದಿನ ಹೆಲಿಕಾಪ್ಟರ್‌ನಲ್ಲಿ ಆಗಮಿಸುತಿದ್ದರು. ಈ ಬಾರಿ ಶಿವಮೊಗ್ಗದಿಂದ ಕಾರಿನ ಮೂಲಕ ಆಗಮಿಸಿದರು.
ಅದ್ಧೂರಿ ಸ್ವಾಗತ: ಕೊಡಗು ಮತ್ತು ಮೈಸೂರು ಜಿಲ್ಲೆಯನ್ನು ಬೇರ್ಪಡಿಸುವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕುಶಾಲನಗರ ಮತ್ತು ಕೊಪ್ಪ ಸೇತುವೆಯುದ್ದಕ್ಕು ನೂರಾರು ಟಿಬೇಟಿಯನ್ನರು ದಲೈಲಾಮಾರಿಗೆ ಅದ್ಧೂರಿ ಸ್ವಾಗತ ಕೋರಿದರು. ಸಾಂಪ್ರದಾಯದಂತೆ ಉಪವಿಭಾಗಾಧಿಕಾರಿ ಕೆ.ನಿತೀಶ್, ತಹಶೀಲ್ದಾರ್ ಜೆ.ಮಹೇಶ್ ಸ್ವಾಗತಕೋರಲು ಕಾದಿದ್ದರು.
ಸೇರಾಲಾಚಿಯಲ್ಲಿ ಪೂಜೆ: ಸೆರಲಾರ್ಚಿ ದೇವಾಲಯ ಪ್ರವೇಶ ಮಾಡಿದ ದಲೈಲಾಮ, ಅಲ್ಲಿಯ ಹಯಗ್ರೀವ ದೇವರಿಗೆ ಆರಂಭವಾದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಐಪಿಎಸ್ ಅಧಿಕಾರಿಗಳಾದ ಎಂ.ಎಸ್.ಮೊಹಮ್ಮದ್‌ಸುಜೀತ್, ಅರುಣಾಕ್ಷಿಗಿರಿ, ಡಿಸಿಪಿ ಮಲ್ಲಿಕ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇಂಡೋ ಟಿಬೇಟಿಯನ್ ಫ್ರೆಂಡ್‌ಶಿಫ್ ಸೊಸೈಟಿ ಅಧ್ಯಕ್ಷ ಬಿ.ವಿ.ಜವರೇಗೌಡ, ಜೆ.ಪಿ.ಅರಸ್, ಸತೀಶ್, ಸಾಹಿತಿ ಬಸವೇಗೌಡ ಇದ್ದರು.